ADVERTISEMENT

ಅಸಹಿಷ್ಣುತೆಗೆ ವಚನಗಳಲ್ಲಿ ಪರಿಹಾರ

‘ಕದಳಿಶ್ರೀ’ ಪ್ರಶಸ್ತಿ ಸ್ವೀಕರಿಸಿದ ಕನ್ನಡ ವಿ.ವಿ ಕುಲಪತಿ ಮಲ್ಲಿಕಾ ಘಂಟಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2016, 19:30 IST
Last Updated 31 ಜನವರಿ 2016, 19:30 IST
ಮೈಸೂರಿನ ಜೆಎಸ್ಎಸ್‌ ಕಾನೂನು ಕಾಲೇಜಿನಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಮಲ್ಲಿಕಾ ಘಂಟಿ ಅವರಿಗೆ ‘ಕದಳಿಶ್ರೀ’ ಪ್ರಶಸ್ತಿ ನೀಡಲಾಯಿತು
ಮೈಸೂರಿನ ಜೆಎಸ್ಎಸ್‌ ಕಾನೂನು ಕಾಲೇಜಿನಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಮಲ್ಲಿಕಾ ಘಂಟಿ ಅವರಿಗೆ ‘ಕದಳಿಶ್ರೀ’ ಪ್ರಶಸ್ತಿ ನೀಡಲಾಯಿತು   

ಮೈಸೂರು: ‘ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಗೆ ವಚನಗಳಲ್ಲಿ ಪರಿಹಾರವಿದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಮಲ್ಲಿಕಾ ಘಂಟಿ ಅಭಿಪ್ರಾಯಪಟ್ಟರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಹಾಗೂ ಕದಳಿ ಮಹಿಳಾ ವೇದಿಕೆ ಇಲ್ಲಿನ ಜೆಎಸ್‌ಎಸ್‌ ಕಾನೂನು ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ 15ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ‘ಕದಳಿಶ್ರೀ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

‘ಈ ಸಮಾಜದಲ್ಲಿ ಮಹಿಳೆಯನ್ನು ಇನ್ನೂ ಸಂಪೂರ್ಣವಾಗಿ ಮುಖ್ಯವಾಹಿನಿಗೆ ಸೇರಿಸಿಕೊಳ್ಳದೇ ಇರುವುದು ಬೇಸರ ಮೂಡಿಸುತ್ತಿದೆ. 12ನೇ ಶತಮಾನದಲ್ಲಿ ಶರಣರು ಅನುಭವ ಮಂಟಪವನ್ನು ರಚಿಸಿ, ಅಲ್ಲಿ ಮಹಿಳೆಯರಿಗೆ ಸಮಾಜ ಸ್ಥಾನ ನೀಡಿದ್ದರು. ಅಲ್ಲಿ ಮುಕ್ತವಾದ ಚರ್ಚೆಗಳು ನಡೆಯುತ್ತಿದ್ದವು. 12ನೇ ಶತಮಾನದಲ್ಲಿದ್ದ ದಿಟ್ಟತನ ಈಗ ಇಲ್ಲವಾಗಿದೆ ಎಂದು ಅನ್ನಿಸುತ್ತಿದೆ.

ಮಹಿಳೆಗೆ ಆಗ ಇದ್ದ ಸಮಾನತೆ ಈಗ ಇಲ್ಲವಾಗಿದೆ. ಪ್ರಶಸ್ತಿ ಸ್ವೀಕರಿಸುತ್ತಿರುವ ನನಗೆ, ಸುತ್ತೂರು ಮಠದ ಶ್ರೀಗಳು ಹಾರ ಹಾಕುತ್ತಾರೆ ಎಂದುಕೊಂಡಿದ್ದೆ. ಆದರೆ, ನಾನು ಮಹಿಳೆ ಎಂಬ ಕಾರಣಕ್ಕೆ ಮುಜುಗರ ಪಟ್ಟುಕೊಂಡು ಅವರು ಹಾರ ಹಾಕಲಿಲ್ಲ. ಮಹಿಳೆ ಎಂದು ಮುಜುಗರ ಪಟ್ಟುಕೊಳ್ಳುವ ಅಗತ್ಯವಿಲ್ಲ. ಪುರುಷರಿಗೆ ಹಾರ ಹಾಕುವುದು ಎಷ್ಟು ಸಹಜವೊ ಅಷ್ಟೇ ಸಹಜವಾಗಿ ಮಹಿಳೆಯರಿಗೂ ಹಾಕಿದರೆ ಆಯಿತು’ ಎಂದರು.

‘12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಪ್ರಕಟವಾಗುತ್ತಿದ್ದ ಕೆಲವು ನಿಲುವುಗಳು ಆಗಿನ ಕಾಲಕ್ಕೆ ದಿಟ್ಟತನದಿಂದಲೇ ಕೂಡಿದ್ದವು. ಆಗಿನ ಕಾಲದಲ್ಲಿ ನಿಜಕ್ಕೂ ಧೈರ್ಯ ಮಾಡಿಯೇ ಆ ವಿಚಾರಗಳನ್ನು ಶರಣರು ಹೇಳಿರಬಹುದು. ಅಕ್ಕಮಹಾದೇವಿಯ ಧೈರ್ಯ ಈಗ ನಮಗೆ ಅಚ್ಚರಿ ಮೂಡಿಸುತ್ತಿದೆ.

ಈ ಆಧುನಿಕ ಕಾಲದಲ್ಲಿ ಏನನ್ನೇ ಹೇಳಬೇಕಾದರೂ ಚಿಂತಿಸಿ ಹೇಳಬೇಕಾದ ಪರಿಸ್ಥಿತಿ ಬಂದಿದೆ. ಮಾತನಾಡುವ, ಬರೆಯುವ ಸ್ವಾತಂತ್ರ್ಯ ಈಗ ಇಲ್ಲ. ಬರೆದರೆ ಮನೆಗೆ ಕಲ್ಲು ಬೀಳುವ ಅಪಾಯ ಇರುತ್ತದೆ. ಈ ಸಂದರ್ಭದಲ್ಲಿ ಶರಣರ ವಚನಗಳನ್ನು ಪಾಲಿಸಿದರೆ, ಈ ಅಸಹಿಷ್ಣುತೆಗೆ ಪರಿಹಾರ ಸಿಗಬಲ್ಲದು’ ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಸರ್ವಮಂಗಳಾ ಶಂಕರ್‌ ಮಾತನಾಡಿ, ‘ಅಕ್ಕಮಹಾದೇವಿಯನ್ನು ಮಹಿಳೆಯರು ಮಾದರಿ ಎಂದು ಪರಿಗಣಿಸಬೇಕು. ಆಕೆಯ ಧೈರ್ಯ, ಆಕೆಯಲ್ಲಿದ್ದ ಸೃಜನಶೀಲತೆಯನ್ನು ಮಹಿಳೆಯರು ತಮ್ಮದಾಗಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಗೊ.ರು. ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮುಖಂಡ ಎಚ್‌.ವಿ. ರಾಜೀವ ಅತಿಥಿಯಾಗಿದ್ದರು. ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಕಲ್ಯಾಣಿ ನಟರಾಜಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.