ADVERTISEMENT

ವೇಗದ ಬೈಕ್ ಚಾಲನೆ: ಯುಟ್ಯೂಬರ್‌ TTF ವಾಸನ್ ಚಾಲನಾ ಪರವಾನಗಿ 10 ವರ್ಷ ಅಮಾನತು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಅಕ್ಟೋಬರ್ 2023, 10:05 IST
Last Updated 7 ಅಕ್ಟೋಬರ್ 2023, 10:05 IST
<div class="paragraphs"><p>ಟಿಟಿಎಫ್‌ ವಾಸನ್‌</p></div>

ಟಿಟಿಎಫ್‌ ವಾಸನ್‌

   

ttf_vasan_official ಇನ್‌ಸ್ಟಾಗ್ರಾಂ ಖಾತೆಯ ಚಿತ್ರ

ಚೆನ್ನೈ: ಅತಿಯಾದ ವೇಗ, ಅಜಾಗರೂಕತೆ ಹಾಗೂ ಅಪಾಯಕಾರಿಯಾಗಿ ಬೈಕ್ ಓಡಿಸಿದ ಆರೋಪದ ಮೇಲೆ ತಮಿಳಿನ ಯುಟ್ಯೂಬರ್ ಟಿಟಿಎಫ್‌ ವಾಸನ್‌ ಅವರ ಬೈಕ್ ಚಾಲನಾ ಪರವಾನಗಿಯನ್ನು ಮುಂದಿನ ಹತ್ತು ವರ್ಷಗಳ (2033ರ ಅ. 5) ಅವಧಿಗೆ ಸಾರಿಗೆ ಇಲಾಖೆ ಅಮಾನತು ಮಾಡಿದೆ.

ADVERTISEMENT

ಚೆನ್ನೈ–ವೆಲ್ಲೋರ್ ಹೆದ್ದಾರಿಯ ಕಾಂಚಿಪುರಂ ಬಳಿ ವಾಸನ್ ಅವರು ಅಜಾಗರೂಕತೆಯಿಂದ ಬೈಕ್ ಚಾಲನೆ ಮಾಡಿದ್ದರ ಕುರಿತು ಬಾಲುಚೆಟ್ಟಿ ಚತ್ರಂ ಎಂಬುವವರು ಸೆ. 19ರಂದು ದೂರು ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಚಿಪುರಂ ನ್ಯಾಯಾಲಯ ವಾಸನ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಹೀಗಾಗಿ ಪುಳಲ್ ಜೈಲಿನಲ್ಲಿ ವಾಸನ್‌ ಅವರನ್ನು ಇರಿಸಲಾಗಿದೆ.

ಜಾಮೀನು ಮಂಜೂರು ಮಾಡಲು ಹೈಕೊರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿರುವ ವಾಸನ್‌, ‘ಬೈಕ್ ಸಾಧಾರಣ ವೇಗದಲ್ಲೇ ಇತ್ತು. ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಹಸುವೊಂದು ಅಡ್ಡ ಬಂದಿತು. ಅದನ್ನು ತಪ್ಪಿಸಲು ಬ್ರೇಕ್ ಹಾಕಿದಾಗ ಒಂದು ಚಕ್ರ ಮೇಲೆದ್ದಿತು. ಬ್ರೇಕ್ ಹಾಕದಿದ್ದರೆ ಹಸು ಮತ್ತು ತನ್ನ ಜೀವಕ್ಕೇ ಅಪಾಯ ಎದುರಾಗುತ್ತಿತ್ತು’ ಎಂದು ಹೇಳಿದ್ದಾರೆ.

‘ಅಪಘಾತದಲ್ಲಿ ಗಾಯಗೊಂಡಿರುವುದರಿಂದ ಸೂಕ್ತ ಚಿಕಿತ್ಸೆಯ ಅಗತ್ಯವಿದೆ. ಆದರೆ ಜೈಲಿನಲ್ಲಿ ಅದು ಸಿಗುತ್ತಿಲ್ಲ. ಗಾಯವೂ ಹೆಚ್ಚಾಗುತ್ತಿದೆ. ಹಿಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಲುವಾಗಿ ಜಾಮೀನು ಮಂಜೂರು ಮಾಡುವಂತೆ‘ ವಾಸನ್ ಪರ ವಕೀಲರು ಕೋರಿದ್ದರು. ಆದರೆ ಇವರ ಜಾಮೀನು ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿದೆ.

ಟಿಟಿಎಫ್ ವಾಸನ್ ಅವರು ತಮ್ಮದೇ ಆದ ಯುಟ್ಯೂಬ್ ಚಾನಲ್ ಹೊಂದಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಬೈಕ್ ಸ್ಟಂಟ್ಸ್‌, ರೇಸಿಂಗ್, ವೀಲಿಂಗ್‌ ಇತ್ಯಾದಿ ಸಾಹಸಗಳನ್ನು ಮಾಡುವ ವಿಡಿಯೊಗಳನ್ನು ಅವರು ಅಲ್ಲಿ ಹಂಚಿಕೊಳ್ಳುತ್ತಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.