ಹೈದರಾಬಾದ್: ನಿಮಗೆ ಹೊಸ ಶೂಗಳನ್ನು ಕಳಿಸುತ್ತೇವೆ, ನಮ್ಮೊಂದಿಗೆ ಪಾದಯಾತ್ರೆಗೆ ಬನ್ನಿ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರಿಗೆ ವೈಎಸ್‌ಆರ್ ತೆಲಂಗಾಣ ಪಕ್ಷದ (ವೈಎಸ್‌ಆರ್‌ಟಿಪಿ) ಅಧ್ಯಕ್ಷೆ ವೈ.ಎಸ್. ಶರ್ಮಿಳಾ ಸವಾಲೆಸೆದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾವು ತೆಲಂಗಾಣ ಸಿಎಂ ಕೆಸಿಆರ್ ಅವರಿಗೆ ಪಾದಯಾತ್ರೆಯಲ್ಲಿ ನಮ್ಮೊಂದಿಗೆ ನಡೆಯುವಂತೆ ಸವಾಲು ಹಾಕುತ್ತೇವೆ. ನಾವು ಅವರಿಗೆ ಶೂ ಬಾಕ್ಸ್ ಅನ್ನು ಕಳಿಸಿದ್ದೇವೆ. ರಾಜ್ಯದಲ್ಲಿ ಯಾವುದೇ ಸಮಸ್ಯೆಗಳಿಲ್ಲದಿದ್ದರೆ, ನಾನು ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ. ಒಂದು ವೇಳೆ ಸಮಸ್ಯೆಗಳಿರುವುದು ನಿಜವಾದರೆ, ಕೆಸಿಆರ್ ರಾಜೀನಾಮೆ ನೀಡಬೇಕು ಮತ್ತು ರಾಜ್ಯದ ಜನರ ಕ್ಷಮೆಯಾಚಿಸಬೇಕು’ ಎಂದು ಶರ್ಮಿಳಾ ಒತ್ತಾಯಿಸಿದ್ದಾರೆ.
ತೆಲಂಗಾಣದಲ್ಲಿ ವೈ.ಎಸ್. ಶರ್ಮಿಳಾ ಹಮ್ಮಿಕೊಂಡಿರುವ ಪಾದಯಾತ್ರೆ ಅನುಮತಿ ನೀಡಲು ಕೆಸಿಆರ್ ಸರ್ಕಾರ ನಿರಾಕರಿಸಿತ್ತು. ಸರ್ಕಾರದ ಕ್ರಮ ವಿರೋಧಿಸಿದ್ದ ಶರ್ಮಿಳಾ, ಕಳೆದ ಡಿಸೆಂಬರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದರು. ಆದರೆ, ಪೊಲೀಸರು ಇದಕ್ಕೆ ಬ್ರೇಕ್ ಹಾಕಿದ್ದರು.
ಇದಕ್ಕೂ ಮುನ್ನ ತಮ್ಮ ಬೆಂಗಾವಲು ಪಡೆಯ ಮೇಲೆ ನಡೆದಿದ್ದ ದಾಳಿ ಖಂಡಿಸಿ ತೆಲಂಗಾಣದ ಸಿಎಂ ಕಚೇರಿ ಎದುರು ಪ್ರತಿಭಟಿಸಲು ತೆರಳುತ್ತಿದ್ದ ಶರ್ಮಿಳಾ ಅವರನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದರು.
ಕೆಸಿಆರ್ ಕಚೇರಿಗೆ ಕಾರಿನಲ್ಲಿ ತೆರಳುತ್ತಿದ್ದ ಶರ್ಮಿಳಾ ಅವರನ್ನು ಅವರು ಕಾರಿನ ಡ್ರೈವಿಂಗ್ ಸೀಟಿನಲ್ಲಿ ಕುಳಿತಿರುವಾಗಲೇ ಪೊಲೀಸರು ಕ್ರೇನ್ ಬಳಸಿ ಎಳೆದುಕೊಂಡು ಹೋಗಿದ್ದರು. ಬಳಿಕ ಶರ್ಮಿಳಾ ಅವರ ಸೀಟಿನ ಬೆಲ್ಟ್ ಬಿಚ್ಚಿಸಿ ಬಲವಂತವಾಗಿ ಅವರನ್ನು ಕಾರಿನಿಂದ ಇಳಿಸಿ, ಬಂಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.