ಬೆಂಗಳೂರು: ಸಾಹಿತ್ಯ, ಜಾನಪದ ಸೇರಿದಂತೆ ಏಳು ಅಕಾಡೆಮಿ ಹಾಗೂ ಎರಡು ಪ್ರಾಧಿಕಾರಗಳ ಅಧ್ಯಕ್ಷ, ಸದಸ್ಯರ ಹುದ್ದೆ ಖಾಲಿಯಾಗಿ ಮೂರು ತಿಂಗಳು ಸಮೀಪಿಸುತ್ತಿದ್ದು, ಈ ಹುದ್ದೆಗಳ ನೇಮಕಾತಿಗೆ ಇನ್ನೂ ಪ್ರಕ್ರಿಯೆ ಆರಂಭವಾಗದಿರುವ ಕುರಿತು ಸಾಂಸ್ಕೃತಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿದ ಒಂದು ವರ್ಷದ ಬಳಿಕ (2014 ಫೆಬ್ರುವರಿ 26)ರಂದು ಏಳು ಅಕಾಡೆಮಿ, ಎರಡು ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿತ್ತು. ಸರ್ಕಾರ ನಾಲ್ಕನೇ ವರ್ಷ ಪೂರೈಸಿದ್ದು, ಇನ್ನೂ ಒಂದು ವರ್ಷ ಈ ಸರ್ಕಾರ ಆಯಸ್ಸು ಇದೆ. ಈ ಅವಧಿಗೆ ಅಧ್ಯಕ್ಷರನ್ನು ನೇಮಕ ಮಾಡಿದರೆ, ಹಿಂದಿನ ಅಧ್ಯಕ್ಷರು ಆರಂಭಿಸಿ ಅರ್ಧಕ್ಕೆ ಬಿಟ್ಟು ಹೋಗಿರುವ ಯೋಜನೆ ಅಥವಾ ಕಾರ್ಯಕ್ರಮಗಳನ್ನು ಮುಂದುವರಿಸಲು ಸಾಧ್ಯ. ಇಲ್ಲದಿದ್ದರೆ ಒಂದು ವರ್ಷ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಕೆಲಸ ಸ್ಥಗಿತವಾಗಲಿದೆ ಎಂಬ ಅಭಿಪ್ರಾಯ ಮೂಡಿದೆ.
‘ಉಮಾಶ್ರೀಗೆ ಸಮಯವಿಲ್ಲ’: ‘ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರಿಗೆ ಅತಿ ದೊಡ್ಡ ಜನಸಮೂಹವನ್ನು ಒಳಗೊಂಡಿರುವ ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಸ್ತುವಾರಿಯೂ ಇದೆ. ಹೀಗಾಗಿ, ಸಂಸ್ಕೃತಿ ಇಲಾಖೆಯ ಕಾರ್ಯಕ್ರಮಗಳತ್ತ ಆಸಕ್ತಿ ತೋರಲು ಸಮಯ ಇಲ್ಲ. ಈ ಕಾರಣಕ್ಕೆ ನೇಮಕಾತಿ ವಿಳಂಬವಾಗಿದೆ’ ಎಂದು ಇಲಾಖೆ ಮೂಲಗಳು ತಿಳಿಸಿವೆ.
‘ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷ, ಸದಸ್ಯರಾಗುವ ಅಪೇಕ್ಷೆ ಇಟ್ಟುಕೊಂಡಿರುವವರು ತಮ್ಮನ್ನು ನೇಮಕ ಮಾಡುವಂತೆ ಮನವಿ ಸಲ್ಲಿಸಿದ್ದಾರೆ. ಸಚಿವರು, ಸಾಂಸ್ಕೃತಿಕ ವಲಯದ ಪ್ರಮುಖರು ಅರ್ಹರು ಹಾಗೂ ತಮ್ಮ ಆಪ್ತರನ್ನು ನೇಮಿಸುವಂತೆ ಶಿಫಾರಸು ಮಾಡಿರುವ ಪತ್ರಗಳು ಬಂದಿವೆ. ಅವೆಲ್ಲವನ್ನೂ ಕ್ರೋಡೀಕರಿಸಿ, ಆಕಾಂಕ್ಷಿಗಳ ಪಟ್ಟಿ ತಯಾರು ಮಾಡುವಂತೆ ಸಚಿವರು ಸೂಚಿಸಿಲ್ಲ. ಸದ್ಯಕ್ಕೆ ಈ ಸಂಬಂಧ ಯಾವುದೇ ಪ್ರಕ್ರಿಯೆ ಆರಂಭವಾಗಿಲ್ಲ.’
‘ಸಚಿವರು ಸೂಚನೆ ನೀಡಿದ ಬಳಿಕ ಕಡತ ಸಿದ್ಧವಾಗಬೇಕು. ನಂತರ ಪಟ್ಟಿ ಅನುಮೋದನೆಗಾಗಿ ಮುಖ್ಯಮಂತ್ರಿ ಮುಂದೆ ಕಡತ ಮಂಡಿಸಬೇಕು. ಆನಂತರವೇ ನೇಮಕಾತಿ ಆದೇಶ ಹೊರಬೀಳಲಿದೆ’ ಎಂದು ಮೂಲಗಳು ತಿಳಿಸಿವೆ.
‘ಕೇವಲ ಒಂದು ವರ್ಷ ಬಾಕಿ ಇರುವಾಗ ನೇಮಕಾತಿ ಮಾಡಿದರೆ ಪಕ್ಷಕ್ಕೆ ಅನುಕೂಲ ಅಥವಾ ಅನಾನುಕೂಲ ಎರಡೂ ಆಗಬಹುದು. ಆಕಾಂಕ್ಷಿಗಳನ್ನು ನೇಮಕ ಮಾಡದೇ ಇದ್ದರೆ ಸರ್ಕಾರದ ವಿರುದ್ಧ ಅವರು ಟೀಕೆ ಮಾಡಬಹುದು. ಇದು ಪಕ್ಷ ಮತ್ತು ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರಬಹುದು. ನೇಮಕ ಮಾಡದೇ ಈ ಸಮಸ್ಯೆ ಎದುರಾಗುವುದಿಲ್ಲ’ ಎಂದು ಕೆಲವರು ತಮ್ಮ ಅಭಿಪ್ರಾಯವನ್ನು ಮುಖ್ಯಮಂತ್ರಿ ಮುಂದೆ ಮಂಡಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಕಾರಣಕ್ಕೆ ಸಿದ್ದರಾಮಯ್ಯ ಕೂಡ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಸೂಚನೆ ನೀಡಿಲ್ಲ.
ಅಧಿಕಾರಿಗಳ ಲಾಬಿ ಕಾರಣ: ‘ಅಧ್ಯಕ್ಷರು ಮತ್ತು ಸದಸ್ಯರು ನೇಮಕವಾದರೆ ರಿಜಿಸ್ಟ್ರಾರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿಬ್ಬಂದಿ ಆಟ ನಡೆಯುವುದಿಲ್ಲ. ಈ ಕಾರಣಕ್ಕಾಗಿ ಅಧ್ಯಕ್ಷರ ನೇಮಕ ಪ್ರಕ್ರಿಯೆ ವಿಳಂಬ ಮಾಡಲು ಅಧಿಕಾರಿಗಳ ಮಟ್ಟದಲ್ಲಿ ದೊಡ್ಡ ಲಾಬಿಯೇ ನಡೆಯುತ್ತದೆ’ ಎಂದು ಹೆಸರು ಹೇಳಲಿಚ್ಛಿಸದ ಮಾಜಿ ಅಧ್ಯಕ್ಷರೊಬ್ಬರು ಹೇಳಿದರು.
‘ಅಧ್ಯಕ್ಷರ ಅವಧಿಯಲ್ಲಿ ರೂಪಿಸಿದ ಎಲ್ಲ ಯೋಜನೆ, ಕಾಮಗಾರಿಗಳಿಗೆ ಸರ್ಕಾರ ಪೂರ್ಣ ಪ್ರಮಾಣದ ಅನುದಾನ ಬಿಡುಗಡೆ ಮಾಡಿರುತ್ತದೆ. ಮಧ್ಯಂತರ ಅವಧಿಯಲ್ಲಿ ಅಧ್ಯಕ್ಷರ ಅವಧಿ ಮುಗಿದರೆ ಕೆಲಸ ಪೂರ್ಣಗೊಂಡಿರುವುದಿಲ್ಲ. ಅನುಮೋದನೆಯಾದ ಅನುದಾನವನ್ನು ತಮಗೆ ಬೇಕಾದಂತೆ ಖರ್ಚು ಮಾಡಿ, ಲಾಭ ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಈ ರೀತಿಯ ವಿಳಂಬವನ್ನೂ ಅಧಿಕಾರಿಗಳು ಮಾಡುತ್ತಾರೆ’ ಎಂದು ಅವರು ವಿವರಿಸಿದರು.
ಉಮಾಶ್ರೀ ವಿರುದ್ಧ ಅಸಮಾಧಾನ
ಬೆಂಗಳೂರು: ‘ರಂಗಸಮಾಜದ ಅಸ್ತಿತ್ವವೇ ಅಪ್ರಸ್ತುತವೆನ್ನುವಂತೆ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿದೆ. ಅದರಲ್ಲೂ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ಹಾಗೂ ರಂಗಸಮಾಜದ ಅಧ್ಯಕ್ಷೆ ಉಮಾಶ್ರೀ ಅವರು ಅದೇ ರೀತಿ ಭಾವಿಸಿರುವಂತಿದೆ’ ಎಂದು ರಂಗಾಯಣದ ಸದಸ್ಯ ಜಿ.ಕೆ.ಗೋವಿಂದರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಗೋವಿಂದರಾವ್, ‘ರಂಗಸಮಾಜದ ಅವಧಿ ಮೂರ್ನಾಲ್ಕು ತಿಂಗಳಲ್ಲಿ ಮುಗಿಯಲಿದೆ. ರಂಗಸಮಾಜ ನಾಲ್ಕು ವರ್ಷಗಳಲ್ಲಿ 8ಕ್ಕಿಂತ ಹೆಚ್ಚು ಬಾರಿ ಸಭೆ ನಡೆಸಿಲ್ಲ ಎಂದೂ ಹೇಳಿದ್ದಾರೆ.
‘ಕಲೆ, ರಂಗಭೂಮಿ, ನಾಟಕ, ಪ್ರೋತ್ಸಾಹಿಸುವುದು ರಂಗಾಯಣದ ನಿರ್ದೇಶಕರಾಗಿದ್ದ ಬಿ.ವಿ.ಕಾರಂತರ ಆಶಯವೂ ಆಗಿತ್ತು. 2013ರಲ್ಲಿ ಸದಸ್ಯನಾಗಿ ನೇಮಕವಾಗಿರುವ ನನಗೆ ಈ ನಿಟ್ಟಿನಲ್ಲಿ ಬೇಸರವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಕಳೆದ ಜನವರಿ 12ರಂದು ನಡೆದ ಸಭೆಗೆ ಸಚಿವೆ ಉಮಾಶ್ರೀ ಗೈರು ಹಾಜರಾಗಿದ್ದರು. ಇಲಾಖೆ ಪ್ರಧಾನ ಕಾರ್ಯದರ್ಶಿ ಆಗಿದ್ದ ಉಮಾಶಂಕರ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, 3 ರಂಗಾಯಣಗಳಿಗೆ ಅರ್ಹರಾದ ನಿರ್ದೇಶಕರನ್ನು ರಂಗಸಮಾಜದ ಸದಸ್ಯರು ಸೂಚಿಸಿದ್ದರು. ಮರು ದಿನ ನಡೆದ ಸಭೆಯಲ್ಲಿ ಸಚಿವೆ ನಿರ್ದೇಶಕರ ನೇಮಕದ ವಿಷಯ ಚರ್ಚೆಗೆ ಬಂದಾಗ ನನ್ನದೇ ಹೆಸರುಗಳ ಪಟ್ಟಿ ಇದೆ ಎಂದು ಹೇಳಿ ಬಹರೂಪಿ ಕಾರ್ಯಕ್ರಮ ಉದ್ಘಾಟನೆಗೆ ತಯಾರಾಗಬೇಕೆಂದು ದಿಢೀರನೇ ಸಭೆಯಿಂದ ನಿರ್ಗಮಿಸಿದ್ದರು. ಸದಸ್ಯರಿಗೆ ಇದಕ್ಕಿಂತ ದೊಡ್ಡ ಅವಮಾನ ಮತ್ತೊಂದಿಲ್ಲ’ ಎಂದಿದ್ದಾರೆ.
‘ಕಳೆದ ಒಂದು ವರ್ಷದಿಂದಲೂ ಶಿವಮೊಗ್ಗ, ಕಲಬುರ್ಗಿ ರಂಗಾಯಣಗಳಲ್ಲಿ ನೀರ್ದೇಶಕರಿಲ್ಲ. ಹಂಗಾಮಿ ನಿರ್ದೇಶಕರು, ಉಪನಿರ್ದೇಶಕರು ರಂಗಾಯಣ ಚಟುವಟಿಕೆ ಉಳಿಸಿಕೊಂಡಿದ್ದಾರೆ ಎನ್ನುವುದು ಸಮರ್ಥನೀಯವಲ್ಲ. ಇದು ಸರಿಯಾದ ನಿಲುವು ಎನ್ನುವುದಾದರೆ ನಿರ್ದೇಶಕರನ್ನು ಏತಕ್ಕೆ ನೇಮಿಸಬೇಕು. ಸಮರ್ಥ ನಿರ್ದೇಶಕರು ಇಲ್ಲದೆ ರಂಗಾಯಣಗಳು ಅನಾಥವಾಗಿವೆ ಎಂದಿದ್ದಾರೆ.
‘ಮೈಸೂರು ರಂಗಾಯಣದ ನಿರ್ದೇಶಕರ ಅವಧಿ ಮುಗಿದು 8 ತಿಂಗಳು ಕಳೆದಿದೆ. ಅಲ್ಲಿ ಕೂಡ ಚಟುವಟಿಕೆ ಯಾಂತ್ರಿಕವಾಗಿ ನಡೆದಿರುವುದನ್ನು ಬಿಟ್ಟರೆ, ಜೀವಂತಿಕೆ ಕಳೆದುಕೊಂಡಿದೆ. ಅಲ್ಲಿಯ ಕಲಾವಿದರು ನಿರ್ದೇಶಕರನ್ನು ಯಾವಾಗ ನೀಡುತ್ತೀರಿ ಎಂದು ಪ್ರಶ್ನಿಸುತ್ತಿದ್ದಾರೆ. ಶಿವಮೊಗ್ಗ, ಕಲಬುರ್ಗಿಯಲ್ಲೂ ಪ್ರಶ್ನಿಸುತ್ತಿದ್ದಾರೆ. ಇದನ್ನು ಸಹಿಸಿಕೊಂಡು ಇಷ್ಟು ದಿನ ಕಾದಿದ್ದೇವೆ’ ಎಂದು ನೋವು ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.