ADVERTISEMENT

ಬೋನಿನೊಳಗೆ ಬಾರದ ಜಾಣ ಚಿರತೆ!

ಕರಿಮಾರೆಮ್ಮನಗುಡ್ಡದಲ್ಲಿ ನಿರಂತರ ಸಂಚಾರ..

ಕೆ.ನರಸಿಂಹ ಮೂರ್ತಿ
Published 20 ಜೂನ್ 2018, 13:51 IST
Last Updated 20 ಜೂನ್ 2018, 13:51 IST
ಜಿ.ಜನಾರ್ದನರೆಡ್ಡಿ ಅವರ ಬಂಗಲೆಯ ಹಿಂಭಾಗದ ಪ್ರದೇಶದಲ್ಲಿ ಇಡಲಾಗಿರುವ ಬೋನು
ಜಿ.ಜನಾರ್ದನರೆಡ್ಡಿ ಅವರ ಬಂಗಲೆಯ ಹಿಂಭಾಗದ ಪ್ರದೇಶದಲ್ಲಿ ಇಡಲಾಗಿರುವ ಬೋನು   

ಬಳ್ಳಾರಿ: ನಗರದ 31ನೇ ವಾರ್ಡಿನ ಎಂ.ಕೆ.ನಗರದ ಮೇಲಿನ ಗುಡ್ಡದಲ್ಲಿ ಎಂಟು ದಿನದ ಹಿಂದೆ (ಜೂ 11) ಸಂಜೆ ಕಾಣಿಸಿಕೊಂಡಿದ್ದ ಚಿರತೆಯು ಅರಣ್ಯ ಇಲಾಖೆಯ ಎರಡು ಬೋನಿನೊಳಗೂ ಬಾರದೆ ಸತಾಯಿಸುತ್ತಿದೆ!

ಮೊದಲನೇ ಬೋನನ್ನು ಗುಡ್ಡದ ಮಧ್ಯಭಾಗದಲ್ಲಿ ಇಡಲಾಗಿದ್ದು, ಎರಡನೇ ಬೋನನ್ನು ಜಿ.ಜನಾರ್ದನರೆಡ್ಡಿ ಅವರ ಬಂಗಲೆಯ ಹಿಂಭಾಗದ ಪ್ರದೇಶದಲ್ಲಿ ಇಡಲಾಗಿದೆ.

ಗುಡ್ಡದ ಮಧ್ಯಭಾಗದಲ್ಲಿರುವ ಬೋನಿನ ಸುತ್ತ ಚಿರತೆ ನಡೆದಾಡಿರುವ ಕುರುಹುಗಳು ಕಂಡು ಬಂದಿವೆ. ಬೋನಿನ ಬಳಿ ಮಣ್ಣನ್ನು ಸುರಿದು ಸಮತಟ್ಟು ಮಾಡಿರುವ ಸ್ಥಳದಲ್ಲಿ ಅದರ ಹೆಜ್ಜೆಗಳು ಮೂಡಿವೆ. ಬೋನಿನ ಸುತ್ತ ಓಡಾಡಿರುವ ಚಿರತೆಯು ಒಳಕ್ಕೆ ಮಾತ್ರ ಹೆಜ್ಜೆ ಇಟ್ಟಿಲ್ಲ.

ADVERTISEMENT

ಚಿರತೆ ಕಾಣಿಸಿಕೊಂಡ ಬಳಿಕ ಮೊದಲ ಬೋನನ್ನು ಇಟ್ಟಿದ್ದ ಅರಣ್ಯ ಇಲಾಖೆಯ ಸಿಬ್ಬಂದಿ, ನಂತರ ಜೂ 14ರಂದು ಎರಡನೇ ಬೋನನ್ನು ಇಟ್ಟಿದ್ದರು. ಅದಕ್ಕೆ ನೂರಾರು ಸ್ಥಳೀಯರೂ ನೆರವಾಗಿದ್ದರು. ಶಾಸಕ ಜಿ.ಸೋಮಶೇಖರ ರೆಡ್ಡಿ ಅವರೂ ಸ್ಥಳದಲ್ಲಿದ್ದು ಉತ್ಸಾಹ ತುಂಬಿದ್ದರು.

ಗುಡ್ಡದ ಮಧ್ಯಭಾಗದಲ್ಲಿ ಇಟ್ಟಿರುವ ಬೋನಿನಲ್ಲಿ ಕೆಲವು ದಿನಗಳ ಹಿಂದೆ ನಾಯಿಯೊಂದು ಸಿಲುಕಿಕೊಂಡಿತ್ತು. ಚಿರತೆಯನ್ನು ಹಿಡಿಯಲೆಂದು ಬೋನಿನಲ್ಲಿ ಮೇಕೆಯೊಂದನ್ನು ಕಟ್ಟಿಹಾಕಲಾಗಿದೆ. ಅದನ್ನು ಕಂಡು ನಾಯಿ ಬಂದಿತ್ತು. ಅದು ಬರದೇ ಹೋಗಿದ್ದರೆ ಚಿರತೆ ಬಂದು ಸಿಲುಕಿಕೊಳ್ಳುವ ಅವಕಾಶವಿತ್ತು.

ಎರಡನೇ ಬೋನಿನಲ್ಲೂ ಮಿಕವೊಂದನ್ನು ಕಟ್ಟಿಹಾಕಲಾಗಿದೆ. ಅದು ಬೋನು ಎಂದು ಗೊತ್ತಾಗದ ರೀತಿಯಲ್ಲಿ ರೆಂಬೆ–ಕೊಂಬೆಗಳನ್ನು ಹೊದಿಸಲಾಗಿದೆ.

ಹೆಚ್ಚು ಜನ ಸಂಚಾರ: ‘ಎರಡನೇ ಬೋನನ್ನು ಅಳವಡಿಸುವ ಸಂದರ್ಭದಲ್ಲಿ ನೂರಾರು ಜನ ಗುಡ್ಡದಲ್ಲಿ ಓಡಾಡಿದ್ದರು. ಚಿರತೆಯು ಮನುಷ್ಯರ ವಾಸನೆಯನ್ನು ಗ್ರಹಿಸಿದೆ. ಸನ್ನಿವೇಶ ತನಗೆ ಅಪಾಯಕಾರಿಯಾಗಿದೆ ಎಂಬ ಅರಿವು ಮೂಡಿರುವುದರಿಂದಲೇ ಅದೂ ಎಚ್ಚರಿಕೆಯಿಂದ ಹೆಜ್ಜೆ ಇಡು ತ್ತಿರಬಹುದು’ ಎಂದು ವಲಯ ಅರಣ್ಯಾ ಧಿಕಾರಿ ಡಿ.ಎಲ್‌.ಹರ್ಷ ’ಪ್ರಜಾವಾಣಿ’ಗೆ ಸೋಮವಾರ ತಿಳಿಸಿದರು.

‘ಒಂಟಿ ಚಿರತೆ ಒಂದೇ ಸ್ಥಳದಲ್ಲಿ ಹೆಚ್ಚು ಕಾಲ ನಿಲ್ಲುವುದಿಲ್ಲ. ಆದರೆ ಈ ಚಿರತೆಯು ಹಲವು ದಿನಗಳಿಂದ ಇದೇ ಗುಡ್ಡದಲ್ಲಿ ಉಳಿದುಕೊಂಡಿದೆ. ಗುಡ್ಡದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚರಿಸಿ ಮತ್ತೆ ಗುಡ್ಡಕ್ಕೆ ಬಂದು ನೆಲೆಯೂರುತ್ತಿರಬಹುದು’ ಎಂದು ಅವರು ಅಭಿಪ್ರಾಯಪಟ್ಟರು.

ಸಿಲುಕುವ ಸಾಧ್ಯತೆ: ‘ಚಿರತೆ ಬೋನನ್ನು ಅನುಮಾನದಿಂದ ನೋಡುತ್ತಿರುವುದರಿಂದಲೇ ಅದರೊಳಕ್ಕೆ ಬರುತ್ತಿಲ್ಲ. ಒಳಗಿರುವ ಮಿಕದ ಸದ್ದು, ಕದಲಾಟ ಅದಕ್ಕೆ ಸರಿಯಾಗಿ ಕೇಳಿಸದೇ ಇರಬಹುದು. ಕೇಳಿಸಿದ್ದರೂ, ಅನುಮಾನ ಮೂಡಿ ವಾಪಸು ಹೋಗಿರಬಹುದು. ಆದರೆ ಅದು ಸಿಕ್ಕಿಬೀಳುವ ಸಾಧ್ಯತೆ ಹೆಚ್ಚಿದೆ’ ಎಂದು ಹೇಳಿದರು.

ಬೋನಿನ ಸುತ್ತ ಚಿರತೆ ಹೆಜ್ಜೆ ಗುರುತುಗಳು ಕಂಡಿವೆ. ಆದರೆ ಚಿರತೆ ಜಾಣತನ ತೋರಿಸಿದ್ದು, ಬೋನಿನೊಳಕ್ಕೆ ಬಂದಿಲ್ಲ
- ಡಿ.ಎಲ್‌ಹರ್ಷ, ವಲಯ ಅರಣ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.