ನವದೆಹಲಿ: ಸಾಮಾಜಿಕ ಮಾಧ್ಯಮದಲ್ಲಿ ದೇಶದ್ರೋಹದ ಹೇಳಿಕೆ ಪ್ರಕಟಿಸಿದ ಆರೋಪದಲ್ಲಿ ನಟಿ ಕಂಗನಾ ರನೌತ್ ವಿರುದ್ಧ ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಪೊಲೀಸರಿಗೆ ದೂರು ನೀಡಿದೆ.
ಐವೈಸಿ ರಾಷ್ಟ್ರೀಯ ಕಾರ್ಯದರ್ಶಿ ಅಮರೇಶ್ ರಂಜನ್ ಪಾಂಡೆ ಮತ್ತು ಸಂಚಾಲಕ ಅಂಬುಜ್ ದೀಕ್ಷಿತ್ ‘ಪಾರ್ಲಿಮೆಂಟ್ ಸ್ಟ್ರೀಟ್’ ಪೊಲೀಸ್ ಠಾಣೆಯಲ್ಲಿ ರನೌತ್ ವಿರುದ್ಧ ದೂರು ದಾಖಲಿಸಿದ್ದಾರೆ.
ಈ ಮಧ್ಯೆ, ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ ಅಧ್ಯಕ್ಷ ಹಾಗೂ ಶಿರೋಮಣಿ ಅಕಾಲಿ ದಳ ನಾಯಕ ಮಂಜಿನ್‌ದರ್ ಸಿಂಗ್ ಸಿರ್ಸಾ ಸಹ ಸಿಖ್ಖರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ರನೌತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರವು ರನೌತ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
‘ಆಕೆಯನ್ನು (ರನೌತ್) ಮೆಂಟಲ್ ಆಸ್ಪತ್ರೆ ಅಥವಾ ಜೈಲಿನಲ್ಲಿ ಇರಿಸಬೇಕು. ಇನ್‌ಸ್ಟಾಗ್ರಾಂನಲ್ಲಿ ಅವಹೇಳನಕಾರಿ ಹೇಳಿಕೆ ಪ್ರಕಟಿಸಿದ್ದಕ್ಕೆ ಆಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಹಿಸುತ್ತೇವೆ’ ಎಂದು ಸಿರ್ಸಾ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸರ್ಕಾರವು ಕಳೆದ ವರ್ಷ ರೂಪಿಸಿದ್ದ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಬೆಳಿಗ್ಗೆ ಘೋಷಿಸಿದ್ದರು. ಬಳಿಕ ಇನ್‌ಸ್ಟಾಗ್ರಾಂನಲ್ಲಿ ಸಂದೇಶ ಪ್ರಕಟಿಸಿದ್ದ ರನೌತ್, ಇದೊಂದು ಜಿಹಾದಿ ದೇಶ ಎಂದು ಉಲ್ಲೇಖಿಸಿದ್ದಲ್ಲದೆ, ಸರ್ವಾಧಿಕಾರವೇ ಪರಿಹಾರ ಎಂದಿದ್ದರು. ಈ ವಿಚಾರವನ್ನೂ ದೂರಿನ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.
‘ಕಂಗನಾ ರನೌತ್ ಖ್ಯಾತ ನಟಿಯಾಗಿದ್ದು, ಇನ್‌ಸ್ಟಾಗ್ರಾಂನಲ್ಲಿ 78 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಹೀಗಾಗಿ, ಅವರು ಉದ್ದೇಶಪೂರ್ವಕ, ಬೇಜವಾಬ್ದಾರಿಯಿಂದ ಪ್ರಕಟಿಸುವ ದೇಶದ್ರೋಹಿ ಸಂದೇಶಗಳು ದೇಶದ ಪ್ರಜಾಪ್ರಭುತ್ವದ ಬಗ್ಗೆ ದ್ವೇಷ, ತಿರಸ್ಕಾರ ಮತ್ತು ಅಸಮಾಧಾನವನ್ನು ಪ್ರಚೋದಿಸುವ ಸಾಮರ್ಥ್ಯವನ್ನು ಹೊಂದಿವೆ’ ಎಂದು ಯುವ ಕಾಂಗ್ರೆಸ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.