ADVERTISEMENT

ಅನ್ವರ್ಥನಾಮಿ ಚಿತ್ರಸಾಹಿತಿಯ ಜ್ಞಾಪಕ ಚಿತ್ರಶಾಲೆ...

ವಿಶಾಖ ಎನ್.
Published 17 ಜನವರಿ 2016, 19:30 IST
Last Updated 17 ಜನವರಿ 2016, 19:30 IST
ಅನ್ವರ್ಥನಾಮಿ ಚಿತ್ರಸಾಹಿತಿಯ ಜ್ಞಾಪಕ ಚಿತ್ರಶಾಲೆ...
ಅನ್ವರ್ಥನಾಮಿ ಚಿತ್ರಸಾಹಿತಿಯ ಜ್ಞಾಪಕ ಚಿತ್ರಶಾಲೆ...   

ಬೆಂಗಳೂರು: ಸಣ್ಣ ನಡುಮನೆಯಲ್ಲಿ ಎರಡು ಕುರ್ಚಿ. ಒಂದರ ಮೇಲೆ ಅವರು ನಿಸೂರಾಗಿ ಹೆಚ್ಚು ಹೊತ್ತು ಕುಳಿತುಕೊಳ್ಳುತ್ತಿರಲಿಲ್ಲ. ಅಡುಗೆಮನೆಯತ್ತ ಪದೇಪದೇ ಇಣುಕುತ್ತಿದ್ದರು. ಅಲ್ಲಿಂದ ಎದ್ದುಹೋಗಿ, ಪತ್ನಿಗೆ ಮೆಲುದನಿಯಲ್ಲಿ ಏನೋ ಹೇಳಿ, ಮತ್ತೆ ಬಂದು ಕೂತು ಮಾತು ಮುಂದುವರಿಸುತ್ತಿದ್ದರು. ನಾಲ್ಕು ತಾಸು ಹಾಗೆ ತಮ್ಮ ಕಥೆಗಳನ್ನು ತುಸುವೂ ದಣಿವಿಲ್ಲದೆ, ಸಣ್ಣ ಲೋಟದಲ್ಲಿ ಆಗೀಗ ಕಾಫಿ ಹೀರುತ್ತಾ  ಹೇಳಿಕೊಳ್ಳಬಲ್ಲವರಾಗಿದ್ದ ಅವರಿಗೆ ಕೇಳುವ ಕಿವಿಗಳು ಬೇಕಿದ್ದವು. ಆದರೆ, ಕೊನೆಕೊನೆಗೆ ಅವರು ದೀರ್ಘ ಕಾಲ ಮಾತನಾಡದಷ್ಟು ದಣಿದಿದ್ದರು.

85ರ ಹರೆಯದಲ್ಲಿ ಗೀತಪ್ರಿಯ ಹೃದಯಾಘಾತದಿಂದ ಕಣ್ಮುಚ್ಚಿದರು (ಹುಟ್ಟಿದ್ದು 1931ರ ಜೂನ್ 5ರಂದು) ಎಂದಾಕ್ಷಣ ಅವರ ಸಂದರ್ಶನ ಮಾಡಿದ ಆ ದಿನ ನೆನಪಾಯಿತು. ಹಣೆ ಮೇಲೆ ಢಾಳು ಕುಂಕುಮ. ಅಗಲ ಮುಖದ ಮೇಲೆ ಈ ಕಾಲಮಾನಕ್ಕೆ ಹೆಚ್ಚೇ ಅಗಲ ಎನ್ನಬಹುದಾದ ಕನ್ನಡಕ. ಅದರ ಗಾಜುಗಳಲ್ಲಿ ಅವರ ಉಬ್ಬಿದ ಕಣ್ಣುಗಳು ಇನ್ನೂ ದಪ್ಪವಾಗಿ ಕಾಣುತ್ತಿದ್ದವು. ನರೆತ ತಲೆಗೂದಲು, ಹುಬ್ಬುಗಳು. ಮುಖದ ಮೇಲೆ ಸದಾ ಮಂದಹಾಸ. ಗಮನ ತುಸು ಬೇರೆಡೆ ಹರಿದರೂ ಕೇಳಿಸಿಕೊಳ್ಳುವುದು ಕಷ್ಟ ಎನ್ನುವಂಥ ದನಿ. ಯಾರೋ ಬಂದು ಕಾಲಿಗೆ ಸಾಷ್ಟಾಂಗ ಮಾಡಿ, ಆಶೀರ್ವಾದ ಪಡೆದರೆ ಮಗುವಿನಂಥ ಸಂತೋಷ.

ಲಕ್ಷ್ಮಣ ರಾವ್ ಮೋಹಿತೆ ಎಂದರೆ ಬಹುಜನರಿಗೆ ಗೊತ್ತಾಗುವುದಿಲ್ಲ. ಅದು ಅವರ ಜನ್ಮನಾಮ. ಸಿನಿಮಾ ಪ್ರಿಯರಿಗೆ ಅವರು ಸದಾ ಗೀತಪ್ರಿಯರೇ. ಅವರ ಹಾಡುಗಳನ್ನು ಕೇಳಿದರೆ ಇದು ಅನ್ವರ್ಥನಾಮ ಎನಿಸದೇ ಇರದು. ಗೀತಪ್ರಿಯರು ಹಣ್ಣಾದ ಮೇಲೂ ಅವರ ನೆನಪಿನ ಶಕ್ತಿ ಮಾತ್ರ ಚೆನ್ನಾಗಿತ್ತು. ಸಂಭಾವನೆ ಪಡೆದ ವಿಷಯದಲ್ಲಿ ಅವರು ಸೋತಿದ್ದರೂ, ಬಾಕಿ ಎಷ್ಟು ಹಣ ಬರಬೇಕು ಎಂದು ಹೇಳುವುದರಲ್ಲಿ ಮಾತ್ರ ಅವರ ಗಣಿತ ಜ್ಞಾನ ಬೆರಗು ಹುಟ್ಟಿಸುವಂತಿತ್ತು. ‘ಹೊಂಬಿಸಿಲು’ ಸಿನಿಮಾ ಮಾಡಿದ ಮೇಲೆ ಇಷ್ಟು ಹಣ ಬರಲಿಲ್ಲ, ‘ಮೌನ
ಗೀತೆ’ಯ ನಂತರ ಶ್ರೀನಾಥ್ ಹಣ ಕೊಡಲು ಹೆಣಗಾಡಿಸಿದರು ಎಂದು ಅವರು ನಿರ್ಭಿಡೆಯಿಂದ ಹೇಳಿಕೊಳ್ಳುತ್ತಿದ್ದರು. ಇಂಥ ವಿಷಯಗಳನ್ನು ಹೇಳಲು ಎದುರಲ್ಲಿ ಕುಳಿತವರು ಅವರಿಗೆ ಆಪ್ತರೇ ಆಗಿರಬೇಕು ಎಂದೇನೂ ಇರಲಿಲ್ಲ.

ಗೀತಪ್ರಿಯ ಅವರ ಮಾತೃಭಾಷೆ ಮರಾಠಿ. ತಂದೆ ‘ಮೈಸೂರು ಸ್ಟೇಟ್ ಟ್ರೂಪ್’ನ ‘ಕಾವಲ್ರಿ ರೆಜಿಮೆಂಟ್’ನಲ್ಲಿ ಕೆಲಸಕ್ಕಿದ್ದರು. ವಾಸವಿದ್ದ ಕ್ವಾರ್ಟರ್ಸ್‌ನ ಹತ್ತಿರದಲ್ಲೇ ಕವಿ ಪು.ತಿ. ನರಸಿಂಹಾಚಾರ್ ಮನೆಯಿತ್ತು. ಅವರ ಮಗಳು ಗೀತಪ್ರಿಯ ಅವರ ಸಹಪಾಠಿ. ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿದ ಅವರು ಚಿಕ್ಕ ವಯಸ್ಸಿನಲ್ಲೇ ಕಥೆ, ಕವನ ಬರೆಯುವ ಗೀಳಿಗೆ ಬಿದ್ದರು. ಪು.ತಿ.ನ. ಸಹಜವಾಗಿಯೇ ಅವರ ಮೆಚ್ಚಿನ ಕವಿ ಆಗಿದ್ದರು. ಶಿವರಾಮ ಕಾರಂತ, ಮಾಸ್ತಿ ಮೊದಲಾದವರ ಕೃತಿಗಳನ್ನು ಓದಿಕೊಂಡ ಗೀತಪ್ರಿಯ, ಪ್ರೌಢಾವಸ್ಥೆಯಲ್ಲಿದ್ದಾಗ ಬರೆದ ಕಥೆ-ಕವನಗಳು ‘ತಾಯಿನಾಡು’, ‘ರಾಮರಾಜ್ಯ’ ಪತ್ರಿಕೆಗಳಲ್ಲಿ ಪ್ರಕಟವಾದವು. ಅವುಗಳ ಕುರಿತು ವಿಮರ್ಶೆ ಮಾಡಲು ತಂದೆಯ ಸ್ನೇಹಿತ ಬೆಳ್ಳಾವೆ ನರಹರಿ ಶಾಸ್ತ್ರಿಗಳಿದ್ದರು.

ಎಂಟು ಮಕ್ಕಳ ದೊಡ್ಡ ಕುಟುಂಬ. ಇಂಟರ್‌ಮೀಡಿಯೇಟ್ ಓದು ಮುಗಿಸಿದ್ದೇ ಗೀತಪ್ರಿಯ ಕಬ್ಬನ್‌ಪಾರ್ಕ್‌ನ ರೆಸ್ಟೋರೆಂಟ್ ಒಂದರಲ್ಲಿ ಕಾರಕೂನರಾಗಿ ಕೆಲಸಕ್ಕೆ ಸೇರಿದರು. ತಿಂಗಳಿಗೆ 35 ರೂಪಾಯಿ ಸಂಬಳ. ಅಲ್ಲಿಗೆ ವಿಜಯ ಭಾಸ್ಕರ್, ಕಲ್ಯಾಣ್‌ಕುಮಾರ್ ಮೊದಲಾದವರು ಬರುತ್ತಿದ್ದರು. ಸಂಗೀತ ನಿರ್ದೇಶಕ ವಿಜಯ ಭಾಸ್ಕರ್ ಜೊತೆಗೆ ಸ್ನೇಹ ಬೆಳೆದದ್ದೇ, ಗೀತಪ್ರಿಯ ತಮ್ಮ ಪದಭಂಡಾರದ ಕೆಲವು ‘ಸ್ಯಾಂಪಲ್‌ಗಳ’ ರುಚಿಯನ್ನು ಅವರಿಗೆ ತೋರಿಸಿದರು. ಕ್ಯಾಮರಾಮನ್ ಎನ್.ಜಿ. ರಾವ್ ಒಂದು ಸಿನಿಮಾ ಮಾಡುವ ಸಾಹಸಕ್ಕೆ ಹೈಹಾಕು
ವವರಿದ್ದರು. ಅದಕ್ಕೆ ಹಾಡು ಬರೆದುಕೊಡುವಂತೆ ವಿಜಯ ಭಾಸ್ಕರ್ ಕೇಳಿದರು. ‘ಶ್ರೀರಾಮ ಪೂಜಾ’ (1954) ಸಿನಿಮಾಗೆ ಗೀತಪ್ರಿಯ ಚಿತ್ರಸಾಹಿತಿ ಆದದ್ದು ಹಾಗೆ.

ಕೈಲಿದ್ದ ಕೆಲಸ ಬಿಟ್ಟು, ಸಿನಿಮಾ ಮಾಯಾಂಗನೆಯ ಹಿಂದೆ ಬೀಳಲು ಗೀತಪ್ರಿಯ ಹಿಂದೆ ಮುಂದೆ ನೋಡಿದರು. ಆಗ ವಿಜಯ ಭಾಸ್ಕರ್, ಏನೇ ಆದರೂ ತಿಂಗಳಿಗೆ 40 ರೂಪಾಯಿ ಸಂಬಳ ಕೊಡುವುದಾಗಿ ಆಶ್ವಾಸನೆ ಕೊಟ್ಟರು. ಸಿನಿಮಾಗಳು ಕೈಯಲ್ಲಿ ಇರಲಿ ಬಿಡಲಿ, ಗೀತಪ್ರಿಯ ಅವರ ಅಮ್ಮನ ಕೈಗೆ ತಿಂಗಳಿಗೆ ವಿಜಯ ಭಾಸ್ಕರ್ 40 ರೂಪಾಯಿ ತಲುಪಿಸುವುದನ್ನು ಮರೆಯುತ್ತಿರಲಿಲ್ಲ.

ಆಗ ಮದ್ರಾಸ್‌ನಲ್ಲಿ ಸಿನಿಮಾಗಳು ತಯಾರಾಗುತ್ತಿದ್ದುದರಿಂದ ಗೀತಪ್ರಿಯ ಕೂಡ ಅಲ್ಲಿಗೆ ಹೋದರು. ವೈ.ವಿ.ರಾವ್ ಕೈಗೆತ್ತಿಕೊಂಡ ‘ಭಾಗ್ಯಚಕ್ರ’ ಸಿನಿಮಾಗೆ ಸಂಭಾಷಣೆ ಬರೆದರು. 1963ರಲ್ಲಿ ತೆರೆಕಂಡ ‘ಶ್ರೀರಾಮ ಯುದ್ಧ’ ಒಂದು ವಿಧದಲ್ಲಿ ಗೀತಪ್ರಿಯ ಅವರಿಗೆ ಬ್ರೇಕ್ ಕೊಟ್ಟ ಸಿನಿಮಾ. ಅದರ ‘ಜಗದೀಶನಾಳುವ ಜಗವೇ ನಾಟಕ ರಂಗ’ ಎಂಬ ಹಾಡು ಈಗಲೂ ಜನಮನದಲ್ಲಿ ಉಳಿದಿದೆ. ಅಂಥ ಫಿಲಾಸಫಿ ಹಾಡನ್ನು ಬರೆಯಬಲ್ಲವರಾಗಿದ್ದ ಗೀತಪ್ರಿಯ ‘ಆಡುತಿರುವ ಮೋಡಗಳೆ’ ಎಂದು ರಮ್ಯ ರಾಗಕ್ಕೂ ಪದಗಳ ಇಟ್ಟಿದ್ದರು. ಮೊಹಮ್ಮದ್ ರಫಿ ಕನ್ನಡದಕ್ಕೆ ಹಾಡಿದ ‘ನೀನೆಲ್ಲಿ ನಡೆವೆ ದೂರ’ ಎಂಬ ದುಃಖಭರಿತ ಹಾಡಿನ ರಚನೆಯೂ ಅವರದ್ದೆ. ‘ಒಂದೇ ಬಳ್ಳಿಯ ಹೂಗಳು’ (1968) ಸಿನಿಮಾದ ಗೀತೆ ಅದು.

ಗೀತಪ್ರಿಯ ವೃತ್ತಿಬದುಕಿನಲ್ಲಿ ಬಹುಬೇಗ ಅಲ್ಲದಿದ್ದರೂ ಜಿಗಿತವನ್ನಂತೂ ಕಂಡರು. ರಾಜ್‌ಕುಮಾರ್, ಕಲ್ಪನಾ ಜೋಡಿಯ ‘ಮಣ್ಣಿನ ಮಗ’ ಅವರ ನಿರ್ದೇಶನದ ಮೊದಲ ಸಿನಿಮಾ. 1968ರಲ್ಲಿ ತೆರೆಕಂಡ ಈ ಸಿನಿಮಾಗೆ ಶ್ರೇಷ್ಠ ಕನ್ನಡ ಸಿನಿಮಾ ಎಂಬ ರಾಷ್ಟ್ರ
ಪ್ರಶಸ್ತಿ ಕೂಡ ಸಂದಿತು. ಬೆಂಗಳೂರಿನ ಕಪಾಲಿ ಚಿತ್ರಮಂದಿರದಲ್ಲಿ ಶತದಿನ ಓಡಿದ ಸಿನಿಮಾ ತಕ್ಷಣಕ್ಕೆ ಗೀತಪ್ರಿಯ ಅವರಿಗೆ ನಿರ್ದೇಶನದ ಹೆಚ್ಚಿನ ಅವಕಾಶಗಳನ್ನೇನೂ ತಂದುಕೊಡಲಿಲ್ಲ ಎನ್ನುವುದು ಬೇರೆ ಮಾತು.

‘ಯಾವ ಜನ್ಮದ ಮೈತ್ರಿ’ (1972), ‘ಬೆಳುವಲದ ಮಡಿಲಲಿ’ (1975), ‘ಬೆಸುಗೆ’ (1976), ‘ಹೊಂಬಿಸಿಲು’ (1978), ’ಪುಟಾಣಿ ಏಜೆಂಟ್ 123’ (1979) ಹಾಗೂ ‘ಮೌನಗೀತೆ’ (1985) ಗೀತಪ್ರಿಯ ನಿರ್ದೇಶಿಸಿದ ವೈವಿಧ್ಯ ವಸ್ತುಗಳ ಸಿನಿಮಾಗಳು. ತುಳುವಿನಲ್ಲಿ ಮೂರು ಹಾಗೂ ಹಿಂದಿಯಲ್ಲಿ ಒಂದು (‘ಅನ್‌ಮೋಲ್ ಸಿತಾರೆ’) ಸಿನಿಮಾಗಳನ್ನು ಕೂಡ ಅವರು ನಿರ್ದೇಶಿಸಿದ್ದಾರೆ.

‘ನಾಯಕರನ್ನು ಸ್ಟಾರ್‌ಗಿರಿಯಿಂದ ಭೂಮಿಗೆ ಇಳಿಸಿ, ಅಭಿನಯ ತೆಗೆಸುವುದೇ ಕಷ್ಟವಿತ್ತು. ಹೊಂಬಿಸಿಲು ಸಿನಿಮಾದಲ್ಲಿ ವೈದ್ಯನ ಪಾತ್ರ ಮಾಡಿದ್ದ ವಿಷ್ಣುವರ್ಧನ್‌ಗೆ ನಡೆಯುವುದನ್ನು ಕಲಿಸಲು ನನಗೆ ಹಲವು ಗಂಟೆಗಳೇ ಬೇಕಾಗಿದ್ದವು. ರಾಜಕುಮಾರ್, ಬಾಲಕೃಷ್ಣ, ನರಸಿಂಹ
ರಾಜು ಅವರಿಗಿದ್ದ ಶ್ರದ್ಧೆಯನ್ನು ಮರೆಯಲಾಗದು. ಒಂದು ಕೇಳಿದರೆ, ಹತ್ತು ಬಗೆಯಲ್ಲಿ ಅದನ್ನು ಕೊಡುವ ಪ್ರಯತ್ನವನ್ನು ಅವರೆಲ್ಲಾ ಮಾಡುತ್ತಿದ್ದರು. ಈಗಿನ ಸಿನಿಮಾದವರ ಭಾಷೆ ನೋಡಿದರೆ ಹೆದರಿಕೆಯಾಗುತ್ತದೆ’ ಎಂದು ಶ್ಲಾಘನೆ, ಟೀಕೆ-ಟಿಪ್ಪಣಿ ಮಾಡುತ್ತಿದ್ದ ಗೀತಪ್ರಿಯ, ಕನ್ನಡ ಸಿನಿಮಾ ಲೋಕದ ಸಂವೇದನಾಶೀಲ ರಾಯಭಾರಿಯಂತೆ ಇದ್ದವರು. ಅವರು ಆಗೀಗ ಸಿನಿಮಾ ಶಾಲೆಗಳಿಗೆ ಹೋಗಿ, ಬೋಧಿಸಿ ಬರುತ್ತಿದ್ದರು.

ಹೆಚ್ಚೇ ನಾಸ್ಟಾಲ್ಜಿಕ್ ಆಗಿ ಮಾತನಾಡುತ್ತಿದ್ದ ಅವರು ಹತ್ತು ವರ್ಷದ ಹಿಂದೆ ಒಂದು ಸಿನಿಮಾಗೆ ಹಾಡು ಬರೆಯುವ ಅವಕಾಶ ಸಿಕ್ಕಾಗ, ಪೆಪ್ಪರಮೆಂಟ್ ಸಿಕ್ಕಿದ ಮಗುವಿನಂತೆ ಆನಂದಿಸಿದ್ದರು.

‘ಎಲ್ಲರನ್ ಕಾಯೋ ದ್ಯಾವ್ರೆ ನೀನು...’ (ಬೆಳುವಲದ ಮಡಿಲಲ್ಲಿ), ‘ಗೋಪಿ ಲೋಲಾ ಹೇ ಗೋಪಾಲ...’ (ನಾರಿ ಮುನಿದರೆ ಮಾರಿ), ‘ಬೆಸುಗೆ ಬೆಸುಗೆ ಜೀವನವೆಲ್ಲ ಸುಂದರ ಬೆಸುಗೆ’ (ಬೆಸುಗೆ ಸಿನಿಮಾದ ಈ ಹಾಡಿನಲ್ಲಿ 63 ಸಲ ಶೀರ್ಷಿಕೆ ಪದ ಬಳಸಿದ್ದರು), ‘ಜೀವ ವೀಣೆ ನೀಡು ಮಿಡಿತದ ಸಂಗೀತ’ (ಹೊಂಬಿಸಲು), ‘ಪ್ರೇಮವಿದೆ ಮನದೆ...’ (ಅಂತ) ಇವೆಲ್ಲಾ ಗೀತಪ್ರಿಯ ಅನ್ವರ್ಥನಾಮಿ ಎಂಬುದಕ್ಕೆ ಉದಾಹರ
ಣೆಯಾಗಬಲ್ಲ ವೈವಿಧ್ಯಮಯ ಹಾಡುಗಳು.

ನಿರ್ದೇಶಕರಾಗಿ ಮಾಡಿದ ಸಾಧನೆಗೆ 1986-87ರಲ್ಲಿ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, 2012ರಲ್ಲಿ ಬಿ. ಸರೋಜಾದೇವಿ ಪ್ರಶಸ್ತಿಗೆ ಭಾಜನರಾಗಿದ್ದ ಗೀತಪ್ರಿಯ, ‘ನನಗೆ ಒಂದು ಹಾಡಿಗೆ 50 ರೂಪಾಯಿ, ನಿರ್ದೇಶನಕ್ಕೆ 1000 ರೂಪಾಯಿ ಕೊಟ್ಟವರೇ ಹೆಚ್ಚು’ ಎಂದು ಅತೃಪ್ತಭಾವವನ್ನು ಅವಕಾಶ ಸಿಕ್ಕಾಗಲೆಲ್ಲಾ ವ್ಯಕ್ತಪಡಿಸುತ್ತಿದ್ದರು. ‘ನೀರ ಬಿಟ್ಟು ನೆದ ಮೇಲೆ ದೋಣಿ ಸಾಗದು ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು’ ಎಂಬ ತಾವಿಟ್ಟ ಸಾಲನ್ನು ಪುಟ್ಟ ಮಗುವಿನ ಕಂಠದಲ್ಲಿ ಕೇಳಿ ಸುಖಿಸುತ್ತಿದ್ದವರೂ ಅವರೇ. ಗೀತಪ್ರಿಯ ಇನ್ನು ನೆನಪು. ಅವರ ಹಾಡುಗಳದ್ದೇ ಉಳಿದ ಮೆಲುಕು. ಅವರು ಪತ್ನಿ, ಒಬ್ಬ ಮಗ ಮತ್ತು ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.