ADVERTISEMENT

‘ಅಂದು ಭಿಕ್ಷೆಗೆ ಬಂದಿದ್ದೆ, ಇಂದು ಪ್ರಶಸ್ತಿಗೆ ಬಂದೆ’

​ಪ್ರಜಾವಾಣಿ ವಾರ್ತೆ
Published 3 ಮೇ 2017, 19:30 IST
Last Updated 3 ಮೇ 2017, 19:30 IST
ಸಾಮಾಜಿಕ ಹೋರಾಟಗಾರ್ತಿ ಸಿಂಧೂತಾಯಿ ಸಪಕಾಳ್ ಅವರಿಗೆ ಬೆಂಗಳೂರಿನಲ್ಲಿ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಬಸವ ರಾಷ್ಟ್ರೀಯ ಪುರಸ್ಕಾರ’  ಪ್ರದಾನ ಮಾಡಿದರು.  ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಇದ್ದಾರೆ.  –ಪ್ರಜಾವಾಣಿ ಚಿತ್ರ
ಸಾಮಾಜಿಕ ಹೋರಾಟಗಾರ್ತಿ ಸಿಂಧೂತಾಯಿ ಸಪಕಾಳ್ ಅವರಿಗೆ ಬೆಂಗಳೂರಿನಲ್ಲಿ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಬಸವ ರಾಷ್ಟ್ರೀಯ ಪುರಸ್ಕಾರ’ ಪ್ರದಾನ ಮಾಡಿದರು. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಇದ್ದಾರೆ. –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘20 ವರ್ಷದ ಹಿಂದೆ ಹಸಿವು ತಾಳಲಾರದೆ ಅನ್ನಕ್ಕಾಗಿ ಭಿಕ್ಷೆ ಬೇಡುತ್ತಾ  ಇಲ್ಲಿನ ರೈಲು ನಿಲ್ದಾಣಕ್ಕೆ ಬರುತ್ತಿದ್ದೆ.  ಇಂದು ಪ್ರಶಸ್ತಿ ಪಡೆಯಲು ಬಂದಿದ್ದೇನೆ’ ಎಂದು ಸಾಮಾಜಿಕ ಹೋರಾಟಗಾರ್ತಿ ಸಿಂಧೂತಾಯಿ ಹೇಳುತ್ತಿದ್ದಾಗ ಸಭಿಕರ ಕಣ್ಣಾಲಿಗಳು ತುಂಬಿದ್ದವು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ‘ಬಸವ ರಾಷ್ಟ್ರೀಯ ಪುರಸ್ಕಾರ’ ಸ್ವೀಕರಿಸಿ  ಅವರು ಮಾತನಾಡಿದರು. ಅವರ ಮಾತನ್ನು ಎಲ್ಲರೂ ತದೇಕಚಿತ್ತದಿಂದ ಆಲಿಸುತ್ತಿದ್ದರು.

‘ನಾನು ಈವರೆಗೆ ಮಹಾರಾಷ್ಟ್ರದಲ್ಲಿ ಅನಾಥ ಮಕ್ಕಳ ಪಾಲಿಗೆ ತಾಯಿಯಾಗಿದ್ದೆ. ಈ ದೊಡ್ಡ ಪ್ರಶಸ್ತಿ ನೀಡುವ ಮೂಲಕ ಕರ್ನಾಟಕವೂ ನನ್ನನ್ನು ತಾಯಿಯಾಗಿ ಸ್ವೀಕರಿಸಿದೆ. ನಿಮಗೆ ನಾನು ಅಭಾರಿ’ ಎಂದು ಅವರು ಹೇಳಿದರು.

ADVERTISEMENT

ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಪುರಸ್ಕೃತ ಚೆನ್ನಣ್ಣ ವಾಲೀಕಾರ ಮಾತನಾಡಿ, ಬಸವಣ್ಣನ ಹೆಸರಿನಲ್ಲಿ ರಾಜ್ಯ ಸರ್ಕಾರ ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸಬೇಕು ಎಂದು ಮನವಿ ಮಾಡಿದರು.

‘ಈ ಹಿಂದೆ ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪಿಸುವಾಗ ಬಸವಣ್ಣನವರ ಹೆಸರಿಡಲು ಕೋರಿದ್ದೆವು.  ಆದರೆ ಅದು ನನಸಾಗಲಿಲ್ಲ ಎಂದು ಅವರು ಹೇಳಿದರು.

ಇದೇ ಸಮಾರಂಭದಲ್ಲಿ 11 ಮಂದಿಗೆ ರಾಜ್ಯ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ‘ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ’ಗೆ ಭಾಜನರಾಗಿರುವ ಟಿ.ಎಚ್‌. ವಿನಾಯಕರಾಮ್‌ ಮತ್ತು ‘ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ’ಗೆ ಪಾತ್ರರಾಗಿರುವ ಹಸನ್‌ ನಯೀಂ ಸುರಕೋಡ ಗೈರು ಹಾಜರಾಗಿದ್ದರು.

ಪ್ರಶಸ್ತಿ ಮೊತ್ತ ಹೆಚ್ಚಳ
ರಾಜ್ಯ ಸರ್ಕಾರ ನೀಡುವ ರಾಷ್ಟ್ರೀಯ ಪ್ರಶಸ್ತಿಗಳಿಗೆ ತಲಾ ₹ 10 ಲಕ್ಷ ಮತ್ತು ರಾಜ್ಯ ಪ್ರಶಸ್ತಿಗಳಿಗೆ ತಲಾ ₹ 5 ಲಕ್ಷ ನಿಗದಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

‘ಬಸವ ರಾಷ್ಟ್ರೀಯ ಪುರಸ್ಕಾರ’ ಮತ್ತು ‘ಮಹಾವೀರ ಪ್ರಶಸ್ತಿ’ಗೆ ತಲಾ ₹ 10 ಲಕ್ಷ ಇದೆ. ಅದೇ ಮೊತ್ತವನ್ನು   ‘ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ’ಗೂ ಹೆಚ್ಚಿಸಲಾಗಿದೆ ಎಂದರು.

ರಾಜ್ಯ ಪ್ರಶಸ್ತಿಗಳಲ್ಲಿ ‘ಕನಕ ಶ್ರೀ ಪ್ರಶಸ್ತಿ’ಗೆ  ₹ 5 ಲಕ್ಷ ಇತ್ತು.  ಇದೇ ಮೊತ್ತವನ್ನು ಉಳಿದ 15 ರಾಜ್ಯ ಪ್ರಶಸ್ತಿಗಳಿಗೆ  ಹೆಚ್ಚಿಸಲಾಗುವುದು ಎಂದು ತಿಳಿಸಿದರು.

ರಾಜ್ಯ ಸರ್ಕಾರ ಕಲೆ, ಸಾಹಿತ್ಯ ಕ್ಷೇತ್ರಕ್ಕೆ ಅನುದಾನ ಕೊರತೆ ಮಾಡುವುದಿಲ್ಲ. ಬೇಡಿಕೆ ಸಲ್ಲಿಸಿದಷ್ಟೂ ಅನುದಾನವನ್ನು ನೀಡಲಾಗುತ್ತಿದೆ. ಇದು ಸರ್ಕಾರ ಕಲಾವಿದರು ಮತ್ತು ಸಾಹಿತಿಗಳಿಗೆ ನೀಡುತ್ತಿರುವ ಗೌರವ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.