ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ಬೆಳಕಿಗೆ ಬಂದ ‘ದಾಸ ಸಾಹಿತ್ಯ ಭಾಷೆ’ (ಡಾ.ಎಸ್.ಎಸ್.ಅಂಗಡಿ) ಕೃತಿ ಚೌರ್ಯ ಪ್ರಕರಣದ ಬೆನ್ನಲ್ಲೇ ಇಂತಹ ಆರು ಹಳೆಯ ಪ್ರಕರಣಗಳಿಗೆ ಮತ್ತೆ ಜೀವ ಬಂದಿದೆ.
ವಿಶ್ವವಿದ್ಯಾಲಯದಲ್ಲಿ ನಡೆದಿವೆ ಎನ್ನಲಾದ ಎರಡು ಪಿಎಚ್.ಡಿ ಪ್ರಬಂಧ ಹಾಗೂ ನಾಲ್ಕು ಕೃತಿಗಳು ಸೇರಿ ಒಟ್ಟು ಆರು ಪ್ರಮುಖ ಕೃತಿ ಚೌರ್ಯ ಪ್ರಕರಣಗಳನ್ನು ತನಿಖೆಗೆ ಒಳಪಡಿಸಲು ನಿರ್ಧರಿಸಲಾಗಿದೆ. ಪ್ರಭಾರ ಕುಲಪತಿ ಡಾ.ಹನುಮಣ್ಣ ನಾಯಕ ದೊರೆ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ಪ್ರಕರಣಗಳ ಕುರಿತು ತನಿಖೆ ನಡೆಸಲು ಉಪ ಸಮಿತಿ ರಚಿಸಲಾಗಿದೆ.
ಕುಲಸಚಿವ ಪ್ರೊ. ವಿಜಯ್ ಪೂಣಚ್ಚ ತಂಬಂಡ ಸಮಿತಿ ನೇತೃತ್ವ ವಹಿಸಲಿದ್ದು, ಸಿಂಡಿಕೇಟ್ ಸದಸ್ಯರಾದ ಸಾಧನಾ ತಂತ್ರಿ, ಡೀನ್ ಡಾ.ಕೆ.ಎಂ.ಮೇತ್ರಿ ಮತ್ತು ಡಾ.ಮೋಹನ್ ಕುಂಟಾರ್ ಸದಸ್ಯರಾಗಿದ್ದಾರೆ.
ಆರು ಪ್ರಕರಣಗಳ ವಿವರ: ಕನ್ನಡ ವಿ.ವಿ.ಯಲ್ಲಿ ಸಹಾಯಕ ಕುಲಸಚಿವರಾಗಿದ್ದ ಹಾಗೂ ಸದ್ಯ ಹಾವೇರಿಯ ಗೊಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿರುವ ಡಾ. ಕೆ. ಪ್ರೇಮಕುಮಾರ್ ಅವರ ‘ಶೇಕ್ಸ್‌ಪೀಯರ್‌ನ ದುರಂತ ನಾಟಕಗಳ ಕನ್ನಡ ಅನುವಾದಗಳು’ ಪಿಎಚ್.ಡಿ ಪ್ರಬಂಧ ಕೃತಿಚೌರ್ಯವಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದೇ ವಿ.ವಿ ಸಹ ಪ್ರಾಧ್ಯಾಪಕರಾದ ಡಾ.ಚಿನ್ನಸ್ವಾಮಿ ಸೋಸಲೆ ಪತ್ನಿ ಡಾ.ನಾಗವೇಣಿ ಸೋಸಲೆ ಪಿಎಚ್.ಡಿಗಾಗಿ ಸಲ್ಲಿಸಿದ್ದ ‘ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮತಾಂತರ ಪ್ರಕ್ರಿಯೆ’ ಪ್ರಬಂಧದಲ್ಲಿ ಡಾ.ಉದ್ದಂಡಯ್ಯ ಅವರ ಪಿಎಚ್.ಡಿ ಪ್ರಬಂಧದ ಬಹುತೇಕ ಭಾಗವನ್ನೆ ಯಥಾವತ್ತಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪವಿದೆ. ಸಹ ಪ್ರಾಧ್ಯಾಪಕ ಡಾ.ಚಿನ್ನಸ್ವಾಮಿ ಸೋಸಲೆ ‘ಚರಿತ್ರೆ ವಿಶ್ವಕೋಶ’ ಕೃತಿಯಲ್ಲಿನ ‘ರೋಮನ್ ಸಾಮ್ರಾಜ್ಯ’ದ ಭಾಗಕ್ಕೆ ಕೆ.ಪದ್ಮಾವತಮ್ಮ ಅವರ ‘ಪ್ರಪಂಚದ ನಾಗರಿಕತೆಗಳ ಸಂಕ್ಷಿಪ್ತ ಇತಿಹಾಸ’ ಕೃತಿಯಿಂದ ನಕಲು ಮಾಡಿದ ಆರೋಪವಿದೆ.
ಅಧ್ಯಯನಾಂಗ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಚ್.ಡಿ.ಪ್ರಶಾಂತ್ ತಮ್ಮ ‘ಶಾಲಾ ಶಿಕ್ಷಣ’ ಲೇಖನದಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ.ಟಿ.ಆರ್.ಚಂದ್ರಶೇಖರ್ ಅವರ ‘ಕರ್ನಾಟಕದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣ’ ಮಂಟಪ ಮಾಲೆ ಲೇಖನವನ್ನು ಬಳಸಿಕೊಂಡಿದ್ದಾರೆ. ಪ್ರಾಧ್ಯಾಪಕ ಡಾ. ವಿಠ್ಠಲರಾವ್ ಗಾಯಕವಾಡ ಅವರ ‘ಆಡಳಿತ ಕನ್ನಡ’ ಕೃತಿಯಲ್ಲಿ ಪ್ರಧಾನ್ ಗುರುದತ್ತ ಅವರ ಬರಹಗಳಿಂದ ನಕಲು ಮಾಡಿದ್ದರೆ, ಇನ್ನೊಬ್ಬ ಸಹ ಪ್ರಾಧ್ಯಾಪಕ ಡಾ.ಎಲ್.ಶ್ರೀನಿವಾಸ್ ‘ಹಂಪಿ ಪರಿಸರದ ಆದಿಮಾನವನ ಸಾಂಸ್ಕೃತಿಕ ನೆಲೆಗಳು’ ಬರಹಕ್ಕೆ ಡಾ.ಶರಣಬಸಪ್ಪ ಕೋಲ್ಕಾರ ಅವರ ‘ಕೊಪ್ಪಳ ಮತ್ತು ಹಂಪಿ ಪ್ರದೇಶದ ಆದಿ ಮಾನವನ ನೆಲೆಗಳು’ ಪಿಎಚ್.ಡಿ ಪ್ರಬಂಧವನ್ನು ಪರವಾನಗಿ ಇಲ್ಲದೆ ಹಾಗೂ ಆಕರ ಲೇಖನದ ಹೆಸರು ನಮೂದಿಸದೇ ನಕಲು ಮಾಡಿದ್ದಾರೆ ಎಂಬ ಆರೋಪವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.