ADVERTISEMENT

ಅಪಘಾತದ ಹಾದಿಯಲ್ಲಿ ‘ಅಪವಿತ್ರ’ ಮೈತ್ರಿ?

ಉಭಯ ಪಕ್ಷಗಳ ನಾಯಕರ ಹೇಳಿಕೆ– ಪ್ರತಿ ಹೇಳಿಕೆಗಳಿಂದ ಜನರಿಗೆ ವಾಕರಿಕೆ

ವೈ.ಗ.ಜಗದೀಶ್‌
Published 13 ಮೇ 2019, 20:01 IST
Last Updated 13 ಮೇ 2019, 20:01 IST
   

ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್–ಕಾಂಗ್ರೆಸ್‌ ಮೈತ್ರಿ ಸರ್ಕಾರದ ನಾಯಕರು ಪರಸ್ಪರ ದೋಷಾರೋಪಣೆ, ಕಾಲೆಳೆದುಕೊಳ್ಳುವ ಮಾತುಗಳನ್ನು ಪಾಟೀ ಸವಾಲಿಗೆ ಬಿದ್ದವರಂತೆ ಆಡುತ್ತಿದ್ದಾರೆ. ಕೂಡಿ ಸರ್ಕಾರ ನಡೆಸುತ್ತಿರುವವರ ಸ್ವರದ ಹಿಂದಿನ ಒಳ ನಂಜುಗಳನ್ನು ಗಮನಿಸಿದರೆ ‘ಮೈತ್ರಿ’ ಅವಸಾನ ಸನ್ನಿಹಿತವಾಗುತ್ತಿದೆಯೇ ಎಂಬ ಅನುಮಾನ ದಟ್ಟವಾಗುತ್ತದೆ.

‘ಮೈತ್ರಿ’ ಪತನ ಅಷ್ಟು ಸರಳವಲ್ಲ. ಸಮ್ಮಿಶ್ರ ಸರ್ಕಾರ ‘ಸುಸೂತ್ರ’ವಾಗಿ ನಡೆಯಬೇಕೆಂಬ ಇರಾದೆಯಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಂದ ಸಮನ್ವಯ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡ ಸಿದ್ದರಾಮಯ್ಯ ಅವರಿಗೆ ಈ ‘ಕೂಡಾಟ’ ಬೇಡದೇ ಇರಬಹುದು. ಸ್ವತಃ ರಾಹುಲ್‌ ಗಾಂಧಿ, ಸಚಿವರಾಗಿರುವ ಕಾಂಗ್ರೆಸ್ ನೇತಾರರಿಗೆ ಈ ಸರ್ಕಾರ ಬೇಕಾಗಿದೆ. ಕೋಟಿಗಟ್ಟಲೇ ದುಡ್ಡು ಸುರಿದು ಗೆದ್ದು ಬಂದಿರುವ ಶಾಸಕರಿಗೂ ವರ್ಷ ಕಳೆಯುವ ಮುನ್ನವೇ ಮತ್ತೊಂದು ಚುನಾವಣೆ ಎದುರಿಸುವುದು ಬೇಕಿಲ್ಲ. ಅಷ್ಟು ಮಾತ್ರವಲ್ಲ; ‘ಐದು ವರ್ಷ ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಿರುವುದಕ್ಕೆ ನಮ್ಮ ಬೆಂಬಲ ಇರುತ್ತದೆ’ ಎಂದು ಲಿಖಿತ ಒಪ್ಪಂದ ಮಾಡಿಕೊಟ್ಟವರು ಮುಂದೊಂದು ದಿನ ಮಾತಿಗೆ ತಪ್ಪಿದ ‘ವಿಶ್ವಾಸದ್ರೋಹಿ’ ಎಂಬ ಹಣೆಪಟ್ಟಿ ಕಟ್ಟಿಸಿಕೊಳ್ಳಲು ತಯಾರಿಲ್ಲ. ಹೀಗಾಗಿ, ಹಾದಿ ಬೀದಿಯಲ್ಲಿ ರಂಪ ಮಾಡಿಕೊಂಡರೂ ಅಷ್ಟು ಸಲೀಸಾಗಿ ಸರ್ಕಾರ ಬಿದ್ದು ಹೋಗುವುದಿಲ್ಲ ಎಂಬ ತರ್ಕ ಕಾಂಗ್ರೆಸ್‌ ಪಡಸಾಲೆಯಲ್ಲಿದೆ.

ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಸರ್ಕಾರ ಈಗ ಬೀಳುತ್ತದೆ; ಆಗ ಬೀಳುತ್ತದೆ ಎಂಬ ವದಂತಿಗಳು, ಕತೆಗಳು ಹರಿದಾಡಿಕೊಂಡೇ ಬಂದಿವೆ.‘ಇದು ಅಪವಿತ್ರ ಮೈತ್ರಿ’ ಎಂದು ಬಿಜೆಪಿಯವರು ಜರೆಯುತ್ತಲೇ ಬಂದಿದ್ದಾರೆ. ಮುಂದೆ ಸರ್ಕಾರ ಬಿದ್ದರೆ, ಅದೇ ಜೆಡಿಎಸ್‌ ಜತೆಗೆ ‘ಅಪವಿತ್ರ’ ಮೈತ್ರಿ ಮುಂದುವರಿಸಲು ಆ ಪಕ್ಷದ ನಾಯಕರು ಸಿದ್ಧತೆ ನಡೆಸಿರುವುದು ಸುಳ್ಳಲ್ಲ.

ADVERTISEMENT

ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಮುಗಿದ ಬಳಿಕವಂತೂ ಜೆಡಿಎಸ್–ಕಾಂಗ್ರೆಸ್ ನಾಯಕರು ಬೀದಿ ಜಗಳ ಜನರಿಗೆ ವಾಕರಿಕೆಯನ್ನೂ ತರಿಸುತ್ತಿವೆ. ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದರೆ, ‘ಮೈತ್ರಿ’ ಬಿಕ್ಕಟ್ಟಿನತ್ತ ಸಾಗುತ್ತಿರುವುದು ಕಣ್ಣಿಗೆ ರಾಚುತ್ತದೆ.

‘ಕೋಮುವಾದಿ ಬಿಜೆಪಿ’ಯನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ಕಾರಣಕ್ಕೆ ರಾಹುಲ್ ಗಾಂಧಿ ಮತ್ತು ಎಚ್‌.ಡಿ. ದೇವೇಗೌಡರು ‘ಕಟ್ಟಿದ’ ಮೈತ್ರಿ ಸರ್ಕಾರಕ್ಕೆ ಸಿದ್ದರಾಮಯ್ಯ ಮತ್ತು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌. ವಿಶ್ವನಾಥ್ ಅವರೇ ಈಗ ಬಲಿ‍ಪೀಠ ಸಿದ್ಧಪಡಿಸುತ್ತಿದ್ದಾರೆ. ರಾಜ್ಯದಲ್ಲಿ ಸರ್ಕಾರ ರಚಿಸಲೇಬೇಕು ಎಂಬ ಲೆಕ್ಕಾಚಾರದಲ್ಲಿ ಹಂಚು ಕಾಯಿಸಿಕೊಂಡು ಕುಳಿತಿರುವ ಯಡಿಯೂರಪ್ಪ ಮತ್ತು ಇತರೆ ಬಿಜೆಪಿ ನಾಯಕರಿಗೆ ಸರ್ಕಾರವೆಂಬ ಗರಿ ಗರಿ ದೋಸೆಗೆ ಬೇಕಾದ ಹಿಟ್ಟು ಮತ್ತು ತುಪ್ಪವನ್ನು ಈ ಇಬ್ಬರು ನಾಯಕರೇ ರುಬ್ಬಿ, ಕಾಯಿಸಿ ಕೊಡುತ್ತಿದ್ದಾರೆ. ಯಾವುದೇ ಒಂದು ಹೇಳಿಕೆ ಅಥವಾ ಕ್ರಿಯೆ ಶೂನ್ಯದಿಂದ ಸೃಷ್ಟಿಯಾಗುವುದಿಲ್ಲ; ಅದರ ಹಿಂದೆ ಒಂದು ಶಕ್ತಿ ಇರುತ್ತದೆ. ಸರ್ಕಾರ ಬಂದ ದಿನದಿಂದಲೂ ಹೈಕಮಾಂಡ್ ಆದೇಶ ಪಾಲಿಸಲೇಬೇಕು ಎಂಬ ಕಾರಣಕ್ಕೆ ಒಲ್ಲದ ಮನಸ್ಸಿನಿಂದ ‘ಕೂಡಿ’ ಬಾಳುತ್ತಿರುವ ಸಿದ್ದರಾಮಯ್ಯ, ಮೈತ್ರಿ ಸರ್ಕಾರದ ನಡೆಯ ಬಗ್ಗೆ ತಕರಾರುಗಳನ್ನು ತೆಗೆಯುತ್ತಲೇ ಬಂದಿದ್ದಾರೆ. ಸರ್ಕಾರ ಸುಗಮವಾಗಿ ನಡೆಯುವುದು ಅವರಿಗೆ ಬೇಕಿಲ್ಲ.

‘ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬೇಕು’ ಎಂದು ಕುಮಾರಸ್ವಾಮಿ ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷ ಪ್ರತಿನಿಧಿಸುವ ಸಿದ್ದರಾಮಯ್ಯನವರ ಆಪ್ತರಾದ ಕೆಲವು ಸಚಿವರು ಹೇಳಿಕೊಂಡೇ ಬಂದಿದ್ದಾರೆ.ಸಮನ್ವಯ ಸಮಿತಿ ಅಧ್ಯಕ್ಷರಿಗೆ ‘ಮೈತ್ರಿ’ ಸಹ್ಯವಾಗಿದ್ದರೆ ತಮ್ಮ ಬೆಂಬಲಿಗರೆನಿಸಿಕೊಂಡವರನ್ನು ಸುಮ್ಮನಿರಿಸುವ ತಾಕತ್ತೂ ಇರುತ್ತದೆ. ಆದರೆ, ಅವರು ಅದನ್ನು ಮಾಡುತ್ತಿಲ್ಲ.

ಸಂಸಾರದಲ್ಲಿ ಸಲಹುವ ನಂಬಿಕೆಗಿಂತ ಕೊಲ್ಲುವ ಸಂಶಯ ಶುರುವಾಯಿತೆಂದರೆ ಅಲ್ಲಿ ‘ಸರಿಗಮ’ ಹೆಚ್ಚು ಕಾಲ ಕೇಳುವುದಿಲ್ಲ; ಬಾಳುವುದೂ ಇಲ್ಲ. ಮೈತ್ರಿ ಸರ್ಕಾರದಲ್ಲಿ ಈಗ ಆಗಿರುವುದೂ ಅದೇ. ಅಸಮಾಧಾನವನ್ನು ಸಿದ್ದರಾಮಯ್ಯ ಬಹಿರಂಗವಾಗಿ ಹೇಳಿಕೊಳ್ಳದೇ ಇದ್ದರೂ ಅವರ ಅಂತರಾಳದಲ್ಲಿ ಅದು ಗಾಢವಾಗಿದೆ ಎಂಬುದನ್ನು ಅವರ ಆಪ್ತರೇ ಹೇಳುವುದುಂಟು.

‘ಮೈತ್ರಿಯಲ್ಲಿ ಮುಂದುವರಿದರೆ ಕಾಂಗ್ರೆಸ್‌ ಉಳಿಯದು. ಜೆಡಿಎಸ್‌ನವರನ್ನು ಸಹಿಸಿಕೊಂಡು ಸರ್ಕಾರ ಮುಂದುವರಿಸುವುದು ಅಸಾಧ್ಯ ಎಂದು ಬಿಂಬಿಸುವುದು ಸಿದ್ದರಾಮಯ್ಯ ಅವರ ಬಣದ ಸದ್ಯದ ಯತ್ನ. ಕರ್ನಾಟಕದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲದೇ ಇದ್ದರೆ, ಅದರ ಹೊಣೆಯನ್ನು ‘ಮೈತ್ರಿ’ಗೆ ಕಟ್ಟಿ, ಅದನ್ನು ಕಡಿದುಕೊಂಡು ಹೊರಬರುವುದು ಈ ಗುಂಪಿನ ತಕ್ಷಣದ ಅಪೇಕ್ಷೆ. ಅದು ಬಿಟ್ಟು ಬೇರೆ ಮಹತ್ವಾಕಾಂಕ್ಷೆ ಈ ಯತ್ನದ ಹಿಂದಿಲ್ಲ. ಫಲಿತಾಂಶ ಬರುವವರೆಗೂ ಈ ತೊಳಲಾಟ–ಕೂಗಾಟ ನಿರಂತರ; ಮೈತ್ರಿಗೆ ಅನುಕೂಲಕಾರಿ ಫಲಿತಾಂಶ ಬಂದರೆ ಸರ್ಕಾರ ಸುರಕ್ಷಿತ’ ಎಂಬುದು ಮೂಲ ಕಾಂಗ್ರೆಸಿಗರ ಅಭಿಮತ.

ಕೇಂದ್ರದಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬರುತ್ತದೋ ಅಥವಾ ಮತ್ತೊಂದು ಪಕ್ಷ ಅಧಿಕಾರಕ್ಕೇರುತ್ತದೋ ಅದು ಬೇರೆ ವಿಷಯ. ಆದರೆ, ರಾಜ್ಯಸರ್ಕಾರದ ಅಳಿವು–ಉಳಿವು ಅಂತಿಮವಾಗಿ ರಾಹುಲ್ ಗಾಂಧಿ ಮತ್ತು ದೇವೇಗೌಡರು ತೆಗೆದುಕೊಳ್ಳುವ ನಿಲುವಿನ ಮೇಲೆ ನಿಂತಿದೆ. ರಾಹುಲ್ ಗಾಂಧಿ ಹುಕುಂ ನೀಡಿದರೆ, ಮತ್ತಷ್ಟು ಕಾಲ ಕುಮಾರಸ್ವಾಮಿ ಅವರ ನಾಯಕತ್ವವನ್ನು ಬೆಂಬಲಿಸುವ ಅನಿವಾರ್ಯತೆ ಸದ್ಯಕ್ಕೆ ಸಿದ್ದರಾಮಯ್ಯ ಅವರಿಗೆ ಇರುವುದಂತೂ ಹೌದು. ಫಲಿತಾಂಶವಷ್ಟೇ ಎಲ್ಲದಕ್ಕೂ ಉತ್ತರ ನೀಡಬಲ್ಲುದು ಎಂಬುದು ದಿಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.