ADVERTISEMENT

ಅತಿಥಿ ಉಪನ್ಯಾಸಕರ ಕಾಯಂ ಅಸಾಧ್ಯ: ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ

ಪ್ರಥಮ ದರ್ಜೆ ಕಾಲೇಜು ಉದ್ಘಾಟನಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2016, 9:54 IST
Last Updated 24 ಅಕ್ಟೋಬರ್ 2016, 9:54 IST
ಅತಿಥಿ ಉಪನ್ಯಾಸಕರ ಕಾಯಂ ಅಸಾಧ್ಯ: ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ
ಅತಿಥಿ ಉಪನ್ಯಾಸಕರ ಕಾಯಂ ಅಸಾಧ್ಯ: ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ   

ಹುಬ್ಬಳ್ಳಿ: ‘ರಾಜ್ಯದಲ್ಲಿ ಸರಿಸುಮಾರು 13 ಸಾವಿರ ಅತಿಥಿ ಉಪನ್ಯಾಸಕರಿದ್ದು, ಅವರೆಲ್ಲರನ್ನೂ ಕಾಯಂ ಮಾಡುವುದು ಅಸಾಧ್ಯ. ಇದರಿಂದ ಸರ್ಕಾರದ ಮೇಲೆ ಭಾರಿ ಆರ್ಥಿಕ ಹೊರೆ ಬೀಳುತ್ತದೆ’ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಸ್ಪಷ್ಟಪಡಿಸಿದರು.

ಇಲ್ಲಿನ ಪತ್ರಕರ್ತರ ನಗರದಲ್ಲಿ ನಿರ್ಮಿಸಲಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ‘ವಾಸ್ತವವಾಗಿ ನಮಗೆ ಅಷ್ಟೊಂದು ಅತಿಥಿ ಉಪನ್ಯಾಸಕರು ಅಗತ್ಯವಿಲ್ಲ. ಈಗಾಗಲೇ 2160 ಸಹಾಯಕ ಪ್ರಾಧ್ಯಾಪಕರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಅದನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು. ಅದಾದ ಬಳಿಕ ಇನ್ನು 300 ಮಂಜೂರಾದ ಹುದ್ದೆಗಳಷ್ಟೇ ಖಾಲಿ ಉಳಿದಂತಾಗುತ್ತದೆ. ಅವುಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು.

‘ಆದರೆ, ಅತಿಥಿ ಉಪನ್ಯಾಸಕರನ್ನು ಕಾಯಂ ಮಾಡಿಕೊಳ್ಳಲು ಆಗದ ಕೆಲಸ. ನಾನು ಯಾವಾಗಲೂ ನೇರವಾಗಿಯೇ ಮಾತನಾಡುವ ವ್ಯಕ್ತಿ. ಆಗುವ ಕೆಲಸವಿದ್ದರೆ ಆಗುತ್ತದೆ ಅನ್ನುತ್ತೇನೆ. ಇಲ್ಲದಿದ್ದರೆ ಇಲ್ಲ ಎಂದೇ ಹೇಳುತ್ತೇನೆ. ಅತಿಥಿ ಉಪನ್ಯಾಸಕರ ಸಮಾಧಾನಕ್ಕಾಗಿ ಭರವಸೆ ಕೊಡುವುದು ನನ್ನಿಂದಾಗದು. ಕಾಯಂ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದಾಗ ಇತರರಂತೆ ಅತಿಥಿ ಉಪನ್ಯಾಸಕರೂ ಅರ್ಜಿ ಸಲ್ಲಿಸಿ ಪರೀಕ್ಷೆಗೆ ಹಾಜರಾಗಬಹುದು. ವಿಶೇಷ ಅವಕಾಶವನ್ನು ಕಲ್ಪಿಸಲು ಆಗದು’ ಎಂದರು.

ADVERTISEMENT

ಎಲ್ಲ ಮಾಹಿತಿ ವೆಬ್‌ಸೈಟ್‌ಗೆ: ರಾಜ್ಯದಲ್ಲಿ ಒಟ್ಟು 412 ಪ್ರಥಮ ದರ್ಜೆ ಕಾಲೇಜುಗಳಿದ್ದು, ಅವುಗಳ ಎಲ್ಲ ಮಾಹಿತಿಯನ್ನೂ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಲಾಗುವುದು. ಕಾಲೇಜುಗಳ ಕಟ್ಟಡವಿರುವ ಸರ್ವೆ ನಂಬರ್‌, ಪ್ರಾಚಾರ್ಯರು, ಸಿಬ್ಬಂದಿ, ಒಟ್ಟು ಕೊಠಡಿಗಳು, ಬೆಂಚುಗಳು, ನೋಟಿಸ್‌ ಬೋರ್ಡ್‌, ಶೌಚಾಲಯದ ಸ್ಥಿತಿಗತಿಯ ವಿವರಗಳನ್ನೂ ವೆಬ್‌ಸೈಟ್‌ನಲ್ಲೇ ಪ್ರಕಟಿಸಲಾಗುವುದು ಎಂದು ರಾಯರೆಡ್ಡಿ ಹೇಳಿದರು.

ಕೇವಲ 44 ಪ್ರಾಚಾರ್ಯರು: 412 ಕಾಲೇಜುಗಳಿದ್ದರೂ ಕೇವಲ 44 ಪ್ರಾಚಾರ್ಯರಿದ್ದಾರೆ. ಉಳಿದವರು ಪ್ರಭಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಈಗ ಇರುವ ಪ್ರಾಧ್ಯಾಪಕರ ಪೈಕಿ ಸೇವಾ ಹಿರಿತನ ಇರುವವರನ್ನು ಗುರುತಿಸಿ ಪ್ರಾಚಾರ್ಯರ ಹುದ್ದೆ ನೀಡಲಾಗುವುದು ಎಂದು ಭರವಸೆ ನೀಡಿದರು.

‘ಕಾಲೇಜುಗಳಲ್ಲಿನ ಮೂಲಸೌಕರ್ಯ ಅಭಿವೃದ್ಧಿಗಾಗಿ ಮಾಸ್ಟರ್‌ ಪ್ಲಾನ್‌ ತಯಾರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ವಿಶ್ವಬ್ಯಾಂಕ್‌ ಆರ್ಥಿಕ ನೆರವು ನೀಡಿದರೆ ಎಲ್ಲವೂ ಕಾರ್ಯಗತಗೊಳ್ಳಲಿದೆ. ಇದರಲ್ಲಿ ಕೇಂದ್ರ ಸರ್ಕಾರ ಕೈಜೋಡಿಸುವಂತೆ ಜಗದೀಶ ಶೆಟ್ಟರ್‌ ಪ್ರಧಾನಮಂತ್ರಿಯವರ ಮನವೊಲಿಸಬೇಕು’ ಎಂದರು.

ವಿಧಾನಸಭೆ ವಿರೋಧಪಕ್ಷದ ನಾಯಕ ಜಗದೀಶ ಶೆಟ್ಟರ್‌ ಮಾತನಾಡಿ, ‘ಹುಬ್ಬಳ್ಳಿ ಪ್ರಮುಖ ನಗರವಾದರೂ 2001ರ ಮೊದಲು ಪದವಿ ಕಾಲೇಜು ಇರಲಿಲ್ಲ. ಈ ಬಗ್ಗೆ ಅಂದು ಮುಖ್ಯಮಂತ್ರಿಗಳಾಗಿದ್ದ ಎಸ್‌.ಎಂ. ಕೃಷ್ಣ ಅವರ ಗಮನಕ್ಕೆ ತಂದಾಗ ಕೂಡಲೇ ಕಾಲೇಜು ಮಂಜೂರು ಮಾಡಿದ್ದರು. ನಾನು ಮುಖ್ಯಮಂತ್ರಿಯಾದಾಗ ಜಾಗ ಗುರುತಿಸಿ, ಕಟ್ಟಡ ನಿರ್ಮಾಣಕ್ಕೆ ₹ 2.5 ಕೋಟಿ ಅನುದಾನ ನೀಡಿದ್ದೆ’ ಎಂದು ಹೇಳಿದರು.

‘3 ಎಕರೆ ಪ್ರದೇಶ ಕಾಲೇಜು ನಿರ್ಮಾಣವಾಗಲಿದ್ದು, ಸುಸಜ್ಜಿತ ಪ್ರಯೋಗಾಲಯ, ಇನ್ನಷ್ಟು ಕೊಠಡಿಗಳ ನಿರ್ಮಾಣಕ್ಕೆ ಇನ್ನಷ್ಟು ಅನುದಾನ ಮಂಜೂರು ಮಾಡಬೇಕು. ವಿದ್ಯಾರ್ಥಿಗಳಿಗಾಗಿ ಪಾಲಿಟೆಕ್ನಿಕ್‌ ಕಾಲೇಜಿನ ಕಟ್ಟಡಕ್ಕೆ ಜಾಗವನ್ನು ವಿದ್ಯಾನಗರದ ಮಹಿಳಾ ಪಾಲಿಟೆಕ್ನಿಕ್‌ ಕ್ಯಾಂಪಸ್‌ನಲ್ಲಿ ಗುರುತಿಸಲಾಗಿದ್ದು, ಅದಕ್ಕೂ ಹಣ ಬಿಡುಗಡೆ ಮಾಡಬೇಕು’ ಎಂದು ಮನವಿ ಮಾಡಿದರು.

ವಿಧಾನಪರಿಷತ್‌ ಸದಸ್ಯ ಪ್ರೊ. ಎಸ್‌.ವಿ. ಸಂಕನೂರ, ‘ರಾಜ್ಯದಲ್ಲಿ ಒಟ್ಟು 3 ಸಾವಿರ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡಬೇಕು’ ಎಂದು ಮನವಿ ಮಾಡಿದರು.

ವಿಧಾನಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚೈತ್ರಾ ಶಿರೂರ, ಪಾಲಿಕೆ ಸದಸ್ಯೆ ರತ್ನಾ ಎಂ. ಪಾಟೀಲ, ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯರಾದ ಪ್ರೊ. ಸಿ.ಸಿ. ದೀಕ್ಷಿತ, ಅಂದಾನಿಗೌಡ ಎಲ್‌. ಪೊಲೀಸ್‌ ಪಾಟೀಲ, ಎಂ.ಎಸ್‌. ಪಾಟೀಲ, ವಿಶ್ವನಾಥ ಎಸ್‌. ಪಾಟೀಲ, ಬಸವರಾಜ ಉಳ್ಳಾಗಡ್ಡಿಮಠ, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಡಾ. ಬಿ.ಆರ್. ಪಾಟೀಲ, ಪ್ರಾಚಾರ್ಯೆ ಡಾ. ಎಚ್‌.ಜಿ. ಗೀತಾ ವೇದಿಕೆಯಲ್ಲಿದ್ದರು.

ಐಐಟಿಯಲ್ಲಿ ಮೀಸಲು: ನಿರಾಶೆ ತಂದ ಪತ್ರ
ಧಾರವಾಡದಲ್ಲಿ ಸ್ಥಾಪನೆಯಾಗಿರುವ ಐಐಟಿಯಲ್ಲಿ ಕನ್ನಡಿಗ ವಿದ್ಯಾರ್ಥಿಗಳಿಗೆ ಶೇ 25ರಷ್ಟು ಮೀಸಲಾತಿ ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದೆವು. ಆದರೆ, ಈ ಸಂಬಂಧ ಮಾನವ ಸಂಪನ್ಮೂಲ ಸಚಿವ ಪ್ರಕಾಶ್‌ ಜಾವಡೇಕರ್‌, ಮೀಸಲು ಅಸಾಧ್ಯ ಎಂಬ ಒಕ್ಕಣೆಯುಳ್ಳ ಪತ್ರ ನಮಗೆ ನಿರಾಶೆ ತಂದಿದೆ ಎಂದು ಬಸವರಾಜ ರಾಯರೆಡ್ಡಿ ಬೇಸರ ವ್ಯಕ್ತಪಡಿಸಿದರು.

ಪ್ರಸ್ತುತ ರಾಜ್ಯದ ಏಳು ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಮೀಸಲು ಇರದಿದ್ದರೆ, ಐಐಟಿ ಕೇವಲ ‘ಶೋ ಪೀಸ್‌’ ಆದಂತಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.