ಘಾಜಿಯಾಬಾದ್: ಸೇನೆಯ ಮಾಜಿ ಮುಖ್ಯಸ್ಥ, ಮಾಜಿ ಕೇಂದ್ರ ಸಚಿವ ವಿ.ಕೆ. ಸಿಂಗ್ ಅವರನ್ನು ಅವಹೇಳನ ಮಾಡಿರುವ ವಿಷಯ ಪ್ರಸಾರ ಮಾಡಿದ ಆರೋಪದಲ್ಲಿ ಯೂಟ್ಯೂಬ್ ಆಧಾರಿತ ಸುದ್ದಿ ಪೋರ್ಟಲ್‌ನ ಮಾಲೀಕರೊಬ್ಬರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ವಿ.ಕೆ. ಸಿಂಗ್ ವಿರುದ್ಧ ಸುಳ್ಳು ಹೇಳಿಕೆ ನೀಡಿರುವ ವ್ಯಾಪಾರಿ ಆನಂದ್ ಪ್ರಕಾಶ್ ಮತ್ತು ಇದನ್ನು ಪ್ರಸಾರ ಮಾಡಿರುವ ನ್ಯೂಸ್ ಪೋರ್ಟಲ್‌ನ ಮುಖ್ಯ ಸಂಪಾದಕ ರಣಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದ್ದು, ರಣಸಿಂಗ್ ಎಂಬಾತನನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ (ನಗರ) ರಾಜೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಬಿಎನ್‌ಎಸ್ ಸೆಕ್ಷನ್ 356 (ಮಾನನಷ್ಟ), 352 (ಶಾಂತಿ ಭಂಗ ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), 61 (2) (ಕ್ರಿಮಿನಲ್ ಪಿತೂರಿ) ಮತ್ತು ಐ.ಟಿ ಕಾಯ್ದೆಯ ನಿಬಂಧನೆಗಳ ಅಡಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಘಾಜಿಯಾಬಾದ್‌ನ ಮಾಜಿ ಸಂಸದರೂ ಆದ ವಿ.ಕೆ. ಸಿಂಗ್ ಅವರು ದೂರು ನೀಡಿದ್ದರು.
ಸಿಂಗ್ ಅವರು ತಾವು ವಾಸ ಇರುವ ನಿವಾಸದ ಬಾಡಿಗೆ ಪಾವತಿಸಿಲ್ಲವೆಂಬ ಆರೋಪವನ್ನು ಪರಿಶೀಲಿಸದೆ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಗಿದೆ. ಈ ಆರೋಪ ಆಧಾರ ರಹಿತವೆಂದಿರುವ ಸಿಂಗ್, ಇದರಿಂದ ತಮ್ಮ ವರ್ಚಸ್ಸು ಮತ್ತು ಗೌರವಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕುಂದುಂಟಾಗಿದೆ. ಇದು ಕ್ಷಮಿಸಲಾರದ ತಪ್ಪು. ತಮ್ಮ ಭಾವನೆಗಳಿಗೆ ಧಕ್ಕೆ ತಂದಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.