ADVERTISEMENT

ಅಸ್ಪೃಶ್ಯತೆ ದಲಿತರ ಸಮಸ್ಯೆ ಅಲ್ಲ

ಸಾಹಿತಿ ದೇವನೂರ ಮಹದೇವ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2016, 19:42 IST
Last Updated 19 ಏಪ್ರಿಲ್ 2016, 19:42 IST
ದೇವನೂರ
ದೇವನೂರ   

ಬೆಂಗಳೂರು: ‘ಅಸ್ಪೃಶ್ಯತೆ ಎನ್ನುವುದು ದಲಿತರ ಸಮಸ್ಯೆಯಲ್ಲ. ಅದನ್ನು ಯಾರು ಆಚರಿಸುತ್ತಾರೋ ಅವರ ಸಮಸ್ಯೆ’ ಎಂದು ಸಾಹಿತಿ ದೇವನೂರ ಮಹದೇವ ಹೇಳಿದರು. ಹೊಳೆನರಸೀಪುರದ ಸಿಗರನಹಳ್ಳಿಯಲ್ಲಿ ದಲಿತರಿಗೆ ದೇವಸ್ಥಾನ ಮತ್ತು ಸಮುದಾಯ ಭವನಕ್ಕೆ ಪ್ರವೇಶ ನಿರಾಕರಿಸಿರುವ ಪ್ರಕರಣದ ಬಗ್ಗೆ ‘ಪ್ರಜಾವಾಣಿ’ ಯೊಂದಿಗೆ ಅವರು ಮಾತನಾಡಿದರು.

‘ಅಸ್ಪೃಶ್ಯತೆ ಎನ್ನುವುದು ಯಾರು ಆಚರಿಸುತ್ತಾರೋ ಅವರ ಸಮಸ್ಯೆ ಎಂಬ ದೃಷ್ಟಿಯಿಂದ  ನೋಡಿದಾಗ, ಅಸ್ಪೃಶ್ಯತೆ ಆಚರಿಸುವ ವ್ಯಕ್ತಿಗಳನ್ನು  ಸಂವೇದನಾಶೀಲರನ್ನಾಗಿ ಮಾಡುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲು ಸಾಧ್ಯವಾಗುತ್ತದೆ’ ಎಂದರು.

‘ಅಸ್ಪೃಶ್ಯತೆಯನ್ನು ಆಚರಿಸುವ ಸಮುದಾಯಗಳಲ್ಲೂ ಪ್ರಜ್ಞಾವಂತರಿದ್ದಾರೆ. ಅವರು ತಮ್ಮ ಸಮುದಾಯದವರನ್ನು ಯಾವ ರೀತಿಯಲ್ಲಿ ನಾಗರಿಕರನ್ನಾಗಿ, ಮನುಷ್ಯರನ್ನಾಗಿ ಮಾಡಬೇಕು ಎಂದು ಯೋಚಿಸಬೇಕು. ಅಂಥ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು.  ಅಸ್ಪೃಶ್ಯತೆಯನ್ನು ತೊರೆಯುವುದು ಬೇರೆಯವರಿಗಾಗಿ ಅಲ್ಲ. ಮನುಷ್ಯತ್ವದ ಕಡೆಗೆ ಹೆಜ್ಜೆ ಎಂದು ತಿಳಿಯಬೇಕು’ ಎಂದರು.

ನಮ್ಮ ಗುಡಿಯೊಳಗೆ: ‘ನಾವೇ ಕಟ್ಟಿದ ನಮ್ಮೂರ ಗುಡಿಯೊಳಗೆ ನಾವು ಮಾತ್ರ ಹೋಗುವ ಹಾಗಿಲ್ಲ. ಇದು ವಾಸ್ತವ. ದಲಿತರು ಇರುವ ಎಲ್ಲ ಊರುಗಳಲ್ಲೂ ಈ ಸಂಕಟವಿದೆ.  ದಲಿತರು ಸಂವಿಧಾನ ಮತ್ತು ಅಂಬೇಡ್ಕರ್ ಪ್ರಭಾವದಿಂದಾಗಿ ಸ್ವಾಭಿಮಾನಿಗಳಾಗಿದ್ದಾರೆ. ಅವರು ಕೇಳುತ್ತಿರುವುದು ಸಂವಿಧಾನದ ಹಕ್ಕು.  

ಸಿಗರನಹಳ್ಳಿಯ ಎರಡೂ ಸಮುದಾಯಗಳು ಆತಂಕದಲ್ಲಿವೆ. ಆ ಊರಿಗೆ  ಸಹಬಾಳ್ವೆಯ ವಾತಾವರಣ ಬೇಕೇ ಬೇಕು. ಸಿಗರನಹಳ್ಳಿಯ  ಸ್ವಸಹಾಯ ಸಂಘದ ಮಹಿಳೆಯರು ಅನ್ಯೋನ್ಯವಾಗಿಯೇ ಇದ್ದರು.

ಸಮಸ್ಯೆ ಹುಟ್ಟುಹಾಕಿದ್ದು ಒಬ್ಬ ಗಂಡಸು. ಸದ್ಯ ಊರಿನ ಎಲ್ಲ ಗಂಡಸರನ್ನು ಹೊರಗಿಟ್ಟು,  ಎಲ್ಲ ಸಮುದಾಯದ ಹೆಣ್ಣುಮಕ್ಕಳು ಸೇರಿ ಈ ಸಮಸ್ಯೆಯನ್ನು ಹೂ ಬಿಡಿಸಿದಂತೆ ಬಗೆಹರಿಸಬಹುದು’ ಎಂದು ಕವಿ ಸುಬ್ಬು ಹೊಲೆಯಾರ್ ಪ್ರತಿಕ್ರಿಯಿಸಿದರು.

ಪ್ರಜಾಪ್ರಭುತ್ವದ ನಾಶ: ‘ನಮ್ಮ ಸಾಮಾಜಿಕ ತತ್ವಜ್ಞಾನದ ಮೂಲ ಸಿದ್ಧಾಂತಗಳಾದ ಸ್ವಾತಂತ್ರ್ಯ, ಸಮಾನತೆ, ಭಾತೃತ್ವ ಭಾವನ್ನು ಧರ್ಮ ನಾಶ ಮಾಡುತ್ತಿದೆ. ದೇವಾಲಯ ಮತ್ತು ಸಾರ್ವಜನಿಕ ಸ್ಥಳಗಳಿಗೆ  ದಲಿತರಿಗೆ ಪ್ರವೇಶ ನೀಡುವುದರಿಂದ  ಅಸ್ಪೃಶ್ಯತೆ ನಾಶವಾಗಲಿದೆ. ಅಸ್ಪೃಶ್ಯತೆ ನಾಶದಿಂದಲೇ ಸಮಾನತೆ ಸಾಧ್ಯ. ಆಧುನಿಕತೆಯ ಬಿರುಗಾಳಿ ಮೇಲು ನೋಟಕ್ಕೆ ಸಮಾನತೆ ತರುತ್ತದೆ.

ಆಂತರ್ಯದಲ್ಲಿ ಸಾಂಪ್ರದಾಯಿಕತೆಯನ್ನು ಒಳಗೊಂಡೇ ಪ್ರವಹಿಸುತ್ತದೆ ಎಂಬುದಕ್ಕೆ ಜ್ವಲಂತ ನಿದರ್ಶನ ಸಿಗರನಹಳ್ಳಿಯ ಘಟನೆ. ಸಮುದಾಯ ಭವನಗಳು ಪ್ರಜಾಪ್ರಭುತ್ವದ ಆಶಯ ಪ್ರತಿನಿಧಿಸುವ ಕೇಂದ್ರಗಳು. ಅಲ್ಲಿ ದಲಿತರಿಗೆ ಪ್ರವೇಶ ನಿಷೇಧಿಸುವುದೆಂದರೆ ಪ್ರಜಾಪ್ರಭುತ್ವದ ನಾಶ ಎಂದೇ ಅರ್ಥ’ ಎಂದು ಕವಿ ಅನಸೂಯ ಕಾಂಬ್ಳೆ  ಹೇಳಿದರು.

ದಲಿತರಿಗೆ ಅಧಿಕಾರ ಬೇಕು: ‘ಸಾರ್ವಜನಿಕ ಕೆರೆಯ ನೀರನ್ನು  ಮುಟ್ಟುವುದು ಮತ್ತು ದೇವಸ್ಥಾನಕ್ಕೆ ಪ್ರವೇಶ ಮಾಡುವ ಮೂಲಕ  ಅಸ್ಪೃಶ್ಯತೆಯನ್ನು ಹೋಗಲಾಡಿಸುವ ಸಾಂಕೇತಿಕ ಪ್ರಯತ್ನವನ್ನು ಅಂಬೇಡ್ಕರ್‌ ಮಾಡಿದರು. ಆದರೆ, ಆ ಮೂಲಕ  ಸಂಸತ್ತಿನ ಪ್ರವೇಶ ಅವರ ಮುಖ್ಯ ಗುರಿಯಾಗಿತ್ತು   ಹಾಗೆಯೇ, ಸಿಗರನಹಳ್ಳಿಯಲ್ಲಿ ದಲಿತರಿಗೆ ದೇವಾಲಯ ಪ್ರವೇಶ ನೀಡುವುದು ಕನಿಷ್ಠ ಮಾನವ ಘನತೆಯನ್ನು ಎತ್ತಿ ಹಿಡಿಯುತ್ತದೆ.

ಆದರೆ, ಅಧಿಕಾರ ಹಿಡಿಯುವುದು ದಲಿತರ ಮುಖ್ಯ ಕಾಳಜಿಯಾಗಬೇಕು. ಎಲ್ಲ ಎಡಪಂಥೀಯ ಸಂಘಟನೆಗಳು, ಜನಪತ್ರಿನಿಧಿಗಳು, ಕಾನೂನು ತಜ್ಞರು ಸೇರಿ ದಲಿತರಿಗೆ  ದೇವಾಲಯ ಸೇರಿ ಎಲ್ಲ ಸಾರ್ವಜನಿಕ ಸ್ಥಳಗಳಿಗೆ ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡಬೇಕು’ ಎಂದು ಲೇಖಕ ವಡ್ಡಗೆರೆ ನಾಗರಾಜಯ್ಯ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.