ಬೆಂಗಳೂರು: ‘ತಳ ಸಮುದಾಯವಾದ ಗಾಣಿಗರ ಜಾತಿಗೆ ಸೇರಿದ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿತವಾಗುವಷ್ಟು ಎತ್ತರಕ್ಕೆ ಬೆಳೆದಿದ್ದು ಖುಷಿ ಸಂಗತಿ. ಆದರೆ, ಮಾನವ ವಿರೋಧಿಯಾದ ಅವರಿಗೆ ಪ್ರಧಾನಿಯಾಗುವ ಯೋಗ್ಯತೆ ಇಲ್ಲ’ ಎಂದು ಹಿರಿಯ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಸ್ಪಷ್ಟವಾಗಿ ಹೇಳಿದರು.
ಬೆಂಗಳೂರು ಪ್ರೆಸ್ ಕ್ಲಬ್ ಮತ್ತು ವರದಿಗಾರರ ಕೂಟ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ‘ಹಿಂಸೆಯನ್ನು ಪ್ರಚೋದಿಸುವುದು ನಾಗರಿಕತೆ ಅಲ್ಲ. ಅದರಲ್ಲೂ ಸರ್ಕಾರದಲ್ಲಿ ಇರುವವರು ರಾಜಧರ್ಮ ಪಾಲನೆ ಮಾಡಬೇಕು. ಹಾಗಾಗದಿದ್ದಾಗ ವಿರೋಧಿಸದೆ ಗತ್ಯಂತರವೇ ಇಲ್ಲ’ ಎಂದು ತಿಳಿಸಿದರು.
‘ದೇಶ ವಿಭಜನೆಯಾದಾಗ ಸತ್ತ ಜನರಿಗೆ ಲೆಕ್ಕವಿಲ್ಲ. ಅದಕ್ಕೆ ಕಾರಣರಾದ ಯಾರಿಗೂ ಶಿಕ್ಷೆ ಆಗಲಿಲ್ಲ. ಸಿಖ್ ಹತ್ಯಾಕಾಂಡ ಮತ್ತೊಂದು ಚಾರಿತ್ರಿಕ ಪ್ರಮಾದ. ಆಗಲೂ ಎಷ್ಟು ಜನರಿಗೆ ಶಿಕ್ಷೆ ಆಯಿತು ಎಂಬುದು ಗೊತ್ತಿಲ್ಲ. ಬಳಿಕ ನಡೆದಿದ್ದು ಗುಜರಾತ್ ಹಿಂಸಾಚಾರ. ಹಿಂಸೆಯನ್ನು ಸಾಮೂಹಿಕವಾಗಿ ಮಾಡಿದರೆ ತಪ್ಪಿಸಿಕೊಳ್ಳುವುದು ಸುಲಭ ಎಂಬ ಭಾವ ಅಂತಹ ಕೃತ್ಯಗಳಲ್ಲಿ ತೊಡಗುವವರಲ್ಲಿದೆ. ಹಿಂಸಾ ಕೃತ್ಯಗಳನ್ನು ಯಾರು ನಡೆಸಿದರೂ ತಪ್ಪು. ಅಪರಾಧಿಗಳಿಗೆ ಶಿಕ್ಷೆ ಆಗಲೇಬೇಕು’ ಎಂದು ಪ್ರತಿಪಾದಿಸಿದರು.
‘ಸಿಖ್ ಹತ್ಯಾಕಾಂಡ ವಿರೋಧಿಸಲಿಲ್ಲ; ಉಳಿದ ದುಷ್ಕೃತ್ಯಗಳು ನಡೆದಾಗಲೂ ಸ್ಪಂದಿಸಲಿಲ್ಲ ಎಂಬ ಆರೋಪ ನನ್ನ ಮೇಲಿದೆ. ಯಾವುದೇ ಕೃತ್ಯದ ಕುರಿತು ನಾನು ಪ್ರತಿಕ್ರಿಯಿಸುವಾಗ ಹಿಂದೆ ಇಂತಹ ಘಟನೆಗಳು ನಡೆದಾಗ ಮಾತನಾಡಿದ್ದೆ ಎಂಬುದಕ್ಕೆ ಪುರಾವೆಯಾಗಿ ‘ಕ್ಲೀನ್ ಚಿಟ್’ ತರಬೇಕೇ’ ಎಂದು ಪ್ರಶ್ನಿಸಿದರು. ‘ಹಿಂಸೆ ನಡೆದಾಗ ಆ ಕ್ಷಣಕ್ಕೆ ಸ್ಪಂದಿಸದೆ ಕಣ್ಣು ಮುಚ್ಚಿಕೊಂಡು ಕೂರಲು ಆಗಲ್ಲ’ ಎಂದೂ ಹೇಳಿದರು.
‘ಅಭಿವೃದ್ಧಿಗೆ ನನ್ನ ವಿರೋಧವಿದೆ. ಏಕೆಂದರೆ, ಅದರ ಹಿಂದೆ ಭ್ರಷ್ಟಾಚಾರ ಇರುತ್ತದೆ. ನಮಗೆ ಬೇಕಿರುವುದು ಸರ್ವೋದಯವೇ ಹೊರತು ಅಭಿವೃದ್ಧಿ ಅಲ್ಲ. ದಲಿತರನ್ನೂ ಒಳಗೊಂಡಂತೆ ಕಡುಬಡವರನ್ನು ಸರ್ಕಾರದ ಪರಿಧಿಗೆ ತರುವುದು ಸೃಜನಶೀಲ ರಾಜಕಾರಣ. ಬಡವರಿಗೆ ಕಂಬಳಿ ಕೊಟ್ಟ ಎಂ.ಜಿ. ರಾಮಚಂದ್ರನ್ ಅದನ್ನು ಯಶಸ್ವಿಯಾಗಿ ನಿಭಾಯಿಸಿದರು. ಕೇವಲ ಕೈಗಾರಿಕೆಗಳನ್ನು ಬೆಳೆಸಲು ಅವಕಾಶ ನೀಡುವುದು ವಿನಾಶದ ರಾಜಕಾರಣ. ಅದನ್ನು ಮೋದಿ ಮಾಡುತ್ತಿದ್ದಾರೆ’ ಎಂದು ವಿಶ್ಲೇಷಿಸಿದರು.
‘ಜಡಭರತನ ಸೂತ್ರವನ್ನು ಪ್ರತಿಪಾದಿಸಿದ ದೇಶ ನಮ್ಮದು. ವಿಪರೀತವಾಗಿ ಮುಂದುವರಿಯುವುದು ನಮಗೆ ಬೇಕಿಲ್ಲ. ಸುಖ ಕೊಡುವ ಸರ್ಕಾರಕ್ಕಿಂತ ನೆಮ್ಮದಿ ನೀಡುವ ಆಡಳಿತ ಬೇಕು. ಸುಖದ ಆಸೆ ಅಪರಿಮಿತ. ನೆಮ್ಮದಿ ಭಾವ ಹೆಚ್ಚಿನದನ್ನು ಅಪೇಕ್ಷಿಸುವುದಿಲ್ಲ’ ಎಂದು ಹೇಳಿದರು. ಪ್ರೆಸ್ ಕ್ಲಬ್ ಅಧ್ಯಕ್ಷ ರಾಮಕೃಷ್ಣ ಉಪಾಧ್ಯ, ವರದಿಗಾರರ ಕೂಟದ ಅಧ್ಯಕ್ಷ ಕೆ.ವಿ. ಪ್ರಭಾಕರ್ ಹಾಜರಿದ್ದರು.
ಗಡ್ಡವೊಂದೇ ನಮಗಿರುವ ಸಾಮ್ಯ
ಹಿರಿಯ ಸಾಹಿತಿ ಯು.ಆರ್. ಅನಂತಮೂರ್ತಿ ಅವರೊಂದಿಗಿನ ಸಂವಾದದ ತುಣುಕುಗಳು ಇಲ್ಲಿವೆ:
*ನಿಮಗೂ ಮೋದಿಗೂ ಏನು ಸಾಮ್ಯ?
ಮೋದಿ ಮತ್ತು ನನ್ನ ನಡುವೆ ಯಾವ ಸಾಮ್ಯವೂ ಇಲ್ಲ. ನನಗೆ ಓದು, ಸಂಗೀತ ಮತ್ತು ಹೆಣ್ಣು ಮಕ್ಕಳು ಅಂದ್ರೆ ಇಷ್ಟ. ಅವರಿಗೆ ಹೇಗೋ ಗೊತ್ತಿಲ್ಲ. ಇಬ್ಬರ ನಡುವಿನ ಏಕೈಕ ಸಾಮ್ಯವೆಂದರೆ ಗಡ್ಡವೊಂದೇ!
*ಮಾಧ್ಯಮಗಳಿಗೆ ಮೋದಿ ಮೇಲೆ ಅಷ್ಟೇಕೆ ಪ್ರೇಮ?
ಮೋದಿ ಪರ ಆಂದೋಲನ ನಡೆಸುತ್ತಿರುವ ಮಾಧ್ಯಮಗಳಿಗೆ ಹಣದ ಹೊಳೆ ಹರಿದು ಬರುತ್ತಿದೆ. ಮಾಧ್ಯಮಗಳ ಪಾಲಿಗೆ ಮೋದಿ ಅಲೆ ಒಂದು ಮಾರುಕಟ್ಟೆ ಸರಕಾಗಿರುವ ಕಾರಣ ಆ ಪ್ರೇಮ.
*ಮೋದಿ ಹೆಸರು ಹೇಳಿದರೆ ನಿಮ್ಮ ಮುಖಭಾವ ಬದಲಾಗುವುದೇಕೆ?
ಮೋದಿ ಮಾತ್ರವಲ್ಲ, ಮಾನವ ವಿರೋಧಿಯಾದ ಯಾರನ್ನೇ ಉಲ್ಲೇಖಿಸಿದರೂ ನನ್ನ ಮುಖದ ಭಾವ ಬದಲಾಗುತ್ತದೆ. ಹಿಟ್ಲರ್ ಹೆಸರು ಹೇಳಿದರೂ ಹಾಗೇ ಆಗುತ್ತದೆ.
*ಕಾಂಗ್ರೆಸ್‌ನಲ್ಲಿ ಕೊಳಕಿಲ್ಲವೆ? ಮನಮೋಹನ್ ಸಿಂಗ್ ಮತ್ತೆ ಪ್ರಧಾನಿ ಆಗಬೇಕೇ?
ಕಾಂಗ್ರೆಸ್ ಒಂದು ಬತ್ತಲಾರದ ಗಂಗೆ. ಅಲ್ಲಿ ಕೊಳಕಿದ್ದರೂ ಹೊಸ ನೀರು ಹರಿದು ಬರುತ್ತದೆ. ಆ ಪಕ್ಷಕ್ಕಿರುವ ಶತಮಾನದ ಅನುಭವಗಳ ನೆನಪಿನ ಕೋಶ ಬಿಜೆಪಿಗೆ ಇಲ್ಲ. ಮನಮೋಹನ್ ಸಿಂಗ್ ಮತ್ತೆ ಪ್ರಧಾನಿಯಾಗಬೇಕು ಎಂದು ಹೇಳುವಷ್ಟು ಧೈರ್ಯ ನನಗಿಲ್ಲ. ರಾಹುಲ್ ಗಾಂಧಿ ಕೂಡ ಆ ಹುದ್ದೆಗೆ ಯೋಗ್ಯ ಅಭ್ಯರ್ಥಿ ಅಲ್ಲ. ನಾನು ಆಶಾವಾದಿ. ಮಾರ್ಗಗಳು ಮುಚ್ಚಿದಾಗಲೇ ಹೊಸ ದಾರಿಗಳು ತೆರೆದುಕೊಳ್ಳುತ್ತವೆ.
* ಕಾಂಗ್ರೆಸ್ ಪಕ್ಷವನ್ನು ಮತ್ತೆ ವಿರೋಧಿಸುವುದಿಲ್ಲವೇ?
ಕಾಂಗ್ರೆಸ್ಸೇತರ ರಾಜಕೀಯ ವ್ಯವಸ್ಥೆಯಲ್ಲಿ ಬೆಳೆದು ಬಂದವನು ನಾನು. ಈಗ ಆ ಪಕ್ಷವನ್ನೇ ಬೆಂಬಲಿಸುವ ನೈತಿಕ ಅಗತ್ಯ ಬಂದೊದಗಿದೆ. ಅಲ್ಲಿ ತಪ್ಪುಗಳಾದಾಗ ಅದನ್ನೂ ವಿರೋಧಿಸುತ್ತೇನೆ. ಇದೊಂದು ರೀತಿ ವಿದೂಷಕನ ಪಾತ್ರ ಇದ್ದಂತೆ.
*ಕಾಂಗ್ರೆಸ್‌ನಿಂದ ಭ್ರಷ್ಟಾಚಾರ ನಡೆದಿಲ್ಲವೆ?
ಯಾವ ಪಕ್ಷವೂ ಭ್ರಷ್ಟಾಚಾರಕ್ಕೆ ಹೊರತಲ್ಲ. ಆದರೆ, ಹಗರಣಗಳಿಗಿಂತ ಭೂಮಿಯನ್ನು ಬೆತ್ತಲೆ ಮಾಡಿದ್ದು, ಅದಿರು ಮಾರಿದ್ದು ಹೆಚ್ಚು ಅಪಾಯಕಾರಿ
*ಅಭಿವೃದ್ಧಿಗೆ ಏಕೆ ವಿರೋಧ?
ಅಭಿವೃದ್ಧಿಯು ಭೂಮಿ ಮತ್ತು ಮನುಷ್ಯ ಎರಡನ್ನೂ ನಾಶ ಮಾಡುತ್ತದೆ. ಬೆಂಗಳೂರು ಹಾಳಾಗಿದ್ದೇ ಐಟಿ ಉದ್ಯಮದಿಂದ. ಟೆಕ್ಕಿಗಳಿಗೆ ಅಷ್ಟೊಂದು ಸಂಬಳ ಕೊಡುವ ಅಗತ್ಯ ಇರಲಿಲ್ಲ. ಇನ್ಫೋಸಿಸ್‌ನ ಎನ್.ಆರ್. ನಾರಾಯಣಮೂರ್ತಿ ಅವರಿಗೆ ಸಹ ಈ ಸಲಹೆ ಕೊಟ್ಟಿದ್ದೆ. ಟೆಕ್ಕಿಗಳಿಗಿಂತ ಪತ್ರಕರ್ತರಾಗುವುದು ಕಷ್ಟದ ಕೆಲಸ.
*ಅನಂತಮೂರ್ತಿ ಅಂದ್ರೆ ಕೀಟಲೆ ಎನ್ನಲಾಗುತ್ತಿದೆ...
ಹೌದು, ಕೀಟಲೆ ನನ್ನ ಸ್ವಭಾವ. ಅನಗತ್ಯವಾಗಿ ಮಾಡಲ್ಲ. ಎರಡು ದಿನಕ್ಕೊಮ್ಮೆ ಡಯಾಲಿಸಿಸ್ ಮಾಡಿಸಿಕೊಳ್ಳುತ್ತೇನೆ. ಆರೋಗ್ಯವೂ ಕೈಕೊಟ್ಟಿದೆ. ಮನೆಮಂದಿ ತಡೆಯುತ್ತಾರೆ. ಆದರೆ, ನಾನು ಸುಮ್ಮನಿರುವುದಿಲ್ಲ
* ಅನಂತಮೂರ್ತಿ ಅವರನ್ನು ಬ್ರಾಹ್ಮಣ್ಯ ಬಿಟ್ಟಿದೆಯಾ?
ನಾನು ಬ್ರಾಹ್ಮಣ್ಯ ಬಿಟ್ಟರೂ ಬ್ರಾಹ್ಮಣ್ಯ ನನ್ನನ್ನು ಬಿಟ್ಟಿಲ್ಲ. ಬಾಲ್ಯದಲ್ಲಿ ದೇವಸ್ಥಾನಕ್ಕೆ ಸುತ್ತಿದ್ದು, ಮಂತ್ರ ಬಾಯಿಪಾಠ ಮಾಡಿದ್ದು ಇನ್ನೂ ನೆನಪಿನಲ್ಲಿವೆ. ನಾನು ಆ ಆಚರಣೆಗಳನ್ನು ವಿಮರ್ಶೆಯ ದೃಷ್ಟಿಕೋನದಿಂದ ನೋಡುತ್ತೇನೆ. ಹಾಗೆ ನೋಡಿದಾಗಲೇ ಸೃಜನಶೀಲ ಮನೋಭಾವ ಮೈಗೂಡುತ್ತದೆ.
* ಜಾತಿಗಳು ಹೆಚ್ಚುತ್ತಿವೆಯಲ್ಲ?
ಜಾತಿ ವ್ಯವಸ್ಥೆ ಅಳಿಯುವಂತೆ ಕಾಣುತ್ತಿಲ್ಲ. ಬಸವಣ್ಣ ಜಾತಿ ಬೇಡ ಎಂದು ಕಟ್ಟಿದ ಲಿಂಗಾಯತ ಧರ್ಮದಲ್ಲೇ ಹಲವು ಜಾತಿಗಳಿವೆ. ಜಾತಿ ಅಳಿಯುವವೋ ಇಲ್ಲವೋ ಗೊತ್ತಿಲ್ಲ. ಅವುಗಳ ಸಮಾನತೆ ಇಂದಿನ ಅಗತ್ಯವಾಗಿದೆ. ದೇವರಿಗಿಂತ ಅಧ್ಯಾತ್ಮದ ಅನುಭೂತಿಯನ್ನೇ ಹೆಚ್ಚಾಗಿ ಪ್ರತಿಪಾದಿಸುವ ಬೌದ್ಧಮತದ ಕಡೆಗೆ ಮುಂದೆ ಪ್ರಪಂಚವೇ ಹೊರಳಬಹುದು
*ನಿಮ್ಮ ಪ್ರಕಾರ ಈಗಿನ ರಾಷ್ಟ್ರೀಯ ನಾಯಕರು ಯಾರು?
ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಒಬ್ಬ ರಾಷ್ಟ್ರೀಯ ನಾಯಕನೂ ಇಲ್ಲ. ಈಗೇನಿದ್ದರೂ ಮೊಹಲ್ಲಾ ನಾಯಕರ ಯುಗ. ನೆಹರೂ ಸಚಿವ ಸಂಪುಟದ ಒಬ್ಬೊಬ್ಬ ಸದಸ್ಯರೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗುವ ಸಾಮರ್ಥ್ಯ ಹೊಂದಿದ್ದರು
* ಗೋಮಾಂಸ ಭೋಜನದ ಬಗೆಗೆ ಏನು ಹೇಳುತ್ತೀರಿ?
ವೇದಕಾಲದಲ್ಲಿ ಬ್ರಾಹ್ಮಣರೂ ಗೋಮಾಂಸ ಭಕ್ಷಣೆ ಮಾಡುತ್ತಿದ್ದರು. ಯಾಗಗಳಿಗೆ ಆಹುತಿಯನ್ನೂ ಕೊಡುತ್ತಿದ್ದರು. ಹಾಲು ವ್ಯಾಪಾರದ ವಸ್ತುವಾದ ಮೇಲೆ ಬಡವರ ಮನೆಯಲ್ಲಿ ಕುಡಿಯಲು ಮಜ್ಜಿಗೆಯೂ ಸಿಗುತ್ತಿಲ್ಲ. ಹಸುಗಳು ಹಾಲು ಕೊಡದಿದ್ದಾಗ, ದನಗಳು ಕೃಷಿ ಉಪಯೋಗಕ್ಕೆ ಬಾರದಿದ್ದಾಗ ಆರ್ಥಿಕವಾಗಿ ಹೊರೆ. ಆಗ ಅವುಗಳಿಗೆ ಮೇವು ಹಾಕುವುದೂ ಕಷ್ಟ. ಗೋಮಾಂಸ ಭಕ್ಷಣೆಯನ್ನು ತುಂಬಾ ಭಾವನಾತ್ಮಕ ವಿಷಯವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ.
* ನೀವೂ ಭೀಷ್ಮನಂತೆ ಇಚ್ಛಾಮರಣಿ ಆಗುವಿರಾ?
ಇಚ್ಛಾಮರಣ ಅದ್ಭುತ ಪರಿಕಲ್ಪನೆ. ನನಗೆ ಅದರಲ್ಲಿ ಇಷ್ಟವಿದೆ. ಅಲ್ಲಿ ವಿಳಂಬಿಯಾಗುವ ಅವಕಾಶವೂ ಇದೆ.
****
ಕೆಟ್ಟ ವಿಡಂಬನೆ
‘ಪ್ರಜಾವಾಣಿ’ ನಾನು ಅತ್ಯಂತ ಮೆಚ್ಚಿದ ಹಾಗೂ ನನಗೆ ಹೆಚ್ಚು ಬೇಕಾದ ಪತ್ರಿಕೆ. ಆದರೆ, ನನ್ನ ಹೇಳಿಕೆ ಕುರಿತಂತೆ ಅದರ ಸೋಮವಾರ ಸಂಚಿಕೆಯಲ್ಲಿ ಬಂದ ವಿಡಂಬನೆ (ಚೂಬಾಣ) ಅತ್ಯಂತ ಕೆಟ್ಟದಾಗಿದೆ. ಅಪಹಾಸ್ಯವನ್ನೂ ಮುಕ್ತವಾಗಿ ಸ್ವಾಗತಿಸುವ ನನಗೆ ಈ ವಿಡಂಬನೆಯಿಂದ ಬೇಸರವಾಗಿದೆ. ಘನವಂತರು ಸತ್ಯ ಹೇಳುವುದಿಲ್ಲ. ಏಕೆಂದರೆ ಮರ್ಯಾದೆ ಪ್ರಶ್ನೆ ಎದುರಾಗುತ್ತದೆ. ಅದಕ್ಕಾಗಿ ಬಾಯಿ ಮುಚ್ಚಿಕೊಂಡು ಸುಮ್ಮನಿರುತ್ತಾರೆ. ಸತ್ಯ ನುಡಿಯಲು ಮರ್ಯಾದೆ ನೋಡಲಾರೆ.
–ಯು.ಆರ್. ಅನಂತಮೂರ್ತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.