ಬೆಂಗಳೂರು: ‘ಯು.ಆರ್. ಅನಂತಮೂರ್ತಿ ಅವರೊಬ್ಬ ಬಹುದೊಡ್ಡ ಚಿಂತಕ ಎಂದು ಸೋಗುಹಾಕಿಕೊಂಡು ಹೇಳುವುದರಲ್ಲಿ ಅರ್ಥವಿಲ್ಲ. ಆದರೆ, ಅವರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ವ್ಯಕ್ತಿ. ಎ.ಕೆ. ರಾಮಾನುಜನ್ ಸೇರಿದಂತೆ ಹಲವರಿಂದ ಅವರು ಸಾಕಷ್ಟು ಹೊಳಹುಗಳನ್ನು ಪಡೆದುಕೊಂಡಿದ್ದಾರೆ’ ಎಂದು ಹಿರಿಯ ಸಾಹಿತಿ ಗಿರೀಶ ಕಾರ್ನಾಡ ಅಭಿಪ್ರಾಯಪಟ್ಟರು.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಶುಕ್ರವಾರ ಆರಂಭವಾದ ಮೂರು ದಿನಗಳ ‘ಬೆಂಗಳೂರು ಸಾಹಿತ್ಯ ಉತ್ಸವ’ದಲ್ಲಿ ‘ಅನಂತಮೂರ್ತಿಗೆ ಶ್ರದ್ಧಾಂಜಲಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಕೆಲವು ಸಂದರ್ಭಗಳಲ್ಲಿ ಸೃಷ್ಟಿಯಾದ ವಿವಾದ, ಎದುರಾದ ಬೆದರಿಕೆಗಳನ್ನೂ ಅನಂತಮೂರ್ತಿ ಆನಂದದಿಂದ ಸ್ವೀಕರಿಸಿದರು’ ಎಂಬ ಮೆಚ್ಚುಗೆಯ ಮಾತು ಹೇಳಿದರು.
ಸಂಸದನಾಗುವ ಆಸೆಯಿತ್ತು: ‘ಯುಆರ್‌ಎ ಅವರಿಗೆ ಸಂಸತ್ ಸದಸ್ಯರಾಗುವ ಆಸೆ ಇತ್ತು. ಆದರೆ, ಅವಕಾಶ ಸಿಗಲಿಲ್ಲ. ಆ ಸ್ಥಾನಕ್ಕಾಗಿ ಹುಚ್ಚನಂತೆ ಹಟಕ್ಕೆ ಬಿದ್ದಿದ್ದರು’ ಎಂದು ವ್ಯಂಗ್ಯವಾಡಿದರು.
ಚಿಂತಕನಲ್ಲ, ಸೂಕ್ಷ್ಮಜ್ಞ:‘ಅನಂತಮೂರ್ತಿ ಬಹುದೊಡ್ಡ ಚಿಂತಕ ಎಂದು ಸೋಗುಹಾಕಿಕೊಂಡು ಹೇಳುವುದರಲ್ಲಿ ಅರ್ಥವಿಲ್ಲ. ಅವರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ವ್ಯಕ್ತಿ. ಎ.ಕೆ. ರಾಮಾನುಜನ್ ಸೇರಿದಂತೆ ಹಲವರಿಂದ ಸಾಕಷ್ಟು ಹೊಳಹುಗಳನ್ನು ಪಡೆದುಕೊಂಡಿದ್ದರು’ ಎಂದೂ ಅಭಿಪ್ರಾಯಪಟ್ಟರು.
‘ಈ ಮುಖವನ್ನು ನೋಡಿ’: ಜೆಡಿಎಸ್ ಮುಖಂಡ ಎಚ್.ಡಿ. ಕುಮಾರಸ್ವಾಮಿ ಅವರು ಒಂದು ಸಂದರ್ಭದಲ್ಲಿ ‘ಯಾರ್ರೀ ಅನಂತಮೂರ್ತಿ’ ಎಂದು ಬಹಿರಂಗವಾಗಿ ಪ್ರಶ್ನಿಸಿದ್ದರು. ಆದರೆ, ಅದಾದ ಕೆಲವು ವರ್ಷಗಳ ನಂತರ ಅನಂತಮೂರ್ತಿ ಅವರು, ಉಪವಾಸ ಕುಳಿತಿದ್ದ ಕುಮಾರಸ್ವಾಮಿ ಅವರಿಗೆ ಹಣ್ಣಿನ ರಸ ಕುಡಿಸುತ್ತಿರುವ ಚಿತ್ರ ಪತ್ರಿಕೆಗಳಲ್ಲಿ ಪ್ರಕಟವಾಯಿತು. ಅನಂತಮೂರ್ತಿ ಅವರ ಬಗ್ಗೆ ಮಾತನಾಡುವಾಗ ಈ ಮುಖವನ್ನೂ ಹೇಳಬೇಕು ಎಂದು ಕಾರ್ನಾಡ ಅಭಿಪ್ರಾಯಪಟ್ಟರು.
ಅನಂತಮೂರ್ತಿ ಅವರಲ್ಲಿನ ಸಂಕೀರ್ಣತೆಗಳನ್ನು ಒಪ್ಪಿಕೊಂಡು, ಅವರನ್ನು ಅರ್ಥಮಾಡಿಕೊಳ್ಳಬೇಕು. ಅವರ ಒಂದೇ ಮುಖವನ್ನು ತೋರಿಸುವುದು ಸರಿಯಲ್ಲ. ಸಾಮಾಜಿಕ, ರಾಜಕೀಯ ವಿಚಾರಗಳ ಕುರಿತು ದಿಟ್ಟ ನಿಲುವು ತಾಳುತ್ತಿದ್ದ ವ್ಯಕ್ತಿ ಅನಂತಮೂರ್ತಿ. ಅಂತಹ ವ್ಯಕ್ತಿಯೊಬ್ಬ ಇಲ್ಲವಾದ ಶೂನ್ಯಭಾವ ಅವರ ನಿಧನದಿಂದ ಸೃಷ್ಟಿಯಾಗಿದೆ. ‘ಸಂಸ್ಕಾರ’ ಕಾದಂಬರಿ ಓದಿದ ನಂತರ ನನ್ನ ಜೀವನ ಮತ್ತು ಗ್ರಹಿಕೆ ಸಂಪೂರ್ಣವಾಗಿ ಬದಲಾಯಿತು ಎಂದು ಮೆಚ್ಚುಗೆ ಸೂಚಿಸಿದರು.
‘ಸಾಲಿಗ್ರಾಮ ಎಸೆದರೂ...’: ‘ನಾನು ಸಾಲಿಗ್ರಾಮವನ್ನು ಎಸೆದೆ, ಜನಿವಾರ ಕಿತ್ತುಹಾಕಿದೆ, ಕ್ರಿಶ್ಚಿಯನ್ ಯುವತಿಯ ಮದುವೆಯಾದೆ ಎಂದು ಅನಂತಮೂರ್ತಿ ಹೇಳಿಕೊಂಡರು. ಆದರೆ ನಂತರದ ದಿನಗಳಲ್ಲಿ ಗಾಯತ್ರಿ ಮಂತ್ರ ಪಠಣ ಮಾಡುತ್ತಿದ್ದರು. ಅವರ ಬಗ್ಗೆ ನನಗಿರುವ ತಕರಾರು ಇದು’ ಎಂದು ಕಲಾವಿದ ಎಸ್.ಜಿ. ವಾಸುದೇವ್ ಹೇಳಿದರು.
ಸಂಕೀರ್ಣತೆಯ ಹೇಳುವ ಪುಸ್ತಕ ಎಲ್ಲಿದೆ?
ಬೆಂಗಳೂರು ಇಷ್ಟೊಂದು ಬೆಳೆದಿದೆ. ಆದರೆ ಈ ನಗರದ ಸಂಕೀರ್ಣತೆಗಳನ್ನು ಇಡಿಯಾಗಿ ಕಟ್ಟಿಕೊಡುವ ಒಂದೇ ಒಂದು ಪುಸ್ತಕ ಇದೆಯಾ? ನಾನಂತೂ ಅಂಥದ್ದೊಂದು ಪುಸ್ತಕವನ್ನು ಕಂಡಿಲ್ಲ. ಕೆಲವು ಸಣ್ಣ ಕತೆಗಳು ಬಂದಿರಬಹುದು. ಆದರೆ ಕಾದಂಬರಿ ಇಲ್ಲ.
– ಗಿರೀಶ ಕಾರ್ನಾಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.