ಧಾರವಾಡ: ಇಲ್ಲಿಯ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಡಾ.ದ.ರಾ.ಬೇಂದ್ರೆ ಅವರ ಹೆಸರಿನಲ್ಲಿ ಪ್ರತಿ ವರ್ಷ ಕೊಡಮಾಡುವ ಅಂಬಿಕಾತನಯದತ್ತ ಪ್ರಶಸ್ತಿಗೆ ಈ ಬಾರಿ ವಿಜಯಪುರದ ಡಾ.ಜಿ.ವಿ. ಕುಲಕರ್ಣಿ ಹಾಗೂ ಉಡುಪಿಯ ಬನ್ನಂಜೆ ಗೋವಿಂದಾಚಾರ್ಯ ಆಯ್ಕೆಯಾಗಿದ್ದಾರೆ.
‘ಪ್ರಶಸ್ತಿಯು 1 ಲಕ್ಷ ಮೊತ್ತ ಹೊಂದಿದ್ದು, ಇಬ್ಬರು ವಿದ್ವಾಂಸರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದರಿಂದ ತಲಾ 50 ಸಾವಿರ ನಗದು ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭ ಫೆ. 1 ರಂದು ಇಲ್ಲಿಯ ಬೇಂದ್ರೆ ಭವನದಲ್ಲಿ ನಡೆಯಲಿದೆ’ ಎಂದು ಟ್ರಸ್ಟ್ ಅಧ್ಯಕ್ಷ ಡಾ.ಶ್ಯಾಮಸುಂದರ ಬಿದರಕುಂದಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಬನ್ನಂಜೆ ಅವರು ಬೇಂದ್ರೆ ಕಾವ್ಯದಲ್ಲಿ ಪ್ರೀತಿ, ಆಧ್ಯಾತ್ಮಿಕತೆಗಳ ಶೋಧನೆ ಮಾಡಿದ್ದಾರೆ. ವ್ಯಾಖ್ಯಾನ ಕೃತಿಗಳು, ಕಾವ್ಯ, ನಾಟಕ, ಸಂಸ್ಕೃತದಿಂದ ಅನುವಾದಗಳು, ಆಧುನಿಕ ಪರಿಭಾಷೆಯಲ್ಲಿ ಪುರಾಣ, ಮಹಾಕಾವ್ಯಗಳ ಮರು ನಿರೂಪಣೆ ಮಾಡಿದ್ದಾರೆ. ಜಿ.ವಿ.ಕುಲಕರ್ಣಿ ಅವರೂ ಕಾವ್ಯ, ಕಥಾ ಸಂಕಲನ, ವ್ಯಕ್ತಿಚಿತ್ರ ವಿಮರ್ಶೆ ಸೇರಿದಂತೆ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಕೃಷಿ ಮಾಡಿದ್ದಾರೆ.
ಒಟ್ಟಾರೆ ಇಬ್ಬರೂ ವಿದ್ವಾಂಸರು ಬೇಂದ್ರೆ ಸಾಹಿತ್ಯದತ್ತ ಒಲವು ತೋರಿದವರು. ಈ ನಿಟ್ಟಿನಲ್ಲಿ ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಅಧ್ಯಕ್ಷತೆಯ ಆಯ್ಕೆ ಸಮಿತಿ ಈ ಇಬ್ಬರನ್ನು ಆಯ್ಕೆ ಮಾಡಿದೆ’ ಎಂದು ಬಿದರಕುಂದಿ ವಿವರಿಸಿದರು.
ಬೇಂದ್ರೆ ಸ್ಮೃತಿ ಲೇಖನ ಸ್ಪರ್ಧೆ ವಿಜೇತರು
ಬೆಂಗಳೂರು: ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೇಂದ್ರೆ ಕಾವ್ಯಕೂಟ ಏರ್ಪಡಿಸಿದ್ದ ರಾಜ್ಯಮಟ್ಟದ ದ.ರಾ. ಬೇಂದ್ರೆ ಸ್ಮೃತಿ ಲೇಖನ ಸ್ಪರ್ಧೆಯಲ್ಲಿ ತುಮಕೂರು ವಿಶ್ವವಿದ್ಯಾಲಯದ ಜಿ.ಎನ್. ಉಷಾ ಮೊದಲ ಬಹುಮಾನಗಳಿಸಿದ್ದಾರೆ.
ಮೈಸೂರು ವಿವಿಯ ಮಂಜುಮಣಿ (ದ್ವಿತೀಯ), ತುಮಕೂರು ವಿವಿಯ ಎಸ್.ಆರ್. ವೆಂಕಟೇಶ್ (ತೃತೀಯ) ನಂತರದ ಸ್ಥಾನ ಪಡೆದಿದ್ದಾರೆ. ಬೇಂದ್ರೆ ಅವರ ಜನ್ಮದಿನವಾದ ಜ. 31ರಂದು ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬಹುಮಾನ ವಿತರಣೆ ಮಾಡಲಾಗುತ್ತದೆ ಎಂದು ಕಾವ್ಯಕೂಟದ ಅಧ್ಯಕ್ಷ ಡಾ.ಜಿ. ಕೃಷ್ಣಪ್ಪ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.