ಬೆಂಗಳೂರು: ‘ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಸುಮಾರು 1,250 ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ಶೀಘ್ರದಲ್ಲಿ ಅಧಿಸೂಚನೆ ಹೊರಡಿಸಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಮಾತನಾಡಿದ ಅವರು, ‘ನೇಮಕಾತಿಗೆ ಆರ್ಥಿಕ ಇಲಾಖೆ ಬುಧವಾರ ಒಪ್ಪಿಗೆ ನೀಡಿದೆ. ಈ ಕಾಲೇಜುಗಳಲ್ಲಿ ಹತ್ತು ವರ್ಷಗಳಿಂದ ಉಪನ್ಯಾಸಕರ ನೇಮಕ ಆಗಿಲ್ಲ’ ಎಂದರು.
‘412 ಸರ್ಕಾರಿ ಕಾಲೇಜುಗಲ್ಲಿ 3,000 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳು ಖಾಲಿ ಇವೆ. ಈ ಪೈಕಿ, 2,160 ಹುದ್ದೆಗಳನ್ನು ಮುಂದಿನ ತಿಂಗಳ ಒಳಗಾಗಿ ಭರ್ತಿ ಮಾಡುವ ಪ್ರಕ್ರಿಯೆ ಮುಂದುವರಿದಿದೆ’ ಎಂದರು.
‘ಈ ಕಾಲೇಜುಗಳ ಪೈಕಿ 390ರಲ್ಲಿ ಕಾಯಂ ಪ್ರಾಚಾರ್ಯರು ಇಲ್ಲ. ಬಡ್ತಿ ನೀಡುವ ಮೂಲಕ ಈ ಹುದ್ದೆಗಳನ್ನು ತುಂಬಬೇಕೇ ಅಥವಾ ನೇರ ನೇಮಕಾತಿ ನಡೆಸಬೇಕೇ ಎಂಬ ಗೊಂದಲ ಇದೆ. ವಾರದೊಳಗೆ ಈ ಕುರಿತು ತೀರ್ಮಾನ ಕೈಗೊಂಡು, ವಿಶೇಷ ನೇಮಕಾತಿ ನಿಯಮ ರೂಪಿಸುವ ಬಗ್ಗೆ ಚರ್ಚೆ ನಡೆದಿದೆ’ ಎಂದು ಅವರು ಹೇಳಿದರು.
‘ಪ್ರಸಕ್ತ ಸಾಲಿನಲ್ಲಿ ಪ್ರಥಮ ವರ್ಷ ಪದವಿ ಕಲಿಯುವ 1.86 ಲಕ್ಷ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ನೀಡಲು ಜಾಗತಿಕ ಟೆಂಡರ್ ಕರೆಯಲಾಗಿದೆ. ಬ್ರ್ಯಾಂಡೆಡ್ ಕಂಪೆನಿಯಿಂದ ಈ ಲ್ಯಾಪ್‌ಟಾಪ್‌ಗಳನ್ನು ಖರೀದಿಸಿ ನೀಡಲಾಗುವುದು’ ಎಂದರು.
‘ರಾಜ್ಯ ಸರ್ಕಾರ ಐಐಟಿ ಸ್ಥಾಪನೆಗೆ ಧಾರವಾಡದಲ್ಲಿ 470 ಎಕರೆ ಜಾಗ ಉಚಿತವಾಗಿ ನೀಡಿದೆ. ಆದರೆ, ಕಳೆದ ಸಾಲಿನಲ್ಲಿ ಕರ್ನಾಟಕದ ಆರು ವಿದ್ಯಾರ್ಥಿಗಳಿಗೆ ಮಾತ್ರ ಅಲ್ಲಿ ಪ್ರವೇಶ ಸಿಕ್ಕಿದೆ. ಐಐಟಿಯಲ್ಲಿ ಸ್ಥಳೀಯರಿಗೆ ಅನುಕೂಲ ಮಾಡಿಕೊಡಲು ಶೇ 25ರಷ್ಟು ಮೀಸಲಾತಿ ನೀಡಬೇಕು ಎಂಬ ರಾಜ್ಯದ ಬೇಡಿಕೆಗೆ ಕೇಂದ್ರ ಮನ್ನಣೆ ನೀಡಿಲ್ಲ. ಈ ಬಗ್ಗೆ ಮತ್ತೊಮ್ಮೆ ಪತ್ರ ಬರೆಯಲಾಗಿದೆ’ ಎಂದರು.
‘ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ (ಕೆಎಸ್ಓಯು) ಮಾನ್ಯತೆ ನೀಡುವಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ಐದು ಬಾರಿ ಭೇಟಿ ಮಾಡಿ ಮನವಿ ಮಾಡಿದ್ದೇನೆ. ಇದೀಗ ಪ್ರಧಾನಿ ಅವರಿಗೆ ಮುಖ್ಯಮಂತ್ರಿ ಪತ್ರ ಬರೆದಿದ್ದಾರೆ’ ಎಂದರು.
‘ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ರಾಯಚೂರಿನಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸಲಾಗುತ್ತಿದೆ. ವಿಶ್ವವಿದ್ಯಾಲಯಗಳಿಗೆ ಶರಣರ, ಸಂತರ, ಅಂಬೇಡ್ಕರ್ ಹೆಸರಿಡುವ ಕುರಿತು ಚರ್ಚೆ ನಡೆದಿದೆ. ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಬಸವೇಶ್ವರ ವಿಶ್ವವಿದ್ಯಾಲಯ ಎಂದು ಹೆಸರಿಡುವ ಚಿಂತನೆ ನಡೆದಿದೆ’ ಎಂದು ಸಚಿವರು ವಿವರಿಸಿದರು.
‘ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ 16 ಸರ್ಕಾರಿ ವಸತಿ ಪ್ರಥಮ ದರ್ಜೆ ಕಾಲೇಜುಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಈ ಕಾಲೇಜುಗಳ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ₹ 250 ಕೋಟಿ ನೀಡಲಿದೆ. ಹೈದರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ನಿಧಿಯಿಂದ ₹ 150 ಕೋಟಿ ಭರಿಸಲಾಗುವುದು’ ಎಂದರು.
‘ಸರ್ಕಾರಿ ಪದವಿ ಕಾಲೇಜುಗಳಲ್ಲಿ ಮೂಲಸೌಕರ್ಯ ಒದಗಿಸಲು ಮಧ್ಯಮಾವಧಿ ಆರ್ಥಿಕ ಯೋಜನೆ ಸಿದ್ಧಪಡಿಸಲಾಗುತ್ತಿದೆ’ ಎಂದೂ ಸಚಿವರು ತಿಳಿಸಿದರು.
‘ಬೀದಿ ಜಗಳ ಬಿಟ್ಟುಬಿಡಿ’
‘ವೀರಶೈವ– ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಪಂಚಾಚಾರ್ಯ ಮತ್ತು ವಿರಕ್ತ ಮಠಾಧೀಶರು, ಸಮಾಜದ ಪ್ರಮುಖರು ಬೀದಿ ಜಗಳ ಬಿಟ್ಟು, ಒಗ್ಗಟ್ಟು ಪ್ರದರ್ಶಿಸಬೇಕು’ ಎಂದು ಬಸವರಾಜ ರಾಯರಡ್ಡಿ ಮನವಿ ಮಾಡಿದರು.
‘ಎರಡೂ ಬಣಗಳು ಒಟ್ಟಾಗಿ ಬಂದರೆ ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಮುಖ್ಯಮಂತ್ರಿ ಸ್ಪಷ್ಟ ನಿಲುವು ವ್ಯಕ್ತಪಡಿಸಿದ್ದಾರೆ. ಸರ್ಕಾರಕ್ಕೂ ಪ್ರತ್ಯೇಕ ಧರ್ಮ ಬೇಡಿಕೆಗೂ ಯಾವುದೇ ಸಂಬಂಧ ಇಲ್ಲ. ಈ ಕೆಲಸ ರಾಜಕಾರಣಿಗಳಿಂದ ಮಾಡಲು ಸಾಧ್ಯವೂ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.
‘ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಬೇಕು ಎಂದು ಸಮುದಾಯದ ಮಧ್ಯೆ ವಾದಿಸುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಹೊರಗಡೆ ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ. ಆರ್‌ಎಸ್‌ಎಸ್ ಕಪಿ ಮುಷ್ಠಿಯಲ್ಲಿರುವ ಅವರು ದ್ವಂದ್ವ ನಿಲುವು ಹೊಂದಿದ್ದಾರೆ’ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.