ADVERTISEMENT

‘ಆಹಾರ ಧರ್ಮ’ ಮೆರೆದ ಜೊಮ್ಯಾಟೊ ಕಂಪನಿ

'ಹಿಂದೂ ಅಲ್ಲದ ಡೆಲಿವರಿ ಹುಡುಗನಿಂದ ಆಹಾರ ಸ್ವೀಕರಿಸಲ್ಲ' ಎಂದ ಜೊಮ್ಯಾಟೊ ಗ್ರಾಹಕ

​ಪ್ರಜಾವಾಣಿ ವಾರ್ತೆ
Published 31 ಜುಲೈ 2019, 17:26 IST
Last Updated 31 ಜುಲೈ 2019, 17:26 IST
ಕೃಪೆ: ಜೊಮ್ಯಾಟೊ ಟ್ವಿಟರ್ ಖಾತೆ
ಕೃಪೆ: ಜೊಮ್ಯಾಟೊ ಟ್ವಿಟರ್ ಖಾತೆ   

ನವದೆಹಲಿ:ಹಿಂದೂ ಅಲ್ಲದ ಡೆಲಿವರಿ ಹುಡುಗನ ಮೂಲಕ ಆಹಾರ ಪೊಟ್ಟಣ ರವಾಸಿದ್ದನ್ನು ನಿರಾಕರಿಸಿದ ವ್ಯಕ್ತಿಗೆ ಆಹಾರ ಪೂರೈಕೆಯ ಆ್ಯಪ್‌ ಆಧಾರಿತ ಸೇವೆ ನೀಡುವ ಜೊಮ್ಯಾಟೊ ಕಂಪನಿ ‘ಆಹಾರಕ್ಕೆ ಧರ್ಮ ಎಂಬುದು ಇಲ್ಲ, ಆಹಾರವೇ ಒಂದು ಧರ್ಮ’ ಎಂದು ತಿರುಗೇಟು ನೀಡಿದೆ.

ಟ್ವಿಟ್ಟರ್‌ನಲ್ಲಿ ನಡೆದ ಉತ್ತರ–ಪ್ರತ್ಯುತ್ತರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದೆ. ಆಹಾರವಿರುವ ಪೊಟ್ಟಣ ಪಡೆಯಲು ನಿರಾಕರಿಸಿದ ಗ್ರಾಹಕನಿಗೆ ಜನರು ಮೊನಚು ಮಾತಿನ ಚಾಟಿ ಬೀಸಿದ್ದಾರೆ. ಕಂಪನಿಯ ನಿಲುವನ್ನು ಶ್ಲಾಘಿಸಿ ಸಾಕಷ್ಟು ಜನರು ಟ್ವೀಟ್‌ ಮಾಡಿದ್ದಾರೆ.

ಮಧ್ಯಪ್ರದೇಶದ ಜಬಲ್ಪುರದ ಅಮಿತ್‌ ಶುಕ್ಲಾ ಮಂಗಳವಾರ ರಾತ್ರಿ ಆಹಾರಕ್ಕಾಗಿ ಆರ್ಡರ್‌ ಮಾಡಿದ್ದಾರೆ. ಆದರೆ, ಆಹಾರ ಪೊಟ್ಟಣ ತಂದ ವ್ಯಕ್ತಿ ಹಿಂದೂ ಅಲ್ಲ ಎಂಬ ಕಾರಣವೊಡ್ಡಿದ್ದ ಶುಕ್ಲಾ, ಆಹಾರ ಪಡೆಯಲು ನಿರಾಕರಿಸಿದ್ದಾರೆ.

ADVERTISEMENT

‘ಆಹಾರದ ಪೊಟ್ಟಣ ತರುವ ವ್ಯಕ್ತಿಯನ್ನು ಬದಲಾಯಿಸಬೇಕು ಎಂಬ ನನ್ನ ಆಗ್ರಹವನ್ನು ಕಂಪನಿ ಮಾನ್ಯ ಮಾಡಿಲ್ಲ. ವ್ಯಕ್ತಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಆರ್ಡರ್‌ ರದ್ದು ಮಾಡಿದರೆ ಹಣವನ್ನು ಮರಳಿ ಕೊಡುವುದಿಲ್ಲ ಎಂಬುದಾಗಿ ಕಂಪನಿ ಉತ್ತರಿಸಿದೆ’ ಎಂದು ನಂತರ ಟ್ವೀಟ್‌ ಮಾಡಿದ್ದರು.

ಇದೇ ವಿಷಯವಾಗಿ ಟ್ವಿಟ್ಟರ್‌ ಮೂಲಕ ಕಂಪನಿ ನೀಡಿದ ಉತ್ತರಗಳ ಸ್ಕ್ರೀನ್‌ ಶಾಟ್‌ ಸಹ ಶುಕ್ಲಾ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಾಕಿದ್ದಾರೆ.

ಜೊಮ್ಯಾಟೊ ಸಂಸ್ಥಾಪಕ ದೀಪಿಂದರ್ ಸಿಂಗ್‌ ಗೋಯಲ್‌ ಅವರಂತೂ ದೀರ್ಘವಾದ ಪತ್ರವನ್ನೇ ತಮ್ಮ ಖಾತೆಯಲ್ಲಿ ಹಾಕಿದ್ದಾರೆ. ‘ನಮಗೆ ಭಾರತದ ವೈವಿಧ್ಯತೆಯ ಅರಿವಿದ್ದು, ಅದರ ಬಗ್ಗೆ ಹೆಮ್ಮೆಯೂ ಇದೆ. ನಾವು ನಂಬಿರುವ ಮೌಲ್ಯಗಳಿಗೆ ವ್ಯತಿರಿಕ್ತವಾದದ್ದು ಎದುರಾದರೆ ನಮ್ಮ ವ್ಯವಹಾರವನ್ನು ಕಳೆದುಕೊಳ್ಳುವಲ್ಲಿ ನಮಗೆಯಾವುದೇ ಬೇಸರ ಇಲ್ಲ’ ಎಂದು ಉಲ್ಲೇಖಿಸಿದ್ದಾರೆ.

ಜಮ್ಮು–ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ, ಆರ್‌ಪಿಜಿ ಗ್ರೂಪ್‌ನ ಮುಖ್ಯಸ್ಥ ಹರ್ಷ್‌ ಗೋಯೆಂಕಾ, ಚುನಾವಣಾ ಆಯೋ ಗದ ಮಾಜಿ ಮುಖ್ಯ ಆಯುಕ್ತ ಡಾ.ಎಸ್‌.ವೈ.ಖುರೇಷಿ, ಬಾಲಿವುಡ್‌ ನಟಿ ಸ್ವರಾ ಭಾಸ್ಕರ್‌ ಸೇರಿದಂತೆ ಹಲವರು ದೀಪಿಂದರ್‌ ಟ್ವೀಟ್‌ಗೆ ಬೆಂಬಲಿಸಿದ್ದಾರೆ.

ಜೊಮ್ಯಾಟೊದ ಈ ಉತ್ತರವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.

ಏನು ವಿಷಯ?
ಟ್ವೀಟಿಗರಾದ ಅಮಿತ್ ಶುಕ್ಲಾ ಎಂಬವರು ತಾನು ಜೊಮ್ಯಾಟೊ ಆ್ಯಪ್‌ನಲ್ಲಿ ಆಹಾರ ಆರ್ಡರ್ ಮಾಡಿದಾಗ ಹಿಂದೂ ಅಲ್ಲದ ಡೆಲಿವರಿ ಹುಡುಗನನ್ನು ನಿಗದಿಗೊಳಿಸಿದ್ದರು. ಡೆಲಿವರಿ ಹುಡುಗನನ್ನು ಬದಲಿಸಿ ಎಂದು ನಾನು ಹೇಳಿದಾಗ ಅದು ಸಾಧ್ಯವಿಲ್ಲ ಎಂದು ಹೇಳಿದರು. ನಾನು ಆರ್ಡರ್ ರದ್ದು ಮಾಡಿದರೆ ದುಡ್ಡು ವಾಪಸ್ ಕೊಡುವುದಿಲ್ಲ ಎಂದೂಅವರು ಹೇಳಿದರು. ನೀವು ಅದೇ ಹುಡುಗನ ಕೈಯಿಂದ ಆರ್ಡರ್ ತೆಗೆದುಕೊಳ್ಳಿ ಎಂದು ಬಲವಂತ ಮಾಡುವಂತಿಲ್ಲ ಎಂದು ನಾನು ಅವರಿಗೆ ಹೇಳಿದೆ ಎಂದು ಟ್ವೀಟಿಸಿದ್ದರು.ಈ ಟ್ವೀಟ್‌ನಲ್ಲಿ ಜೊಮ್ಯಾಟೊ ಟ್ವಿಟರ್ ಖಾತೆಯನ್ನೂ ಟ್ಯಾಗ್ ಮಾಡಿದ್ದರು.

ಶುಕ್ಲಾ ಅವರಟ್ವೀಟ್‌ಗೆ ಉತ್ತರಿಸಿದ ಜೊಮ್ಯಾಟೊ, ಆಹಾರಕ್ಕೆ ಧರ್ಮವಿಲ್ಲ, ಅದೇಧರ್ಮ ಎಂಬ ಉತ್ತರ ನೀಡಿದೆ.

ಈ ಟ್ವೀಟ್‌ನ್ನು ರಿಟ್ವೀಟ್ ಮಾಡಿದ ಜೊಮ್ಯಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್, ನಾವು ಭಾರತದ ಬಗ್ಗೆ, ನಮ್ಮ ಆದರಣೀಯ ಗ್ರಾಹಕರು ಮತ್ತು ಪಾಲುದಾರರ ವೈವಿಧ್ಯತೆ ಬಗ್ಗೆ ನಾವು ಹೆಮ್ಮೆ ಪಡುತ್ತೇವೆ. ನಮ್ಮ ಮೌಲ್ಯದ ವಿರುದ್ಧವಾಗಿರುವ ಯಾವುದೇ ವ್ಯವಹಾರವನ್ನು ಕಳೆದುಕೊಂಡರೆ ನಾವು ಅದಕ್ಕೆ ಖೇದಿಸುವುದಿಲ್ಲ ಎಂದಿದ್ದಾರೆ.

ಟ್ವೀಟಿಗರ ಪ್ರತಿಕ್ರಿಯೆ
ಶುಕ್ಲಾ ಅವರ ಟ್ವೀಟ್‌ಗೆ ಹಲವಾರು ಟ್ವೀಟಿಗರು ಪ್ರತಿಕ್ರಿಯಿಸಿದ್ದು ಜೊಮ್ಯಾಟೊ ಟ್ವೀಟ್‌ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಮುಂದಿನ ಬಾರಿ ಆಹಾರ ಬೆಳೆದದ್ದು ಹಿಂದೂ, ಸಾಗಣೆ ಮಾಡಿದ್ದು ಹಿಂದೂ, ಮಾರಿದ್ದು ಹಿಂದೂ ಮತ್ತು ಅಡುಗೆ ಮಾಡಿದ್ದೂ ಹಿಂದೂ ಎಂಬುದನ್ನು ದೃಢೀಕರಿಸಿಕೊಳ್ಳಿ,ಧರ್ಮದ ಸವಾಲು ಇದು.

ಸಹೋದರಾ ಈ ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಕಾರಣ ನೀವೇ.ಟ್ವಿಟರ್‌ನಲ್ಲಿಯೂ ಹಿಂದೂ ಅಲ್ಲದ ಹಲವಾರು ಮಂದಿ ಕೆಲಸ ಮಾಡುತ್ತಿದ್ದಾರೆ.ಹಾಗಾಗಿ ನಿಮ್ಮ ಟ್ವೀಟ್ ಡಿಲೀಟ್ ಮಾಡಿ.

ಆ ಆಹಾರ ಹಿಂದೂವೇ ಬೇಯಿಸಿದ್ದು ಎಂದು ನೀವು ಹೇಗೆ ದೃಢೀಕರಿಸುತ್ತೀರಿ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.