ಧಾರವಾಡ: ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನೀಡುವ `ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ'ಯನ್ನು ವಿಮರ್ಶಕ ಡಾ.ಎಚ್.ಎಸ್.ರಾಘವೇಂದ್ರರಾವ್ ಅವರಿಗೆ ಹಿರಿಯ ವಿಮರ್ಶಕ ಡಾ.ಜಿ.ಎಸ್.ಆಮೂರ ಗುರುವಾರ ಇಲ್ಲಿ ಪ್ರದಾನ ಮಾಡಿದರು.
ಬೇಂದ್ರೆ ಅವರ 118ನೇ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಪ್ರಶಸ್ತಿಯು ರೂ 1 ಲಕ್ಷ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.
`ಕನ್ನಡವು ಕನ್ನಡವ ಕನ್ನಡಿಸತಿರಬೇಕು ಎಂದು ಹೇಳಿದ ಬೇಂದ್ರೆ ಅವರು ನವೋದಯದ ಅಗತ್ಯವನ್ನು ಪ್ರತಿನಿತ್ಯ ತಮ್ಮ ಕವಿತೆಗಳಲ್ಲಿ ಕಾಣಿಸುತ್ತಿದ್ದರು. ಅಕ್ಷರಗಳ ಲೋಕದಲ್ಲಿ ಅನಕ್ಷರಸ್ಥರಿಗೆ ಅಸ್ತಿತ್ವ ಕೊಡಿಸಿದರು. ಹೊರಗಿನಿಂದ ಪಡೆದ ಮೌಲ್ಯಗಳನ್ನು ಒಳಗಡೆ ಅಳವಡಿಸಿಕೊಂಡರು' ಎಂದು ಪ್ರಶಸ್ತಿ ಸ್ವೀಕರಿಸಿದ ಡಾ.ರಾಘವೇಂದ್ರರಾವ್ ಹೇಳಿದರು.
`ಧಾರ್ಮಿಕ ಮೂಲಭೂತವಾದವನ್ನು ಎಂದಿಗೂ ಒಪ್ಪದ ಬೇಂದ್ರೆ, ಕನ್ನಡವೊಂದೇ ಕರ್ನಾಟಕವೊಂದೇ ಎಂಬ ಮಾತನ್ನೂ ಒಪ್ಪಲಿಲ್ಲ. ಈ ಮಾತು ಹಿಟ್ಲರ್‌ನ ಸಂಸ್ಕೃತಿ ಬಿಂಬಿಸುತ್ತದೆ ಎಂಬ ಉದ್ದೇಶದಿಂದ ಈ ಆಶಯವನ್ನು ತಿರಸ್ಕರಿಸಿ, ವಿಶ್ವಮಾನವ ಸಂದೇಶವನ್ನು ಒಪ್ಪಿಕೊಂಡಿದ್ದರು' ಎಂದು ವಿಶ್ಲೇಷಿಸಿದರು.
`ಹೊಸ ಪೀಳಿಗೆಯ ಸಾಹಿತ್ಯದ ವಿದ್ಯಾರ್ಥಿಗಳು ಬೇಂದ್ರೆ ಅವರ ಸಾಹಿತ್ಯ ಪರಂಪರೆಯನ್ನು ಮುಂದುವರೆಸಬೇಕು' ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಡಾ.ಶ್ಯಾಮಸುಂದರ ಬಿದರಕುಂದಿ ಆಶಿಸಿದರು.
ಟ್ರಸ್ಟ್‌ನ ಸದಸ್ಯ ಕಾರ್ಯದರ್ಶಿ ಬಿ.ಡಿ.ಹಿರೇಗೌಡರ ಸ್ವಾಗತಿಸಿದರು. ವಿಮರ್ಶಕ ಡಾ.ಜಿ.ಎಸ್.ಆಮೂರ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.