ADVERTISEMENT

ಆಂಧ್ರ ಗಡಿ ಜಿಲ್ಲೆಗಳಲ್ಲಿ ಮಕ್ಕಳ ಕಳ್ಳರ ಗಾಳಿಸುದ್ದಿಗೆ ಬೆಚ್ಚಿದ ಜನರು

ಭಿಕ್ಷಕರು, ಮಾನಸಿಕ ಅಸ್ವಸ್ಥರು, ಅಲೆಮಾರಿಗಳಿಗೆ ಧರ್ಮದೇಟು

​ಪ್ರಜಾವಾಣಿ ವಾರ್ತೆ
Published 20 ಮೇ 2018, 8:23 IST
Last Updated 20 ಮೇ 2018, 8:23 IST
ಸೇಡಂ ತಾಲ್ಲೂಕಿನ ಮುದಗಲ್‌ನಲ್ಲಿ ಪೊಲೀಸರು ಮಕ್ಕಳ ಕಳ್ಳರ ವದಂತಿ ಕುರಿತು ಶನಿವಾರ ಜಾಗೃತಿ ಮೂಡಿಸಿದರು
ಸೇಡಂ ತಾಲ್ಲೂಕಿನ ಮುದಗಲ್‌ನಲ್ಲಿ ಪೊಲೀಸರು ಮಕ್ಕಳ ಕಳ್ಳರ ವದಂತಿ ಕುರಿತು ಶನಿವಾರ ಜಾಗೃತಿ ಮೂಡಿಸಿದರು   

ಬೆಂಗಳೂರು: ‘ಮಕ್ಕಳ ಕಳ್ಳರು ಬಂದಿದ್ದಾರೆ. ಮಕ್ಕಳನ್ನು ಕೊಂದು ಅಂಗಾಂಗ ಮಾರುತ್ತಾರೆ ಎಚ್ಚರಿಕೆ. ಮಕ್ಕಳನ್ನು ಹೊರಗೆ ಕಳಿಸಬೇಡಿ’ ಎಂಬ ಎಚ್ಚರಿಕೆಯ ಸಂದೇಶ ಹೊತ್ತ ವಿಡಿಯೊ ತುಣುಕುಗಳು ಮತ್ತು ಮೆಸೇಜ್‌ಗಳು ವಾಟ್ಸ್‌ಆ್ಯಪ್ ಮತ್ತು ಫೇಸ್‌ಬಕ್‌ ಮೆಸೆಂಜರ್‌ಗಳಲ್ಲಿ ಅವ್ಯಾಹತವಾಗಿ ಶೇರ್ ಆಗುತ್ತಿವೆ.

ವದಂತಿಗಳಿಂದ ಹೆದರಿರುವ ಆಂಧ್ರ ಗಡಿ ಜಿಲ್ಲೆಗಳ ಜನರು ಹಳ್ಳಿಗಳಲ್ಲಿ ಹಗಲುಹೊತ್ತಿನಲ್ಲಿಯೂ ಮಕ್ಕಳನ್ನು ಹೊರಗೆ ಆಡಲು ಕಳಿಸುತ್ತಿಲ್ಲ. ಕೆಲ ಹಳ್ಳಿಗಳಲ್ಲಿ ಗುಂಪುಕಟ್ಟಿಕೊಂಡು ಹಗಲಿರುಳು ಊರು ಕಾಯುತ್ತಿದ್ದಾರೆ. ಅನುಮಾನ ಬಂದವರನ್ನು ಮರಗಳಿಗೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಹೊಡೆದು ಪೊಲೀಸರಿಗೆ ಒಪ್ಪಿಸುತ್ತಿದ್ದಾರೆ.

‘ಇದು ಕೇವಲ ವದಂತಿ. ಮಕ್ಕಳ ಕಳ್ಳರ ಹಾವಳಿ ರಾಜ್ಯದಲ್ಲಿ ಇಲ್ಲ’ ಎಂದು ಪೊಲೀಸರು ಜನರಲ್ಲಿ ಜಾಗೃತಿ ಮೂಡಿಸಲು ಮಾಡುತ್ತಿರುವ ಪ್ರಯತ್ನ ವ್ಯರ್ಥವಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಕೇವಲ ಅನುಮಾನದ ಮೇಲೆಯೇ ಹತ್ತಾರು ಜೀವಹಾನಿಯಾಗುವ ಸಾಧ್ಯತೆ ಇದೆ ಎಂಬ ಭೀತಿ ವ್ಯಕ್ತವಾಗಿದೆ. ಆಂಧ್ರ ಗಡಿ ಜಿಲ್ಲೆಗಳಲ್ಲಿ ಗಾಳಿಸುದ್ದಿಗೆ ಬೆಚ್ಚಿದ ಜನರು ಅಮಾಯಕರ ಮೇಲೆ ಹಲ್ಲೆ ನಡೆಸಿದ ಅನೇಕ ಘಟನೆಗಳು ವರದಿಯಾಗಿವೆ.

ADVERTISEMENT

ಪಾವಗಡದಲ್ಲಿ ಆತಂಕ

ಪಾವಗಡ ತಾಲ್ಲೂಕಿನಾದ್ಯಂತ ಮಕ್ಕಳನ್ನು ಅಪಹರಿಸುವ ವದಂತಿ ದಿನದಿಂದ ದಿನಕ್ಕೆ ವಿವಿಧ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಭಿಕ್ಷಾಟನೆ ನಡೆಸುವವರು, ಮಾನಸಿಕ ಅಸ್ವಸ್ಥರು, ಬೇರೆಡೆಯಿಂದ ಕೂಲಿಗೆ ಬಂದಿರುವ ಅಪರಿಚಿತರನ್ನು ಕಂಡ ಕೂಡಲೇ ಜನರು ಇವರೇ ಮಕ್ಕಳನ್ನು ಅಪಹರಿಸವ ತಂಡದವರು ಎಂದು ಹಿಡಿದು ಥಳಿಸುತ್ತಿದ್ದಾರೆ. ‘ಆಂಧ್ರಪ್ರದೇಶದಿಂದ ಮಕ್ಕಳ ಕಳ್ಳರು ಬರುತ್ತಾರೆ. ರಾತ್ರಿ ಮಕ್ಕಳನ್ನು ಹೊತ್ತೊಯ್ಯುತ್ತಾರೆ ಎಂದು ಇತ್ತೀಚೆಗೆ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಹರಡಲಾಗಿತ್ತು. ಇದುವೇ ಈ ಭೀತಿಗೆ ಕಾರಣವಾಗಿದೆ.

ರಾತ್ರಿಯಿಡೀ ನಿದ್ದೆ ಮಾಡದೆ ಮಹಡಿ ಏರಿ ಕುಳಿತ ಜನ: ಮಕ್ಕಳನ್ನು ಅಪಹರಿಸುವ ತಂಡ ಬಂದಿದೆ ಎಂಬ ವದಂತಿಯಿಂದ ತಾಲ್ಲೂಕಿನ ಕೆಲ ಗ್ರಾಮಗಳ ಜನ ರಾತ್ರಿಯಿಡೀ ನಿದ್ದೆ ಮಾಡದೆ ಮನೆ ಮಹಡಿ ಏರಿ ಕುಳಿತುಕೊಂಡಿದ್ದರು.

‘ಮಕ್ಕಳನ್ನು ಅಪಹರಿಸಿ ಕಿಡ್ನಿ ಮತ್ತಿತರ ಅಂಗಾಗಗಳನ್ನು ಕದಿಯುತ್ತಾರೆ’ ಎಂಬ ವಾಟ್ಸ್‌ಆಪ್‌, ಫೇಸ್‌ಬುಕ್‌ನ ಸಂದೇಶ ತಾಲ್ಲೂಕಿನ ದೊಡ್ಡಹಳ್ಳಿ, ಪೊನ್ನಸಮುದ್ರ, ಪಳವಳ್ಳಿ, ಕೆ.ಸೇವಾಲಾಲ್ ಪುರ, ಇಂದ್ರಬೆಟ್ಟ, ಕೆಂಚಗಾನಹಳ್ಳಿ, ಕಡಮಲಕುಂಟೆ ಸೇರಿದಂತೆ ತಾಲ್ಲೂಕಿನ ಸಾಕಷ್ಟು ಗ್ರಾಮಗಳ ಜನರಲ್ಲಿ ಭೀತಿ ಸೃಷ್ಟಿಸಿದೆ.

ಸುರಪುರ: ಮಕ್ಕಳ ಕಳ್ಳನೆಂದು ಭಾವಿಸಿ ಹಲ್ಲೆ

ಸುರಪುರ ತಾಲ್ಲೂಕಿನಲ್ಲಿ ಮಕ್ಕಳ ಕಳ್ಳತನದ ವದಂತಿ ಹಬ್ಬಿದೆ. ಗ್ರಾಮೀಣ ಭಾಗದಲ್ಲಿ ಸಂಶಯಾಸ್ಪದ ವ್ಯಕ್ತಿಗಳನ್ನು ಅನುಮಾನದಿಂದ ನೋಡುವ ಹಾಗೂ ಹಲ್ಲೆ ಮಾಡುವ ಪ್ರಕರಣಗಳು ವರದಿಯಾಗುತ್ತಿವೆ.

ನಗರಸಭೆ ವ್ಯಾಪ್ತಿಯ ವಣಕಿಹಾಳದಲ್ಲಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಹಸನಾಪುರದಲ್ಲಿ ವಾಸವಿರುವ ಆಂಧ್ರ ಪ್ರದೇಶ ಮೂಲದ ಸತೀಶ ದಂಡೇಲಾ (40) ಶುಕ್ರವಾರ ರಾತ್ರಿ ಮದ್ಯ ಸೇವನೆ ಮಾಡಿ ಹಸನಾಪುರ ಪೆಟ್ರೋಲ್ ಪಂಪ್ ಬಳಿಯ ವಣಕಿಹಾಳದ ಸಮೀಪದ ಅಂಬೇಡ್ಕರ ಶಾಲೆಯ ಬಳಿ ಮಲಗಿದ್ದರು. ಅವರನ್ನು ಮಕ್ಕಳ ಕಳ್ಳನೆಂದು ಭಾವಿಸಿದ ಸುತ್ತ ಮುತ್ತಲಿನ ಜನ ಚೆನ್ನಾಗಿ ಥಳಿಸಿದ್ದಾರೆ. ಇದರಿಂದ ಅವರ ತಲೆ, ಕೈಗೆ ಗಾಯಗಳಾಗಿವೆ.

ಗಂಗಾವತಿಯಲ್ಲಿ ವ್ಯಕ್ತಿ ಮೇಲೆ ಹಲ್ಲೆ

ಗಂಗಾವತಿ ತಾಲ್ಲೂಕಿನ ಬಸವಪಟ್ಟಣ ಗ್ರಾಮದಲ್ಲಿ ಶುಕ್ರವಾರ ಮಕ್ಕಳ ಕಳ್ಳ ಎಂದು ಸಂಶಯಿಸಿ ವೃದ್ಧರೊಬ್ಬರನ್ನು ಪೂರ್ವಪರ ವಿಚಾರಿಸದೆ ಜನ ಥಳಿಸಿದ್ದಾರೆ. ಗಾಯಗೊಂಡಿರುವ ವ್ಯಕ್ತಿಯನ್ನು ಪೊಲೀಸರು ನಗರಸ ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ತಾಂಡಾದಲ್ಲೂ ಹಬ್ಬಿದ ವದಂತಿ

ಕೂಡ್ಲಿಗಿ ತಾಲ್ಲೂಕಿನ ಬಂಡೇಬಸಾಪುರ ತಾಂಡಾದಲ್ಲಿ ಮಕ್ಕಳ ಅಪಹರಣಕಾರರು ಬಂದಿದ್ದಾರೆ ಎಂದು ಸುದ್ದಿ ಹರಡಿದ್ದು, ಪಟ್ಟಣ ಹಾಗೂ ಅಕ್ಕಪಕ್ಕದ ಗ್ರಾಮಗಳಲ್ಲಿ ಆತಂಕ ಸೃಷ್ಟಿಯಾಗಿದೆ. ‘ಕೂಡ್ಲಿಗಿಯಿಂದ 5 ಕಿ.ಮೀ ದೂರದಲ್ಲಿರುವ ಬಂಡೇಬಸಾಪುರ ತಾಂಡಾದಲ್ಲಿ ನಾಲ್ಕೈದು ಜನ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಜೀಪಿನಲ್ಲಿ ಬಂದಿದ್ದರು. ಅವರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಯುವಕನೊಬ್ಬ ಆರೋಪಿಸಿದ್ದಾನೆ.

ರಾಯಚೂರಿನಲ್ಲಿ ಆಯುಧಗಳೊಂದಿಗೆ ಗಸ್ತು ತಿರುಗಿದ ಜನರು!

ಮಕ್ಕಳನ್ನು ಅಪಹರಿಸುವ ತಂಡವೊಂದು ನಗರಕ್ಕೆ ಬಂದಿದೆ ಎನ್ನುವ ವದಂತಿ ಹರಡಿದ್ದರಿಂದ ರಾತ್ರಿಯಿಡೀ ಜನರು ಕೋಲು ಹಾಗೂ ಇತರೆ ಆಯುಧಗಳನ್ನು ಹಿಡಿದುಕೊಂಡು ಬಡಾವಣೆಗಳಲ್ಲಿ ಗಸ್ತು ತಿರುಗಿದ ಘಟನೆ ಇತ್ತೀಚೆಗೆ ನಡೆದಿದೆ.

ಅಲ್ಲದೆ, ಜನರು ಸದರ್‌ ಬಜಾರ್‌ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಮಕ್ಕಳನ್ನು ಅಪಹರಣ ಮಾಡುವ ತಂಡವೊಂದು ನಗರದೊಳಗೆ ನುಗ್ಗಿದ್ದು, ಅವರನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಿಎಸ್‌ಐ ಅವರನ್ನು ತಳ್ಳಾಡಿದ ಪ್ರಸಂಗವೂ ನಡೆದಿದೆ. ಸಣ್ಣ ಪ್ರಮಾಣದಲ್ಲಿ ಕಲ್ಲು ತೂರಾಟ ನಡೆದಿದ್ದು, ಕೆಲವು ಪೊಲೀಸರಿಗೆ ಗಾಯಗಳಾಗಿವೆ.

ಕಲಬುರ್ಗಿಯಲ್ಲಿ ಮಕ್ಕಳ ಕಳ್ಳರ ವದಂತಿ: ಇಬ್ಬರಿಗೆ ಥಳಿತ

ಸೇಡಂ ತಾಲ್ಲೂಕಿನ ಕೋಡ್ಲಾ, ಮದಕಲ್, ಕುರಕುಂಟಾ, ಸೇಡಂ ಸೇರಿದಂತೆ ಅನೇಕ ಕಡೆಗಳಲ್ಲಿ ಮಕ್ಕಳನ್ನು ಅಪಹರಿಸಿಕೊಂಡು ಹೋಗುವ ತಂಡ ಬಂದಿದೆ ಎಂಬ ವದಂತಿ ಹರಿದಾಡುತ್ತಿದೆ. ಕೋಡ್ಲಾ ಮತ್ತು ಸೇಡಂನಲ್ಲಿ ಇಬ್ಬರು ವ್ಯಕ್ತಿಗಳನ್ನು ಜನರೇ ಹಿಡಿದು ಥಳಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಈ  ಕುರಿತು ಪೊಲೀಸ್ ಇಲಾಖೆ ಧೃಡಿಪಡಿಸಿಲ್ಲ. ಇಬ್ಬರು ವ್ಯಕ್ತಿಗಳನ್ನು ಪರಿಶೀಲಿಸಿದರೆ ಶ್ರೀ ಸಿಮೆಂಟ್ ಕಂಪನಿಯಲ್ಲಿ ಕೆಲಸ ಮಾಡಲು ಬಂದ ವ್ಯಕ್ತಿಗಳಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ತಾಲ್ಲೂಕಿನ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.