ADVERTISEMENT

ಅಮ್ಮನ ಕನಸು ಈಡೇರಿಸುವ ಕನವರಿಕೆ

ಮಂಗಳೂರು ವಿ.ವಿ. ಘಟಿಕೋತ್ಸವ: ಕೂಲಿ ಕಾರ್ಮಿಕಳ ಮಗಳಿಗೆ ಎರಡು ಚಿನ್ನ

ಹೈಮದ್ ಹುಸೇನ್
Published 30 ಮಾರ್ಚ್ 2016, 19:30 IST
Last Updated 30 ಮಾರ್ಚ್ 2016, 19:30 IST
ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ 34ನೇ ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ ಅವರು ಚೈತ್ರ ಅವರಿಗೆ ಚಿನ್ನದ ಪದಕ, ನಗದು ಬಹುಮಾನ ವಿತರಿಸಿದರು –ಪ್ರಜಾವಾಣಿ ಚಿತ್ರ
ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ 34ನೇ ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ ಅವರು ಚೈತ್ರ ಅವರಿಗೆ ಚಿನ್ನದ ಪದಕ, ನಗದು ಬಹುಮಾನ ವಿತರಿಸಿದರು –ಪ್ರಜಾವಾಣಿ ಚಿತ್ರ   

ಮಂಗಳೂರು: ಕೂಲಿ ಕಾರ್ಮಿಕ ಮಹಿಳೆಯ ಮಗಳು, ದಲಿತ (ಆದಿ ದ್ರಾವಿಡ) ವಿದ್ಯಾರ್ಥಿನಿ ಚೈತ್ರಾ ಅವರು ಸ್ನಾತಕೋತ್ತರ ಇತಿಹಾಸ ವಿಭಾಗದಲ್ಲಿ ಎರಡು ಚಿನ್ನದ ಪದಕ ಮತ್ತು ಐದು ನಗದು ಬಹುಮಾನ ಪಡೆದು ಸಾಧನೆ ಮಾಡಿದ್ದಾರೆ.

ಮಂಗಳೂರು ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವ ಟಿ.ಬಿ. ಜಯಚಂದ್ರ ಅವರಿಂದ ಚಿನ್ನದ ಪದಕ ಮತ್ತು ನಗದು ಬಹುಮಾನವನ್ನು ಬುಧವಾರ ಪಡೆದುಕೊಂಡರು. ಉಡುಪಿಯ ಅಜ್ಜರಕಾಡಿನಲ್ಲಿರುವ ಡಾ. ಜಿ. ಶಂಕರ್‌ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ಸ್ನಾತಕೋತ್ತರ ಪದವಿಯನ್ನು ಅಧ್ಯಯನ ಮಾಡಿದ್ದಾರೆ.

‘ತಾಯಿ ಮುತ್ತು ಅವರು ಕೂಲಿ ಕೆಲಸ ಮಾಡಿ, ಸಾಲ ಮಾಡಿ ನನ್ನನ್ನು ಓದಿಸಿದ್ದಾರೆ. ನಾನು ಓದಿ ಉಪನ್ಯಾಸಕಿಯಾಗಬೇಕು ಎಂದು ಅವರು ಕನಸು ಕಂಡಿದ್ದಾರೆ. ಅದನ್ನು ಈಡೇರಿಸಬೇಕು ಎಂಬ ಛಲ ಇದೆ. ಸದ್ಯ ಕಂಪ್ಯೂಟರ್‌ ಕಲಿಕೆಯಲ್ಲಿ ತೊಡಗಿದ್ದೇನೆ. ಉಪನ್ಯಾಸಕಿಯಾಗಲು ಬಿ.ಇಡಿ ಮಾಡುವುದು ಕಡ್ಡಾಯವಾಗಿದೆ. ಅದನ್ನು ಮೊದಲು ಮುಗಿಸಿ ನಂತರ ಸಂಶೋಧನೆ ಮಾಡುತ್ತೇನೆ’ ಎಂದು ಚೈತ್ರಾ ತಮ್ಮ ಸಂತಸವನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

ದೊಡ್ಡಮ್ಮನ ವಾತ್ಸಲ್ಯ ಸಾಧನೆ: ಕನ್ನಡ ಸ್ನಾತಕೋತ್ತರ ವಿಭಾಗದಲ್ಲಿ ಅಂಬಿಕಾ ಅವರು ಒಂದು ಚಿನ್ನದ ಪದಕ ಮತ್ತು ಐದು ನಗದು ಬಹುಮಾನವನ್ನು ಪಡೆದುಕೊಂಡಿದ್ದಾರೆ. ಪ್ರಸ್ತುತ ಉಡುಪಿಯ ಕಲ್ಯಾಣಪುರ ಮಿಲಾಗ್ರಿಸ್‌ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವ ಅಂಬಿಕಾ ಮಹಿಳಾ ಕೇಂದ್ರಿತ ವಿಷಯದ ಕುರಿತು ಸಂಶೋಧನೆ ಮಾಡುವ ಇಂಗಿತವನ್ನು ಹಂಚಿಕೊಂಡರು.

‘ನನ್ನ ತಾಯಿಯನ್ನು ನೋಡೇ ಇಲ್ಲ. ದೊಡ್ಡಪ್ಪ–ದೊಡ್ಡಮ್ಮ ಅವರ ಆಶ್ರಯದಲ್ಲಿ ಬೆಳೆದೆ. ದೊಡ್ಡಮ್ಮ ಶಾರದಾ ತಮ್ಮ ಮಕ್ಕಳಂತೆಯೇ ನನ್ನನ್ನು ಬೆಳೆಸಿದರು ಎಂದರು. 

ಗೌರವ ಡಾಕ್ಟರೇಟ್‌: ಜಯದೇವ ಹೃದಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ವೈದ್ಯ ಡಾ. ಸಿ.ಎನ್‌. ಮಂಜುನಾಥ್‌ ಅವರಿಗೆ ವಿಜ್ಞಾನ ವಿಭಾಗದಲ್ಲಿ (ಡಿ.ಎಸ್‌ಸಿ) ಮತ್ತು ಎ.ಜೆ. ಸಮೂಹ ಸಂಸ್ಥೆಗಳ ಅಧ್ಯಕ್ಷ ಎ.ಜೆ. ಶೆಟ್ಟಿ, ಹಿರಿಯ ಸಾಹಿತಿ ಎಸ್‌.ಎಲ್‌. ಭೈರಪ್ಪ ಅವರಿಗೆ ಗೌರವ ಡಾಕ್ಟರೇಟ್‌ (ಡಿ.ಲಿಟ್) ಪದವಿ ಪ್ರದಾನ ಮಾಡಲಾಯಿತು. ಉನ್ನತ ಶಿಕ್ಷಣ ಸಚಿವ ಟಿ.ಬಿ. ಜಯಚಂದ್ರ ಅಧ್ಯಕ್ಷತೆ ವಹಿಸಿದ್ದರು.
ನೀತಿ ಆಯೋಗದ ಸದಸ್ಯ ವಿಜಯ ಕುಮಾರ್‌ ಸಾರಸ್ವತ್‌ ಘಟಿಕೋತ್ಸವ ಭಾಷಣ ಮಾಡಿದರು. ಕುಲಪತಿ ಪ್ರೊ. ಕೆ. ಭೈರಪ್ಪ ಇದ್ದರು.
*
ವಿದ್ಯಾರ್ಥಿನಿಯರ ಮೇಲುಗೈ
ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ 34ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದರು. ವಿವಿಯ 39 ಚಿನ್ನದ ಪದಕಗಳ ಪೈಕಿ 34 ಪದಕಗಳು 25 ವಿದ್ಯಾರ್ಥಿಯರ ಕೊರಳಿಗೆ ಸೇರಿದವು. 62 ನಗದು ಬಹುಮಾನಗಳಲ್ಲಿ 46ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ವಿದ್ಯಾರ್ಥಿನಿಯರೇ ಬಾಚಿಕೊಂಡರು. ವಿವಿ ಪದವಿ ಮತ್ತು ಸ್ನಾತಕೋತ್ತರ ಪದವಿಯ 260 ರ್‍ಯಾಂಕ್‌ಗಳಲ್ಲಿ 175 ರ್‍ಯಾಂಕ್‌ಗಳನ್ನು ವಿದ್ಯಾರ್ಥಿನಿಯರೇ ತಮ್ಮದಾಗಿಸಿಕೊಂಡರು.

ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ವಿದ್ಯಾರ್ಥಿನಿಯರೇ ಅತಿ ಹೆಚ್ಚು ಸಂಖ್ಯೆಯಲ್ಲಿ (24,426) ದಾಖಲಾತಿ ಪಡೆದಿದ್ದರು. ಅವರಲ್ಲಿ 17,431 ಮಂದಿ ಪದವಿ ಪಡೆದರು. ಪದವಿ ಪಡೆದ ವಿದ್ಯಾರ್ಥಿಗಳ ಸಂಖ್ಯೆ ಕೇವಲ 9,745 (21,032 ದಾಖಲಾತಿ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT