ಧಾರವಾಡ: ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಹಾಗೂ ಕವಿ ಡಾ. ಜಿ.ವಿ.ಕುಲಕರ್ಣಿ ಅವರಿಗೆ ಡಾ.ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ನೀಡಿ ಭಾನುವಾರ ಗೌರವಿಸಲಾಯಿತು.
ಈ ಪ್ರಶಸ್ತಿಯು ತಲಾ ₨ 50ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ನಗರದ ಸಾದನಕೇರಿಯ ಬೇಂದ್ರೆ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬನ್ನಂಜೆ, ‘ಇಂದು ಕವಿತೆ ಹಾಗೂ ಕಾವ್ಯಗಳನ್ನು ಸಂಖ್ಯಾಶಾಸ್ತ್ರದ ಆಧಾರದ ಮೇಲೆ ರಚಿಸುವ ಪ್ರಯತ್ನವನ್ನು ಕೈಬಿಟ್ಟಿದ್ದಾರೆ. ಇದು ಮುಂದುವರಿಯಬೇಕು. ಇದು ಬೇಂದ್ರೆ ಅವರ ಆಶಯವೂ ಆಗಿತ್ತು’ ಎಂದರು.
‘ಬೇಂದ್ರೆ ಅವರ ಕವನ ಸಂಕಲನ ‘ನಾಕುತಂತಿ’ಯೂ ಅಧ್ಯಾತ್ಮದ ನಡೆಯಾಗಿದೆ. ಅವರ ಕವಿತೆಗಳು ನಾನು, ನೀನು, ಆನು, ತಾನು ಎಂಬ ಚತುರ್ಮುಖ ದರ್ಶನ ಮಾಡುಸು ತ್ತಿದ್ದವು’ ಎಂದು ಬಣ್ಣಿಸಿದರು.
‘ವೇದಗಳು ಜಗತ್ತಿನ ಮೊಟ್ಟ ಮೊದಲ ನವ್ಯ ಕಾವ್ಯ. ಆದರೆ ಅವುಗಳು ಅರ್ಥವಾಗದಿದ್ದರೂ ಎಲ್ಲೆಡೆ ಅವುಗಳ ಪಠಣ ನಡೆಯುತ್ತಿದೆ. ಇಡೀ ಜಗತ್ತಿನಲ್ಲಿ ಭಾರತದಲ್ಲಿ ಮಾತ್ರ ನಮಗೆ ಅರ್ಥವಾಗದ ಭಾಷೆಯಲ್ಲಿ ದೇವರಿಗೆ ಪೂಜೆ ನಡೆಯುತ್ತಿದೆ ಎನ್ನುವುದು ವಿಪರ್ಯಾಸದ ಸಂಗತಿ’ ಎಂದರು.
ಹಿರಿಯ ಸಾಹಿತಿ ಡಾ.ಗುರಲಿಂಗ ಕಾಪಸೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿದ ಡಾ. ಕುಲಕರ್ಣಿ ಕವಿತೆ ವಾಚಿಸಿದರು. ಟ್ರಸ್ಟ್ ಅಧ್ಯಕ್ಷ ಡಾ. ಶ್ಯಾಮಸುಂದರ ಬಿದರಕುಂದಿ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.