ಹೊಸನಗರ (ಶಿವಮೊಗ್ಗ ಜಿಲ್ಲೆ): ಹೈಕೋರ್ಟ್ ಆದೇಶದ ಮೇರೆಗೆ ತ್ರಿಣಿವೆ ಗ್ರಾಮ ದಲ್ಲಿ ಅತಿಕ್ರಮಣವಾಗಿದ್ದ ಅರಣ್ಯ ಭೂಮಿಯನ್ನು ಅರಣ್ಯ ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆಯಲ್ಲಿ ತೆರವುಗೊಳಿಸಲಾಯಿತು. ಇಲ್ಲಿ ಬೆಳೆದುನಿಂತ ಅಡಿಕೆ ಮರಗಳನ್ನು ಕಡಿದು ನೆಲಸಮಗೊಳಿಸಲಾಯಿತು.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ತ್ರಿಣಿವೆ ಗ್ರಾಮದ ಸರ್ವೆ ನಂಬರ್ 106ರಲ್ಲಿ ಈರಾಗೋಡು ಶಂಕರಪ್ಪ ಗೌಡ ಎಂಬುವರು ಅತಿಕ್ರಮಣ ಮಾಡಿದ್ದ 4.10 ಎಕರೆಯಲ್ಲಿ ಫಸಲು ಬರುತ್ತಿದ್ದ ಅಡಿಕೆ ತೋಟವನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಪಿ. ಬ್ಯಾನರ್ಜಿ ಹಾಗೂ ಡಿವೈಎಸ್‌ಪಿ ಚನ್ನಪ್ಪ ಅವರ ನೇತೃತ್ವದಲ್ಲಿ ಬುಧವಾರ ಬೆಳಗಿನ ಜಾವ 5 ಗಂಟೆಗೆ ನೆಲಸಮ ಮಾಡಲಾಯಿತು.
ಈರಾಗೋಡು ಶಂಕರಪ್ಪಗೌಡ ಶರಾವತಿ ನದಿ ತೀರದ ಬೆಣಕಿಯ ವಂದಗದ್ದೆ ದಟ್ಟ ಕಾಡಿನ ಪ್ರದೇಶದಲ್ಲಿ ಮರಗಳನ್ನು ಕಡಿದು ಅಡಿಕೆ ತೋಟ ಮಾಡಿದ್ದರು. ರಾಜ್ಯ ಅರಣ್ಯ ಕಾಯ್ದೆ ಅನ್ವಯ ಅರಣ್ಯಭೂಮಿ ಅತಿಕ್ರಮಣ ಮೊಕದ್ದಮೆ 2000ದಲ್ಲಿ ದಾಖಲಿಸ ಲಾಗಿತ್ತು.
ಅತಿಕ್ರಮಣ ಸಂಬಂಧ ಹೈಕೋರ್ಟ್‌ನಲ್ಲಿ ವಕೀಲ ಎಲ್ಲಪ್ಪ ಸಾರ್ವಜನಿಕ ಹಿತಾ ಸಕ್ತಿ ದೂರನ್ನು ಸಹ ದಾಖಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ರಾಜ್ಯ ಹೈಕೋರ್ಟ್ ಕಳೆದ ಜೂನ್ 25 ರಂದು ಅಡಿಕೆ ತೋಟದ ತೆರವಿಗೆ ಆದೇಶ ನೀಡಿತ್ತು. ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಸುಮಾರು 400 ಸಿಬ್ಬಂದಿ ತೆರವು ಕಾರ್ಯಾಚರಣೆಯಲ್ಲಿ ಭಾಗಿಯಾದರು.
ಎಸಿಎಫ್ಒ ಆಲ್ವಿನ್, ವಲಯ ಅರಣ್ಯಾಧಿ ಕಾರಿಗಳಾದ ಪ್ರಕಾಶ್, ಮೃತ್ಯುಂಜಯಪ್ಪ, ಮುರುಗೇಂದ್ರಪ್ಪ ಹಾಗೂ ಉಪವಲಯ ಅರಣ್ಯಾಧಿಕಾರಿ ದೊಡ್ಡಮನಿ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.