ADVERTISEMENT

ಅಭಿಪ್ರಾಯಕ್ಕೂ ಚಪ್ಪಲಿಗೂ ಒಂದೇ ಕಿಮ್ಮತ್ತಾ?: ಗಿರಡ್ಡಿ ಗೋವಿಂದರಾಜ

ಶೈಲಜಾ ಹೂಗಾರ
Published 22 ಜನವರಿ 2017, 19:30 IST
Last Updated 22 ಜನವರಿ 2017, 19:30 IST
ಸಮಾರೋಪ ಸಮಾರಂಭದಲ್ಲಿ ಓ.ಎಲ್‌. ನಾಗಭೂಷಣಸ್ವಾಮಿ ಮತ್ತು ಗುರುಲಿಂಗ ಕಾಪಸೆ  ಮಾತನಾಡುತ್ತಿರುವುದು. ಸಾಹಿತಿ ಡಾ.ಗಿರಡ್ಡಿ ಗೋವಿಂದರಾಜ, ಕವಿ ಚನ್ನವೀರ ಕಣವಿ ಇದ್ದಾರೆ
ಸಮಾರೋಪ ಸಮಾರಂಭದಲ್ಲಿ ಓ.ಎಲ್‌. ನಾಗಭೂಷಣಸ್ವಾಮಿ ಮತ್ತು ಗುರುಲಿಂಗ ಕಾಪಸೆ ಮಾತನಾಡುತ್ತಿರುವುದು. ಸಾಹಿತಿ ಡಾ.ಗಿರಡ್ಡಿ ಗೋವಿಂದರಾಜ, ಕವಿ ಚನ್ನವೀರ ಕಣವಿ ಇದ್ದಾರೆ   
ಧಾರವಾಡ:   ‘ವಾದ ಮಂಡಿಸಾಕ, ಚರ್ಚೆ ಮಾಡಾಕ ಹಾಗೂ ಅಭಿಪ್ರಾಯ ಹೇಳಾಕ ಚಪ್ಪಲಿ ಬೇಕಾಗೂದಿಲ್ಲಾ. ಚರ್ಚೆ ಮಾಡೂ ರೀತಿ ಇದಲ್ಲಾ...’ ಎಂದು ಸಾಹಿತಿ ಡಾ. ಗಿರಡ್ಡಿ ಗೋವಿಂದರಾಜ ಭಾನುವಾರ ಇಲ್ಲಿ ಖಾರವಾಗಿ ಹೇಳಿದರು. 
 
ಧಾರವಾಡ ಸಾಹಿತ್ಯ ಸಂಭ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಎಲ್ಲಾರೂ ಮೈಕ್‌ ಹಿಡ್ಕೊಂಡ್ ಚೀರಾಡೂದು, ಚರ್ಚೆ ಮಾಡೂ ರೀತಿ ಅಲ್ಲವೇ ಅಲ್ಲಾ. ನೀವೇನ್‌ ಕಡ್ಮಿ ಏನ್‌? ಸಾಹಿತಿಗೊಳೂ ಹಿಂಗ್‌ ಮಾಡ್ತಾರಲ್ಲಾ ಅಂತಾ ಯಾರಾದ್ರೂ ರಾಜಕಾರ್ಣಿಗೊಳು ನಮ್ಗ ಕೇಳಿದ್ರ? ನಾಚ್ಕಿಯಾಗ್ಬೇಕು ನಮ್ಗ. ಸಹಿಷ್ಣುತೆ ಬೆಳಿಸ್ಕೊಬೇಕು, ಇದ್ರಿಂದ ಮನಸ್ಸಿಗೆ ಭಾಳ ಬ್ಯಾಸರಾ ಆಗೈತಿ...’ ಎಂದರು.
 
‘ಚರ್ಚೆಗಳ್ನ ಭಾಳ ಗಂಭೀರಾಗಿಯೇ ನಡೆಸ್ಬೇಕು. ಪರ, ವಿರೋಧ, ಮಧ್ಯಮ ಮಾರ್ಗದಲ್ಲೂ ನಡೆಸ್ಬಹುದು. ಆದ್ರ ಚಂಪಾ ತಮ್ಮ ತಪ್ಪ್‌ ತಿಳಿವಳ್ಕಿ ಹರಡಾಕ ಪ್ರಯತ್ನಾ ಮಾಡಾಕಹತ್ತ್ಯಾರ. ಉಪಮಿ, ರೂಪಕಾ ಕಾವ್ಯಕ್ಕ ಮಾತ್ರ ಸೀಮಿತಾ ಆಗ್ಬೇಕು. ಎಡ, ಬಲ ಅಂದಕೂಡ್ಲೇ ಗಂಡೋ ಹೆಣ್ಣೋ ಅನ್ನೂದು ಎಷ್ಟ್‌ ಸರಿ? ಈಗೀಗ ಚಂಪಾ ಲೈಂಗಿಕ ಅಲ್ಪಸಂಖ್ಯಾತರ  ಬಗ್ಗೆ ಭಾಳಾ ಒಲವು ತೋರಿಸಾಕಹತ್ತ್ಯಾರ. ಅಲ್ಲಲ್ಲಿ ಮಾತಾಡ್ತಾರ. ಬಲ ಹೆಣ್ಣು ಅಂದ್ರ ಪಾಟೀಲರು, ಸ್ವಾಭಾವಿಕವಾಗಿ ಅದರ ಕಡೀ ಹೆಚ್ಚ್‌ ಒಲವು ತೋರಿಸ್ಬೇಕಿತ್ತ್‌. ಆದ್ರ ಎಡದ ಕಡೆಗೆ ಹೆಚ್ಗಿ ಒಲವು ತೋರ್ಸಾಕ್‌ಹತ್ತ್ಯಾರ. ಯಾಕಂತ ಗೊತ್ತಾಗವಲ್ತು....’ ಎಂದಾಗ ಸಭಿಕರು ಜೋರಾಗಿ ನಗುತ್ತಲೇ ಚಪ್ಪಾಳೆಯನ್ನೂ ತಟ್ಟಿದರು. 
 
‘ಸುಳ್ಳು, ಸತ್ಯಕ್ಕೂ ಎಷ್ಟ್‌ ಮುಖಾ ಇರ್ತಾವು. ಇವೆರರ್ಡೂ ಸಿದ್ದಾಂತಕ್ಕ ಬದ್ಧರಾದವ್ರು ಒಂದ್‌ ಕಡಿ ಇದ್ದು ಅದನ್ನ ಒಪ್ಕೊಂಡು, ಇನ್ನೊಂದನ್ನ ಟೀಕಿಸ್ತಾರ. ಅಷ್ಟೇ ಅವ್ರ ಕೆಲಸಾ. ನಡೂ ಇರವ್ರ ..... ಅದು ಬಿಂದು ಅಲ್ಲಾ, ತಾಟಸ್ಥ್ಯ ಅಲ್ಲಾ, ಸಮನ್ವಯ ಅಲ್ಲಾ, ಸರಳವಾದದ್ದೂ ಅಲ್ಲಾ, ಎಡಕ್ಕೂ ಬಲಕ್ಕೂ ಚಲನಶೀಲತೆ ಇಲ್ಲಾ. ಮಧ್ಯಮ ಮಾರ್ಗವೇ ಉತ್ತಮ. ಎರಡರಾಗೂ ಇರೋ ಒಪ್ಪಿಕೊಳ್ಳುವಂಥಾ ಅಂಶಾ ಅನುಸರಿಸಿದ್ರ, ವಿಚಾರಧಾರೇನ ಇಲ್ಲಿ ಬೆಳಿಸಾಕ ಸಾಧ್ಯ ಆಗತೈತಿ’ ಎಂದರು.
 
ಅವರ ಈ ಮಾತಿಗೆ ಬಹುತೇಕ ಯುವಕರು ಚಪ್ಪಾಳೆ ಹಾಕಿದರು. ‘ಮಧ್ಯಮ ಮಾರ್ಗಾನ ಇಲ್ಲಾ ಅಂತ ಹೇಳಾಕಾಂಗಂಗಿಲ್ಲಾ. ಎಡಕ್ಕೂ, ಬಲಕ್ಕೂ ಸಾಕಷ್ಟ್‌ ಮಂದಿ ಅದಾರ’ ಎಂದು ಪ್ರತಿಪಾದಿಸಿದರು.
 
‘ಯುವಜನ್ರ ಸಣ್ಣ ತಂಡಾ ತಯಾರಾಗಾಕಹತ್ತೈತಿ’ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು.
 
‘ಕೆಲವ್ರ ಮೆಚ್ಗಿ ನಮ್ಮನ್ನ ನಮ್ರರನ್ನಾಗಿ ಮಾಡ್ಯಾವ’  ಎನ್ನುವಾಗ ಅವರ ದನಿ ನಡುಗುತ್ತಿತ್ತು. ‘ಪಾಟೀಲರಷ್ಟ್‌ ಚೂಪ್‌ ಇಲ್ಲಾ ನಮ್ಮ ಚಾಕೂ. ನಾವ್‌ ಆಮ್ಯಾಲೆ ನಕ್ಕೋಂತ ಹೊರಗ ಹೋಗ್ತೀವಿ’ ಎಂದು ನಕ್ಕರು. ಸಂಸದ ಪ್ರಹ್ಲಾದ ಜೋಶಿ ಅವರನ್ನು ‘ಸಂಭ್ರಮದ ಎಕ್ಸಿಕ್ಯೂಶನರ್‌’ ಅಂತಾ ಹೇಳ್ತೇನಿ’ ಎಂದರು.
 
ಸಮೀಕ್ಷೆ ಮಂಡಿಸಿದ ಓ.ಎಲ್‌ ನಾಗಭೂಷಣಸ್ವಾಮಿ, ‘ಸಾಹಿತ್ಯ ಸಂಭ್ರಮದಲ್ಲಿ ಕೆಲವು ಗೋಷ್ಠಿಗಳು ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಲಿಲ್ಲ. ಸಂವಾದದಲ್ಲಿ ಕೆಲವರು ಅಭಿಪ್ರಾಯಗಳನ್ನೇ ಪ್ರಶ್ನೆಗಳಾಗಿಸಿದರು. ಆದರೆ ಪ್ರಶ್ನೆ ಕೇಳುವ ತರಬೇತಿಯೂ ಇಂಥ ವೇದಿಕೆಯಿಂದಲೇ ನಡೆಯಬೇಕಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
 
ಸಮಾರೋಪ ಭಾಷಣ ಮಾಡಿದ ಗುರುಲಿಂಗ ಕಾಪಸೆ, ‘ಯೋಜಕಸ್‌ತತ್ರ ದುರ್ಲಭಃ’ ಎಂಬ ಉಕ್ತಿ ಉಲ್ಲೇಖಿಸುತ್ತ ಡಾ. ಎಂ. ಎಂ. ಕಲಬುರ್ಗಿಯವರನ್ನು ನೆನೆಯುವಾಗ ಅಕ್ಷರಶಃ ಗದ್ಗದಿತರಾದರು. ಸರ್ಕಾರ ಏನಾದರೂ ಮಾಡುತ್ತದೆ, ಮಾಡಲಿ ಎಂದು ಕೂರುವುದು ಬೇಡ. ನಾವೇ ಎಲ್ಲರೂ ಸೇರಿ ಸಂಶೋಧನಾ ಕೇಂದ್ರ ತೆರೆಯೋಣ’ ಎನ್ನುತ್ತ ಮುಂದಿನ ಸಾಲಿನಲ್ಲೆ ಕುಳಿತಿದ್ದ ಚಂದ್ರಕಾಂತ ಬೆಲ್ಲದ ಅವರ ಗಮನ ಸೆಳೆದರು. ‘ಅವರಿಲ್ಲದಿದ್ದರೇನಂತ ಅವರ ಸಂತಾನವೇ ಆಗಿರುವ ಅವರ ಶಿಷ್ಯಬಳಗವಿದೆ’ ಎನ್ನುವಾಗ ಬಸವರಾಜ ಸಬರದ ಸೇರಿದಂತೆ ಹಲವರ ಕಣ್ಣು ಒದ್ದೆಯಾದವು. ಹ.ವೆಂ. ಕಾಖಂಡಕಿ ವಂದಿಸಿದರು.
 
**
ಆನ್‌ಲೈನ್‌ನಲ್ಲಿ 52 ಸಾವಿರ ಮಂದಿ ವೀಕ್ಷಣೆ
ಇಲ್ಲಿ ನಡೆದ ಧಾರವಾಡ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಆನ್‌ಲೈನ್ನಲ್ಲಿ (vividlipi.com) ಒಟ್ಟು 52 ಸಾವಿರ ಮಂದಿ ವೀಕ್ಷಣೆ ಮಾಡಿದ್ದಾರೆ.

ಮೊದಲ ದಿನದ ಕಾರ್ಯಕ್ರಮವನ್ನು 22,200 ಮಂದಿ, ಎರಡನೇ ದಿನದ ಕಾರ್ಯಕ್ರಮವನ್ನು 16,500 ಜನರು ವೀಕ್ಷಿಸಿದ್ದರು.  ಮೂರನೇ ದಿನ 13 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು ಬೆಳಿಗ್ಗೆ ಕರಾರುವಕ್ಕು ಸಂಖ್ಯೆ ದೊರೆಯಲಿದೆ ಎಂದು ವಿವಿಡ್‌ಲಿಪಿ ಪ್ರಾದೇಶಿಕ ಡಿಜಿಟಲ್ ಪಬ್ಲಿಷಿಂಗ್ ವ್ಯವಸ್ಥಾಪಕ ವಿಜಯಕುಮಾರ ಸತ್ತೂರ ಹೇಳಿದರು.

ವಿವಿಧ ಗೋಷ್ಠಿಗಳಿಗೆ ಒಟ್ಟು 58 ಪ್ರಶ್ನೆಗಳನ್ನು ವೆಬ್‌ಸೈಟ್‌ನಲ್ಲಿ ಕೇಳಲಾಗಿದೆ. ಅಮೆರಿಕ, ಕೆನಡಾ, ಸಿಂಗಪುರ, ಆಸ್ಟ್ರೇಲಿಯಾ, ಜರ್ಮನಿ ಸೇರಿದಂತೆ ಹಲವು ದೇಶಗಳು ಮತ್ತು ಭಾರತದ ವಿವಿಧ ರಾಜ್ಯಗಳಲ್ಲಿನ ಸಾಹಿತ್ಯಾಸಕ್ತರು ಕಾರ್ಯಕ್ರಮ ವೀಕ್ಷಣೆ ಮಾಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅನ್ ಲೈನ್ ಮೂಲಕ ಸಾಹಿತ್ಯ ಸಂಭ್ರಮ ವೀಕ್ಷಿಸಿದವರ ಸಂಖ್ಯೆ ದುಪ್ಪಟ್ಟಾಗಿದೆ ಎಂದು ಅವರು ತಿಳಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.