ADVERTISEMENT

ಅಟಾರ್ನಿ ಜನರಲ್‌ ಮಧ್ಯ ಪ್ರವೇಶಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2014, 19:30 IST
Last Updated 7 ಸೆಪ್ಟೆಂಬರ್ 2014, 19:30 IST

ಬೆಂಗಳೂರು: ‘ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮದ ವಿಷಯವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುವಾಗ ಸ್ವತಃ ಅಟಾರ್ನಿ ಜನರಲ್‌ ಅವರು ಹಾಜರಿದ್ದು ಕರ್ನಾಟಕ ಸರ್ಕಾರದ ವಾದವನ್ನು ಎತ್ತಿ ಹಿಡಿಯಬೇಕು’ ಎಂದು ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಾಷಾತಜ್ಞರು ಒಕ್ಕೊರಲಿನ ಒತ್ತಾಯ ಮಾಡಿದರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಜತೆ­ಯಾಗಿ ಆಯೋಜಿಸಿದ್ದ ‘ಶಾಲಾ ಶಿಕ್ಷಣದಲ್ಲಿ ದೇಶಭಾಷೆಗಳು’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಅವರು ಈ ಸಂಬಂಧ ಗೊತ್ತುವಳಿ ಸ್ವೀಕರಿಸಿದರು.

‘ಮಾಧ್ಯಮದ ವಿಷಯವಾಗಿ ಈಗಾಗಲೇ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಿದ್ದು, ಮಾತೃಭಾಷೆ ಮಾಧ್ಯಮದ ಮಹತ್ವವನ್ನು ಕೋರ್ಟ್‌ಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಅಟಾರ್ನಿ ಜನರಲ್‌ ಅವರ ಮಧ್ಯಸ್ಥಿಕೆಗೆ ಅಗತ್ಯವಾದ ನಿರ್ದೇಶನ ನೀಡಬೇಕು’ ಎಂದು ಗೊತ್ತುವಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಲಾಗಿದೆ.

‘ಮಾತೃಭಾಷೆಯಲ್ಲಿ ಶಿಕ್ಷಣ ನೀಡಲು ಅವಕಾಶ ಕಲ್ಪಿಸುವಂತೆ ಸಂವಿಧಾನ ಮತ್ತು ಶಿಕ್ಷಣ ಹಕ್ಕು ಕಾಯ್ದೆಗೆ ಅಗತ್ಯ ತಿದ್ದುಪಡಿ ತರಬೇಕು’ ಎಂಬ ನಿರ್ಣಯವನ್ನೂ ಕೈಗೊಳ್ಳಲಾಗಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯ ನಟರಾಜ್‌ ಹುಳಿಯಾರ್‌ ಎರಡೂ ನಿರ್ಣಯಗಳನ್ನು ಓದಿದರು. ಸಭೆ ಒಕ್ಕೊರಲಿನಿಂದ ಬೆಂಬಲ ವ್ಯಕ್ತಪಡಿಸಿತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ದಕ್ಷಿಣ ವಲಯ ಪ್ರಾದೇಶಿಕ ಸಲಹಾ ಸಮಿತಿ ಸದಸ್ಯ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, ‘ರಾಜಕೀಯ ಒತ್ತಡ, ಕಾನೂನು ಸಮರ, ತಜ್ಞರ ಜತೆಗಿನ ಸಮಾಲೋಚನೆ ಮತ್ತು ಜನಾಂದೋಲನದ ಮೂಲಕ ಸಮಸ್ಯೆಗೆ ಪರಿಹಾರ ಹುಡುಕಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ಜಾತಿ, ಆಸ್ತಿ, ಇಂಗ್ಲಿಷ್‌ ಇವು ಮೂರರಲ್ಲಿ ಎರಡರ ಬಲವಿದ್ದರೆ ಆತ ಮೇಲ್ಜಾತಿಗೆ ಸೇರ್ಪಡೆಯಾದಂತೆ’ ಎಂಬ ರಾಮ­ಮನೋಹರ  ಲೋಹಿಯಾ ಅವರ ಮಾತು ನೆನಪಿಸಿಕೊಂಡ ಅವರು, ‘ಎಲ್ಲ ಭಾಗ್ಯಕ್ಕೂ ಇಂಗ್ಲಿಷ್‌ ರಹದಾರಿ ಎಂಬ ಅಭಿಪ್ರಾಯ ವ್ಯಾಪಿಸಿದ್ದು, ಈ ರೂಢಿಗತ ಮಿತ್‌ಗೆ ಏಟು ನೀಡಬೇಕಿದೆ’ ಎಂದು ಹೇಳಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ದಕ್ಷಿಣ ವಲಯ ಪ್ರಾದೇಶಿಕ ಸಲಹಾ ಸಮಿತಿ ಸಂಚಾಲಕ ಪ್ರೊ.ರಾಧಾಕೃಷ್ಣನ್‌, ‘ಲಾಭಕ್ಕಾಗಿ ಕೈಗಾರಿಕೆ ಇಲ್ಲವೆ ಸಾರಾಯಿ ತಯಾರಿಕೆ ಘಟಕ ಸ್ಥಾಪನೆ ಮಾಡಿದಂತೆ ಶಾಲೆ ತೆರೆಯುವುದೂ ಈಗ ಲಾಭದಾಯಕ ಉದ್ಯಮವಾಗಿದ್ದು, ದನದ ಕೊಟ್ಟಿಗೆಗಳಲ್ಲೂ ಅಂತರರಾ­ಷ್ಟ್ರೀಯ ಇಂಗ್ಲಿಷ್‌ ಶಾಲೆಗಳು ತಲೆ ಎತ್ತುತ್ತಿವೆ. ಇಂಗ್ಲಿಷ್‌ ಸರಿಯಾಗಿ ಬಾರದವರೇ ಅಲ್ಲಿ ಶಿಕ್ಷಕರಾಗಿ ನೇಮಕ ಆಗುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.