ADVERTISEMENT

ಝೀಕಾ ವೈರಸ್‌: ನಿಗಾ ವಹಿಸಲು ರಾಜ್ಯಗಳಿಗೆ ಕೇಂದ್ರ ಸೂಚನೆ

ಪಿಟಿಐ
Published 3 ಜುಲೈ 2024, 12:55 IST
Last Updated 3 ಜುಲೈ 2024, 12:55 IST
.
.   

ನವದೆಹಲಿ: ಮಹಾರಾಷ್ಟ್ರದ ಕೆಲ ಭಾಗಗಳಲ್ಲಿ ಝೀಕಾ ವೈರಸ್‌ನ ಕೆಲವು ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವಾಲಯವು ದೇಶದಾದ್ಯಂತ ಈ ಪರಿಸ್ಥಿತಿಯ ಮೇಲೆ ನಿರಂತರ ನಿಗಾ ವಹಿಸುವ ಅಗತ್ಯವಿದೆ ಎಂದು ಎಲ್ಲ ರಾಜ್ಯಗಳಿಗೆ ಬುಧವಾರ ಸೂಚಿಸಿದೆ.

ಪುಣೆಯಲ್ಲಿ 6, ಕೊಲ್ಹಾಪುರ ಮತ್ತು ಸಂಗಮ್ನರ್‌ನಲ್ಲಿ ತಲಾ ಒಬ್ಬರಲ್ಲಿ ಝೀಕಾ ವೈರಸ್‌ ಇರುವುದು ಮಂಗಳವಾರ ದೃಢಪಟ್ಟಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು, ಕೆಲ ಸಲಹೆ ಮತ್ತು ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಹೊರಡಿಸಿದೆ.

ಗರ್ಭಿಣಿಯರ ಮೇಲೆ ಹೆಚ್ಚಿನ ನಿಗಾ ಇಡಬೇಕಾದ ಅಗತ್ಯವಿದೆ. ಈ ಸೋಂಕು ದೃಢಪಟ್ಟ ತಾಯಂದಿರ ಭ್ರೂಣದ ಬೆಳವಣಿಗೆ ಬಗ್ಗೆ ಮೇಲ್ವಿಚಾರಣೆ ವಹಿಸುವಂತೆ ಅದು ರಾಜ್ಯ ಸರ್ಕಾರಗಳಿಗೆ ತಿಳಿಸಿದೆ.

ADVERTISEMENT

ಈಡಿಸ್‌ ಸೊಳ್ಳೆಗಳ ಹಾವಳಿಯನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಲ್ಲದೆ ಇದರ ಮೇಲ್ವಿಚಾರಣೆಗೆ ನೋಡಲ್‌ ಅಧಿಕಾರಿಯೊಬ್ಬರನ್ನು ನಿಯೋಜಿಸುವಂತೆ ಅದು ಹೇಳಿದೆ.

ಈಡಿಸ್‌ ಸೊಳ್ಳೆಯಿಂದ ಡೆಂಗಿ, ಚಿಕೂನ್‌ ಗುನ್ಯ ಹಾಗೂ ಝೀಕಾ (ಮಿದುಳು ಬೆಳವಣಿಗೆಗೆ ಸಮಸ್ಯೆ) ಸೋಂಕುಗಳು ಹರಡುತ್ತವೆ. ಇದು ಮಾರಣಾಂತಿಕವಲ್ಲದಿದ್ದರೂ, ಗರ್ಭಿಣಿಯರಿಗೆ ಜನಿಸುವ ಶಿಶುಗಳಲ್ಲಿ ‘ಮೈಕ್ರೊಸೆಫಾಲಿ’ (ತಲೆಯು ನಿರೀಕ್ಷೆಗಿಂತ ಚಿಕ್ಕದಾಗಿರುವ ಸ್ಥಿತಿ) ಬಂದೆರಗಬಹುದು. ಹೀಗಾಗಿ ಹೆಚ್ಚು ಕಾಳಜಿವಹಿಸಬೇಕಿದೆ ಎಂದು ಅದು ತಿಳಿಸಿದೆ.

ವಸತಿ ಪ್ರದೇಶಗಳು, ಕೆಲಸದ ಸ್ಥಳಗಳು, ಶಾಲೆಗಳು, ನಿರ್ಮಾಣ ಸ್ಥಳಗಳು, ಸಂಸ್ಥೆಗಳ ಆವರಣಗಳಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮವಹಿಸುವಂತೆ ಅದು ಹೇಳಿದೆ.

ಝೀಕಾ ವೈರಸ್‌ ಪ್ರಕರಣಗಳು ಪತ್ತೆಯಾದ ಕೂಡಲೇ ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮ (ಐಡಿಎಸ್‌ಪಿ) ಮತ್ತು ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕೇಂದ್ರಕ್ಕೆ (ಎನ್‌ವಿಬಿಡಿಸಿಪಿ) ತಕ್ಷಣವೇ ವರದಿ ಮಾಡುವಂತೆ ರಾಜ್ಯಗಳಿಗೆ ಕೇಂದ್ರ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.