ಅಹಮದಾಬಾದ್: ಗಾಂಧಿನಗರದ 70 ವರ್ಷದ ವ್ಯಕ್ತಿಯೊಬ್ಬರಿಗೆ ಝೀಕಾ ವೈರಾಣು ಸೋಂಕು ದೃಢಪಟ್ಟಿದ್ದು, ಪೂರ್ಣ ಚೇತರಿಸಿಕೊಂಡ ಬಳಿಕ ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಅಕ್ಟೋಬರ್ 24ರಂದು ಶೀತ, ಜ್ವರ ಮತ್ತು ಕೀಲು ನೋವಿನಿಂದ ಬಳಲುತ್ತಿದ್ದ ಅವರು ಗಾಂಧಿನಗರದ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಅವರ ದೇಹದ ಕೆಲ ದ್ರವರೂಪದ ಮಾದರಿಯನ್ನು ಪುಣೆಯಲ್ಲಿನ ರಾಷ್ಟ್ರೀಯ ವೈರಾಣು ಸಂಸ್ಥೆಗೆ (ಎನ್‌ಐವಿ) ಪರೀಕ್ಷೆಗೆಂದು ಕಳುಹಿಸಲಾಗಿತ್ತು. ಅದರ ವರದಿ ನಾಲ್ಕು ದಿನಗಳ ಹಿಂದೆ ಬಂದಿದ್ದು, ಅವರಿಗೆ ಝೀಕಾ ವೈರಾಣು ಸೋಂಕು ಇರುವುದನ್ನು ದೃಢಪಡಿಸಿದೆ.
ಆ ವ್ಯಕ್ತಿಯೂ ಪೂರ್ಣ ಗುಣಮುಖರಾಗಿದ್ದರಿಂದ ವಾರದ ಹಿಂದೆಯಷ್ಟೇ ಅವರನ್ನು ಮನೆಗೆ ಕಳುಹಿಸಲಾಗಿದೆ ಎಂದು ಗುಜರಾತಿನ ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.
ಅದಾಗ್ಯೂ, ರೋಗಿಯು ಇತ್ತೀಚಿಗೆ ಯಾವುದೇ ವಿದೇಶ ಪ್ರಯಾಣ ಕೈಗೊಂಡಿರಲಿಲ್ಲ. ಅವರು ವಾಸಿಸುವ ಪ್ರದೇಶ ವ್ಯಾಪ್ತಿಯಲ್ಲಿ ಮತ್ತು ಅವರ ಕುಟುಂಬದ ಸದಸ್ಯರಲ್ಲಿ ಯಾರಿಗೂ ಸೋಂಕು ದೃಢಪಟ್ಟಿಲ್ಲ ಎಂದು ಅದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.