ADVERTISEMENT

ಅಸ್ಮಿತೆ ಉಳಿಸಿಕೊಳ್ಳುವುದೇ ಮಹಿಳೆಯರ ಸವಾಲು

ಶಬ್ದಚಿತ್ರಗಳ ಮೆರವಣಿಗೆಯಲ್ಲಿ ವೈದೇಹಿ ಸಂವಾದ

​ಪ್ರಜಾವಾಣಿ ವಾರ್ತೆ
Published 26 ಜನವರಿ 2013, 19:59 IST
Last Updated 26 ಜನವರಿ 2013, 19:59 IST
ಅಸ್ಮಿತೆ ಉಳಿಸಿಕೊಳ್ಳುವುದೇ ಮಹಿಳೆಯರ ಸವಾಲು
ಅಸ್ಮಿತೆ ಉಳಿಸಿಕೊಳ್ಳುವುದೇ ಮಹಿಳೆಯರ ಸವಾಲು   

ಧಾರವಾಡ:  `ಹೆಂಗಸರ ಸಹನೆಯಿಂದಲೇ ಈ ಜಗತ್ತು ಹೀಗಿದೆ. ಆಯಾ ಕಾಲಕ್ಕೆ ತಕ್ಕಂತೆ ಮಹಿಳೆ ತನ್ನ ಅಸ್ಮಿತೆ ಉಳಿಸಿಕೊಂಡು ಹೋಗುತ್ತಿದ್ದರೂ ಈ ದಿನಗಳಲ್ಲಿ ನಮ್ಮ ಅಸ್ಮಿತೆ ಉಳಿಸಿಕೊಳ್ಳುವುದು ಹೇಗೆ ಎನ್ನುವುದೇ ಮಹಿಳೆಯರ ಮುಂದಿರುವ ಪ್ರಶ್ನೆಯಾಗಿದೆ' ಎಂದು ಲೇಖಕಿ ವೈದೇಹಿ ಇಲ್ಲಿ ಹೇಳಿದರು.

ಸಾಹಿತ್ಯ ಸಂಭ್ರಮದ ಎರಡನೆಯ ದಿನ ನಡೆದ ಲೇಖಕರೊಂದಿಗೆ ಸಂವಾದದಲ್ಲಿ ಅವರು ಮಾತನಾಡಿದರು. `ನಮಗೆ ಅಸ್ಮಿತೆ ಇಲ್ಲದಿದ್ದರೆ ನಾವು ಇಷ್ಟು ದಿನ ಬದುಕಲಿಕ್ಕೆ ಆಗುತ್ತಿರಲಿಲ್ಲ. ನಾವು ಮಹಿಳೆಯರು ಇಷ್ಟು ದಿನ ಬದುಕಿದ್ದೇವೆ ಎನ್ನುವುದಕ್ಕೆ ನಮಗೆ ಅಸ್ಮಿತೆ ಇದೆ ಎನ್ನುವುದೇ ಸಾಕ್ಷಿ' ಎಂದರು.

ಸಂಭ್ರಮವೆಲ್ಲ ಸತ್ತು ಹೋಗಿತ್ತು...
`ಮುತ್ತಿಟ್ಟು ತುತ್ತಿಟ್ಟು ಹರಸಿ ಬೆಳೆಸಿದ ಮಕ್ಕಳು ಮುದುಡಿ ಹೋಗುವಾಗ ಸಂಕಟವಾಗುತ್ತದೆ, 2012 ಕುದಿಕಡಲ ಕಾಲ, 2013 ಬಂದು ಪಾಪದ ರಕ್ತವೆಲ್ಲ ತೊಳೆದು ಹೋದಂತೆ ಅನ್ನಿಸುತ್ತಿದೆ. ನನ್ನೊಳಗಿನ ಸಂಭ್ರಮವೆಲ್ಲ  ಸತ್ತುಹೋಗಿತ್ತು' ಎಂದು ಇತ್ತೀಚಿಗೆ ತಲ್ಲಣ ಮೂಡಿಸುವಂತೆ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರಗಳ ಬಗ್ಗೆ ನೋವಿನಿಂದ ನುಡಿದರು.
`ಆದರೆ ಇಲ್ಲಿನ ಸಾಹಿತ್ಯ ಸಂಭ್ರಮ ಮತ್ತೆ ಮನಸ್ಸನ್ನು ಅರಳಿಸಿದೆ. ಬದುಕಿಗೆ ಖುಷಿ ನೀಡಿದೆ' ಎಂದು ವೈದೇಹಿ ಸಂಭ್ರಮಿಸಿದರು.

`ನಮಗೆ ಮೀಸಲಾತಿ ನೀಡಬೇಕು ಎಂದು ಹೇಳಲು ಪುರುಷರು ಯಾರು. ಯಾವ ಕ್ವಾತಪ್ಪ ನಾಯ್ಕ' ಎಂದು ಕುಂದಾಪುರ ಕನ್ನಡದಲ್ಲಿಯೇ ಗಟ್ಟಿಯಾಗಿ ಕೇಳಿದ ಅವರು, `ನಾವು ಹೆಂಗಸರಾಗಿ, ಅವರು (ಪುರುಷರು) ಗಂಡಸರಾಗಿ ಹುಟ್ಟಿದ್ದಾರೆ ಅಷ್ಟೇ' ಎಂದು ಸಭಿಕರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇಡೀ ಸಂವಾದುದ್ದಕ್ಕೂ ಅತ್ಯಂತ ಉಲ್ಲಾಸ ಹಾಗೂ ಉತ್ಸಾಹದಿಂದ ತಮ್ಮ ಬಾಲ್ಯ, ಬದುಕು ಮತ್ತು ಬರಹಗಳನ್ನು ಶಬ್ದಚಿತ್ರಗಳ ಮೆರವಣಿಗೆಯಲ್ಲಿ  ಕಟ್ಟಿಕೊಟ್ಟು ಸಂವಾದವನ್ನು ಅನನ್ಯವಾಗಿಸಿದರು.

`ನಮಗೊಂದು ಅಪರೂಪದ ಬಾಲ್ಯವಿತ್ತು. ಅಂತಹ ಬಾಲ್ಯ ಎಷ್ಟು ಜನರಿಗೆ ಸಿಗುತ್ತದೆ. ಬಾಲ್ಯದ ಚಿತ್ರಗಳಿಂದಲೇ ನಾನು ಕಥೆಗಳನ್ನು ಬರೆದೆ. ಬದುಕಿನ ಒಂದು ಕ್ಷಣ ಲಯ ಬಿಟ್ಟು ಇಲ್ಲ, ಶಬ್ದ ಬಿಟ್ಟು ಬದುಕಿಲ್ಲ, ನಮ್ಮ ಮನೆಯ ಹಿತ್ತಲು, ಜಗುಲಿ, ಚಾವಡಿ, ಮನೆ ಮುಂದಿನ ರಸ್ತೆ, ಅಪ್ಪ, ಅಮ್ಮ, ಮನೆಗೆ ಬಂದು ಹೋಗುವವರು, ಮನೆ ಸುತ್ತಲ ಆಳು ಕಾಳುಗಳು, ಹಾದಿಯಲ್ಲಿ ಕಾಣುವ ಮಂಕಾದ, ಅರೆಹುಚ್ಚಾದ ಮಹಿಳೆಯರು... ಅರೆರೆ ಎಷ್ಟೊಂದು ಚಿತ್ರಗಳು... ಈ ಎಲ್ಲ ಚಿತ್ರಗಳಿಂದಲೇ ನಾನು  ಕಥೆ ಬರೆದೆ' ಎಂದು ವಿವರಿಸಿದರು.

`ಕಾಲೇಜಿಗೆ ಹೋದರೆ ಹೆಣ್ಣುಮಕ್ಕಳು ಹಾಳಾಗಿ ಹೋಗ್ತಾರೆ ಎನ್ನುವ ಕಾಲಘಟ್ಟದಲ್ಲಿ ಕಾಲೇಜಿಗೆ ಹೋದ ನಮ್ಮ ಕಾಲದ ವಾತಾವರಣ ಬೇರೆ, ಆಧುನಿಕ ಪ್ರಪಂಚದ ವಾತಾವರಣ ಬೇರೆ. ಆದಾಗ್ಯೂ ನಾವು ನಮ್ಮ ಅಸ್ಮಿತೆ ಉಳಿಸಿಕೊಳ್ಳುತ್ತ ಸಾಗಿದ್ದೇವೆ' ಎಂದ ಅವರು, `ಹೃದಯವಂತ ಪತಿಯಿಂದಾಗಿ ತಮ್ಮಳಗನ್ನು ಕಾಪಾಡಿಕೊಂಡು ಅಕ್ಷರ ಲೋಕದಲ್ಲಿ ಪಯಣಿಸಲು ನೆರವಾಯಿತು' ಎಂದು ಹೇಳಿದರು.

ತಮ್ಮ  ಪ್ರಸಿದ್ಧ ಕತೆಗಳಾದ `ಅಕ್ಕು', `ಗುಲಾಬಿ ಟಾಕೀಸು' ಹಾಗೂ `ಕ್ರೌಂಚ ಪಕ್ಷಿಗಳು' ಕಥೆಗಳು ಹುಟ್ಟಿಕೊಂಡಿದ್ದನ್ನು ಸಭಿಕರೊಬ್ಬರ ಪ್ರಶ್ನೆಯ ಹಿನ್ನೆಲೆಯಲ್ಲಿ ಉತ್ತರಿಸಿದ ಅವರು, `ನೂರಾರು ಎಳೆಗಳು ಸೇರಿಕೊಂಡು ಕಥೆಯಾಗುತ್ತದೆ. ಬರೆಯುತ್ತ ಬರೆಯುತ್ತ ಹೋದಂತೆ ಕಥೆ ರೂಪುಗೊಳ್ಳುತ್ತದೆ' ಎಂದರು.

`ನೋಡಬಾರದು ಚೀಲದೊಳಗನು' ಎನ್ನುವ ತಮ್ಮ ಕವನವನ್ನು ಅವರು ವಾಚಿಸುವ ಮೂಲಕ ಸಂವಾದಕ್ಕೆ ತೆರೆ ಎಳೆದರು.
ವಿಮರ್ಶಕಿ ಎಂ.ಎಸ್.ಆಶಾದೇವಿ ಸಂವಾದದ ನಿರ್ದೇಶಕಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT