ಬೆಂಗಳೂರು: ‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ವಾತಾವರಣ ದೇಶದಲ್ಲಿ ಬೆಳೆಯುತ್ತಿದೆ’ ಎಂದು ಹೇಳಿರುವ ಹಿರಿಯ ಪತ್ರಕರ್ತ ಜಿ.ಎನ್. ರಂಗನಾಥ ರಾವ್, ಅನುವಾದ ಸಾಹಿತ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ನೀಡಿದ್ದ ಪ್ರಶಸ್ತಿ ಹಿಂದಿರುಗಿಸಲು ನಿರ್ಧರಿಸಿದ್ದಾರೆ.
ರಾಜಮೋಹನ ಗಾಂಧಿ ಅವರ ‘ಮೋಹನದಾಸ್: ಒಂದು ಸತ್ಯಕಥೆ’ ಅನುವಾದ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ 2014ನೇ ಸಾಲಿನ ಅನುವಾದ ಸಾಹಿತ್ಯ ಪ್ರಶಸ್ತಿ ಲಭಿಸಿತ್ತು. ಈ ಪ್ರಶಸ್ತಿ ₹ 50 ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿತ್ತು.
‘ಸಾಹಿತ್ಯ ಅಕಾಡೆಮಿ ಒಂದು ಸ್ವಾಯತ್ತ ಸಂಸ್ಥೆ. ಅದು ರಾಜಕೀಯ ಸಂಸ್ಥೆಯಲ್ಲ. ಆದರೆ, ಸಾಹಿತ್ಯ ವಲಯಕ್ಕೇ ಬೆದರಿಕೆ ಎದುರಾಗಿರುವ ಈ ಹೊತ್ತಿನಲ್ಲಿ ಅಕಾಡೆಮಿ ಅದನ್ನು ಎದುರಿಸಲು ಬೇಕಿರುವ ದೃಢ ನಿಲುವು ತಾಳುತ್ತಿಲ್ಲ’ ಎಂದು ‘ಪ್ರಜಾವಾಣಿ’ ಜೊತೆ ಮಾತನಾಡಿದ ರಂಗನಾಥ ರಾವ್ ಹೇಳಿದರು.
ಪ್ರಶಸ್ತಿಯ ಜೊತೆ ಬಂದಿದ್ದ ನಗದು ಮತ್ತು ಫಲಕವನ್ನು ಅಂಚೆಯ ಮೂಲಕ ಸೋಮವಾರ ವಾಪಸ್ ಕಳುಹಿಸುತ್ತಿದ್ದೇನೆ ಎಂದು ಅವರು ಹೇಳಿದರು.
***
ಅಕಾಡೆಮಿ ಪ್ರಶಸ್ತಿ ಹಿಂದಕ್ಕೆ: ಶ್ರೀನಾಥ್
ಶಿವಮೊಗ್ಗ: ಎಂ.ಎಂ.ಕಲಬುರ್ಗಿ ಅವರ ಹತ್ಯೆ ಹಿನ್ನೆಲೆಯಲ್ಲಿ ಅನುವಾದಕ, ಶಿವಮೊಗ್ಗ ನಗರದ ನಿವಾಸಿ ಡಿ.ಎನ್.ಶ್ರೀನಾಥ್ ಕೇಂದ್ರ ಸಾಹಿತ್ಯ ಅಕಾಡೆಮಿ ನೀಡಿದ್ದ ಪ್ರಶಸ್ತಿಯನ್ನು ಹಿಂದಿರುಗಿಸಲು ನಿರ್ಧರಿಸಿದ್ದಾರೆ.
ಭೀಷ್ಮ ಸಹಾನಿ ಅವರ ಪ್ರಾತಿನಿಧಿಕ ಕಥೆಗಳ ಅನುವಾದಕ್ಕೆ 2009ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಭಾಷಾಂತರ ಪ್ರಶಸ್ತಿ ನೀಡಿ ಪುರಸ್ಕರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.