ADVERTISEMENT

ಇಂಗ್ಲಿಷ್‌ಗೆ ಭಾರತದ ಪುರಾತನ ಸಾಹಿತ್ಯ ತರ್ಜುಮೆ

ಮೂರ್ತಿ ಕ್ಲಾಸಿಕಲ್‌ ಲೈಬ್ರರಿ ಆಫ್‌ ಇಂಡಿಯಾ ಸಂಸ್ಥೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2015, 19:30 IST
Last Updated 21 ಜನವರಿ 2015, 19:30 IST

ಬೆಂಗಳೂರು: ‘ಸಂಸ್ಕೃತ, ಪಾಲಿ, ಕನ್ನಡ ಸೇರಿದಂತೆ ದೇಶಿ ಭಾಷೆಗಳಲ್ಲಿರುವ ಪುರಾತನ ಸಾಹಿತ್ಯ ಜಾಗತಿಕ ಓದುಗರನ್ನು ತಲುಪಿಲ್ಲ, ಅವು ಈಗೀಗ ಭಾರತೀಯ ಓದುಗರಿಗೂ ಲಭ್ಯವಾಗುತ್ತಿಲ್ಲ’ ಎಂದು ಸಾಹಿತ್ಯ ಪ್ರೇಮಿಗಳು ಇನ್ನು ಮುಂದೆ ಬೇಸರ ವ್ಯಕ್ತಪಡಿಸಬೇಕಿಲ್ಲ!

ಇನ್ಫೊಸಿಸ್‌ ಸಂಸ್ಥಾಪಕ ಎನ್.ಆರ್. ನಾರಾ­ಯಣ ಮೂರ್ತಿ ಅವರ ಮಗ ರೋಹನ್ ಮೂರ್ತಿ ಅವರು ಭಾರತದ ಶಾಸ್ತ್ರೀಯ ಗ್ರಂಥ­ಗಳ ಪ್ರಕಟಣೆಗಾಗಿಯೇ ‘ಮೂರ್ತಿ ಕ್ಲಾಸಿಕಲ್‌ ಲೈಬ್ರರಿ ಆಫ್‌ ಇಂಡಿಯಾ (ಎಂಸಿಎಲ್‌ಐ)’ ಸಂಸ್ಥೆ ಸ್ಥಾಪಿಸಿದ್ದಾರೆ. ಐದು ಗ್ರಂಥಗಳನ್ನು ಲೋಕಾ­ರ್ಪಣೆ ಮಾಡುವ ಮೂಲಕ ಬುಧವಾರ ಈ ಸಂಸ್ಥೆಗೆ ವಿಧ್ಯುಕ್ತವಾಗಿ ಚಾಲನೆಯನ್ನು ನೀಡ­ಲಾಗಿದೆ. ಹಾರ್ವರ್ಡ್‌ ಯುನಿವರ್ಸಿಟಿ ಪ್ರೆಸ್‌ ಈ ಗ್ರಂಥಗಳನ್ನು ಮುದ್ರಿಸಿದೆ.

ಹಿಂದಿ, ಕನ್ನಡ, ಮರಾಠಿ, ಪಾಲಿ, ಪಂಜಾಬಿ, ಪರ್ಷಿಯನ್, ಸಂಸ್ಕೃತ, ಸಿಂಧಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿರುವ ಸಾರ್ವಕಾಲಿಕ ಶ್ರೇಷ್ಠ ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದಿಸುವ ಗುರಿಯನ್ನು ಎಂಸಿಎಲ್‌ಐ ಹೊಂದಿದೆ. ಪುಸ್ತಕ ತೆರೆದಾಗ ಎಡಭಾಗದ ಪುಟದಲ್ಲಿ ಮೂಲ ಭಾಷೆಯ ಸಾಲುಗಳು ಇರಲಿವೆ. ಬಲಭಾಗದ ಪುಟದಲ್ಲಿ ಇಂಗ್ಲಿಷ್‌ ಅನುವಾದ ಇರುತ್ತದೆ. ಏಕಕಾಲಕ್ಕೆ ಎರಡೂ ಭಾಷೆಗಳಲ್ಲಿ ಓದುವ ಅವಕಾಶ ಎಂಸಿಎಲ್‌ಐ ಕೃತಿಗಳ ವೈಶಿಷ್ಟ್ಯವಾಗಿದೆ.

ಭಾರತೀಯ ಭಾಷೆಗಳು, ಪದ್ಧತಿಗಳಲ್ಲಿ ತಜ್ಞರಾದವರನ್ನೇ ಆರಿಸಿ ಅನುವಾದ ಮಾಡಿಸ­ಲಾಗುತ್ತದೆ. ಪುಸ್ತಕಗಳನ್ನು ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ ವೆಬ್‌ಸೈಟ್‌ಗಳ ಮೂಲಕ ಖರೀದಿ­ಸಲು ಅವಕಾಶ ಕಲ್ಪಿಸಲಾಗಿದೆ.

‘ಭಾರತೀಯ ಸಾಹಿತ್ಯದ ಬಹುಪಾಲು ಕೃತಿಗಳು ಅನೇಕ ಭಾಷೆಗಳಲ್ಲಿವೆ. ಅದರಲ್ಲೂ ಸಂಸ್ಕೃತ, ಪರ್ಷಿಯನ್ ಮತ್ತು ದ್ರಾವಿಡ ಭಾಷೆ­ಗಳಲ್ಲಿ ಈ ಸಾಹಿತ್ಯ ಹೆಚ್ಚಾಗಿ ದೊರೆಯುತ್ತದೆ. ಇಷ್ಟೇ ಅಲ್ಲ, ಅಸ್ಸಾಮಿ, ಉರ್ದು, ಮಲಯಾಳಂ, ತೆಲುಗು ಭಾಷೆಗಳಲ್ಲಿ ಕೂಡ ಶ್ರೇಷ್ಠ ಕೃತಿಗಳಿವೆ. ಇವೆಲ್ಲ ಒಟ್ಟಾಗಿ ಭಾರತೀಯ ಸಾಹಿತ್ಯ ರೂಪುಗೊಂಡಿದೆ. ಆ ಎಲ್ಲ ಅಮೂಲ್ಯ ಕೃತಿಗಳನ್ನು ಹೊಸ ಕಾಲದ ಓದುಗರಿಗೆ ತಲುಪಿಸುವ ಉದ್ದೇಶ ನಮ್ಮದಾಗಿದೆ’ ಎಂದು ಎಂಸಿಎಲ್‌ಐ ಪ್ರಧಾನ ಸಂಪಾದಕ ಶೆಲ್ಡನ್ ಪೊಲ್ಲಾಕ್‌ ವಿವರಿಸಿದರು.

ಪ್ರಿನ್ಸ್‌ಟನ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮಂಜುಲ್‌ ಭಾರ್ಗವ, ‘ಭಾರತದ ಸಾಹಿತ್ಯ ಪರಂಪರೆ ದೊಡ್ಡದಾಗಿದ್ದರೂ ಲ್ಯಾಟಿನ್‌ ಹಾಗೂ ಗ್ರೀಕ್‌ ಭಾಷೆಯ ಶಾಸ್ತ್ರೀಯ ಗ್ರಂಥಗಳಂತೆ ನಮ್ಮ ಭಾಷೆಗಳ ಶಾಸ್ತ್ರೀಯ ಕೃತಿಗಳು ಜಗತ್ತಿನ ಯಾವ ಪ್ರಮುಖ ವಿಶ್ವವಿದ್ಯಾಲಯಗಳ ಗ್ರಂಥಾಲಯ­ಗಳಲ್ಲೂ ಸಿಗುತ್ತಿಲ್ಲ. ಆ ಕೊರತೆ ಈದೀಗ ನೀಗುತ್ತಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.
ವಿವರಗಳಿಗೆ: www.murtylibrary.com

ಅನುವಾದವಾಗುತ್ತಿವೆ ಕನ್ನಡದ ಮಹಾಕಾವ್ಯಗಳು
ಕನ್ನಡದ ಹರಿಶ್ಚಂದ್ರ ಕಾವ್ಯ (ರಾಘವಾಂಕ) ಹಾಗೂ ಕುಮಾರವ್ಯಾಸ ಭಾರತ ಕೃತಿಗಳನ್ನು ಎಂಸಿಎಲ್‌ಐನಿಂದ ಅನುವಾದ ಮಾಡ­ಲಾಗು­ತ್ತಿದ್ದು, ಇನ್ನೆರಡು ವರ್ಷಗಳಲ್ಲಿ ಜಾಗತಿಕ ಓದುಗರ ಕೈಸೇರಲಿವೆ. ಕನ್ನಡದ ಇನ್ನೂ ಹಲವು ಕೃತಿಗಳನ್ನು ಅನುವಾದ ಮಾಡಲು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಶೆಲ್ಡನ್‌ ಪೊಲ್ಲಾಕ್‌ ಹೇಳಿದರು.

ಬಿಡುಗಡೆಯಾದ ಕೃತಿಗಳು
‘ಬುಲೇಷಾ: ಸೂಫಿ ಲಿರಿಕ್ಸ್‌’, ‘ಅಬುಲ್‌ ಫಜಲ್‌: ದಿ ಹಿಸ್ಟರಿ ಆಫ್‌ ಅಕ್ಬರ್‌–1’, ‘ಥೇರಿಗಥಾ: ಪೋಯಮ್ಸ್‌ ಆಫ್‌ ಫಸ್ಟ್‌ ಬುದ್ಧಿಸ್ಟ್‌ ವುಮೆನ್‌’, ‘ಅಲ್ಲಸಾನಿ ಪೆದ್ದಣ: ದಿ ಸ್ಟೋರಿ ಆಫ್‌ ಮನು’ ಹಾಗೂ ‘ಸೂರದಾಸ್‌: ಸೂರ್‌್ಸ ಓಸಿಯನ್‌’ ಕೃತಿಗಳನ್ನು ಬುಧವಾರ ಬಿಡುಗಡೆ ಮಾಡಲಾಯಿತು.

ಜೈಪುರ ಹಬ್ಬದಲ್ಲಿ ಚರ್ಚೆ: ಜೈಪುರ ಸಾಹಿತ್ಯ ಹಬ್ಬದಲ್ಲಿ ಶುಕ್ರವಾರ ನಡೆಯುವ ಒಂದು ಗೋಷ್ಠಿಯಲ್ಲಿ ಎಂಸಿಎಲ್‌ಐ ಕುರಿತು ಸಂವಾದ ಇದೆ. ಇದರಲ್ಲಿ ರೋಹನ್ ಪಾಲ್ಗೊಳ್ಳ­ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT