ಅಮರಾವತಿ: ಆಂಧ್ರ ಪ್ರದೇಶದ ರಾಜಧಾನಿಯಾಗಿ ಅಮರಾವತಿಯನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಕೈಬಿಡುವ ಸುಳಿವನ್ನು ಅಲ್ಲಿನ ಪಂಚಾಯಿತಿರಾಜ್ ಸಚಿವ ಬೊಚ್ಚ ಸತ್ಯನಾರಾಯಣ ನೀಡಿದ್ದಾರೆ.
ಗುಂಟೂರು ಜಿಲ್ಲೆಯಲ್ಲಿ, ಕೃಷ್ಣಾ ನದಿಯ ದಂಡೆಯಲ್ಲಿ 33 ಸಾವಿರ ಎಕರೆ ಪ್ರದೇಶದಲ್ಲಿ ಹೊಸ ರಾಜಧಾನಿ ನಿರ್ಮಿಸುವ ಯೋಜನೆಯನ್ನು ಹಿಂದಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೈಗೆತ್ತಿಕೊಂಡಿದ್ದರು. ಆದರೆ, ಈಗಿನ ಮುಖ್ಯಮಂತ್ರಿ ಜಗನ್ ಅವರು, ಅಮರಾವತಿ ತಮ್ಮ ಆದ್ಯತೆ ಅಲ್ಲ ಎಂದು ಈಗಾಗಲೇ ಹೇಳಿದ್ದಾರೆ. ಈ ವರ್ಷದ ಬಜೆಟ್‌ನಲ್ಲಿ ಯೋಜನೆಗೆ ₹500 ಕೋಟಿ ಮಾತ್ರ ಮೀಸಲು ಇರಿಸಲಾಗಿದೆ. ಈ ಮೂಲಕ ಅಮರಾವತಿಯನ್ನು ರಾಜಧಾನಿಯಾಗಿ ಅಭಿವೃದ್ಧಿಪಡಿಸುವ ಉದ್ದೇಶ ಇಲ್ಲ ಎಂಬ ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ:ಅಮರಾವತಿ: ಚಂದ್ರಬಾಬು ನಾಯ್ಡು ದುಸ್ಸಾಹಸ
ರಾಜಧಾನಿ ಅಭಿವೃದ್ಧಿಗೆ ಸಂಬಂಧಿಸಿ ಸರ್ಕಾರದ ನೀತಿ ಏನು ಎಂಬುದು ಸದ್ಯವೇ ಪ್ರಕಟವಾಗಲಿದೆ ಎಂದು ಸತ್ಯನಾರಾಯಣ ಅವರು ವಿಶಾಖಪಟ್ಟಣದಲ್ಲಿ ಹೇಳಿದ್ದಾರೆ.
‘ನದಿಯ ದಂಡೆಯಲ್ಲಿ ರಾಜಧಾನಿಯನ್ನು ಕಟ್ಟುವುದರಲ್ಲಿ ಹಲವು ಸಮಸ್ಯೆಗಳಿವೆ. ನಾಯ್ಡು ಅವರು ಆಯ್ಕೆ ಮಾಡಿಕೊಂಡ ಸ್ಥಳ ರಾಜಧಾನಿಗೆ ಸೂಕ್ತವಲ್ಲ ಎಂಬುದನ್ನು ಇತ್ತೀಚಿನ ಪ್ರವಾಹ ತೋರಿಸಿಕೊಟ್ಟಿದೆ. ಪ್ರವಾಹದ ನಿರ್ವಹಣೆಗಾಗಿ ಪ್ರತ್ಯೇಕ ಕಾಲುವೆಗಳು ಮತ್ತು ಚರಂಡಿ ವ್ಯವಸ್ಥೆ ಮಾಡಬೇಕಾಗುತ್ತದೆ’ ಎಂದು ಅವರು ಹೇಳಿದ್ದಾರೆ.
ಇಂತಹ ಸ್ಥಳದಲ್ಲಿ ರಾಜಧಾನಿ ಕಟ್ಟುವುದು ಬೊಕ್ಕಸಕ್ಕೆ ಅನಗತ್ಯ ಹೊರೆ ಉಂಟು ಮಾಡುತ್ತದೆ. ಪ್ರಕಾಶಂ ಜಿಲ್ಲೆಯ ದೊನಕೊಂಡವನ್ನು ರಾಜಧಾನಿಗಾಗಿ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಎಂಬ ಸುಳಿವನ್ನು ಅವರು ಕೊಟ್ಟಿದ್ದಾರೆ.
ಇದನ್ನೂ ಓದಿ:ಆಂಧ್ರಪ್ರದೇಶದ ರಾಜಧಾನಿ ‘ಅಮರಾವತಿ’
ನದಿ ದಡದಲ್ಲಿರುವ ಬಾಡಿಗೆ ಮನೆಯಲ್ಲಿ ನಾಯ್ಡು ಅವರು ವಾಸ್ತವ್ಯ ಮುಂದುವರಿಸಿರುವುದಕ್ಕೆ ನೀರಾವರಿ ಸಚಿವ ಅನಿಲ್ ಕುಮಾರ್ ಯಾದವ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.