ಬೆಳಗಾವಿ: ದೇಶದಲ್ಲಿ ಬ್ರಿಟಿಷರ ಆಡಳಿತದ ಅವಧಿಯಲ್ಲಿ ಇಂಗ್ಲೆಂಡ್ ರಾಣಿಯು ದೇಶಿ ಸಂಸ್ಥಾನಗಳ ಅರಸರು, ಸಂಸ್ಥಾನಿಕರು, ಪ್ರಾಂತ್ಯ ಪ್ರತಿನಿಧಿಗಳಿಗೆ 1911ರಲ್ಲಿ ಅಚ್ಚ ಕನ್ನಡದಲ್ಲಿ ಕಳುಹಿಸಿದ್ದ ಆಹ್ವಾನ ಪತ್ರ ಮತ್ತು ‘ಆಭಾರ ಮನ್ನಣೆ’ ಪ್ರಕಟಣಾ ಪತ್ರವು ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ಕಣಬರ್ಗಿಯಲ್ಲಿ ಪತ್ತೆಯಾಗಿವೆ.
ಸ್ವಾತಂತ್ರ್ಯ ಪೂರ್ವದಲ್ಲೇ ಬೆಳಗಾವಿಯಲ್ಲಿ ಕನ್ನಡ ಭಾಷೆ ಬಳಕೆಯಲ್ಲಿತ್ತು ಎನ್ನುವುದನ್ನು ಇವು ಪುಷ್ಟೀಕರಿಸುತ್ತವೆ. ರಾಜ್ಯ ವಕೀಲರ ಸಾಹಿತ್ಯ ಪರಿಷತ್ ಕಲಬರ್ಗಿಯಲ್ಲಿ ದಾಖಲೆ ಸಂಗ್ರಹ ಅಭಿಯಾನವನ್ನು ಹಮ್ಮಿಕೊಂಡಿದ್ದಾಗ ಪಾಟೀಲ ಬೀದಿಯ ನಿವಾಸಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಭೀಮಗೌಡ ಪಾಟೀಲ ಅವರ ಮನೆಯಲ್ಲಿ ಈ ಮಹತ್ವದ ದಾಖಲೆಗಳು ದೊರೆತಿವೆ.
ಇಂಗ್ಲೆಂಡ್‌ನ ರಾಣಿಯ ಪುತ್ರ ಪ್ರಿನ್ಸ್ ಆಫ್ ವೇಲ್ಸ್ ಅವರನ್ನು ‘ಮಲಿಕ್ ಮುಅಝಮ್ ಕೈಸರೇ ಹಿಂದ್’ (ಭಾರತದ ಆಡಳಿತಾಧಿಕಾರಿ) ಆಗಿ ನೇಮಿಸಿದ ಬಳಿಕ 1911ರ ಜೂನ್ 22ರಂದು ರಾಜ್ಯಾಭಿಷೇಕ ಮಹೋತ್ಸವವನ್ನು ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭದಲ್ಲಿ ಗವರ್ನರ್, ಲೆಫ್ಟಿನೆಂಟ್ ಗವರ್ನರ್, ಮತ್ತು ಅಮಲ್ದಾರರು ಮತ್ತು ದೇಶಿ ಸಂಸ್ಥಾನಗಳ ಅರಸರು, ಸಂಸ್ಥಾನಿಕರು ಮತ್ತು ಸರದಾರರು ಹಾಗೂ ಹಿಂದಿ ಸಾಮ್ರಾಜ್ಯದೊಳಗಿನ ಎಲ್ಲ ಪ್ರಾಂತಗಳ ಪ್ರತಿನಿಧಿಗಳು ಪಾಲ್ಗೊಳ್ಳಬೇಕು ಎಂದು ರಾಣಿಯು 1911ರ ಮಾರ್ಚ್ 22ರಂದು ಆಹ್ವಾನ ಪತ್ರದ ಪ್ರಕಟಣೆ ಹೊರಡಿಸಿದ್ದರು. ಮಹೋತ್ಸವ ನಡೆದ ಬಳಿಕ 1911ರ ಡಿ. 12ರಂದು ರಾಣಿಯು ‘ಆಭಾರ ಮನ್ನಣೆ’ ಪತ್ರವನ್ನು ಹೊರಡಿಸಿದ್ದರು.
ಆಹ್ವಾನ ಪತ್ರವನ್ನು ಖಾಕಿ ಕಾಗದದ ಮೇಲೆ ಅಕ್ಷರಗಳನ್ನು ಕಂದು ಬಣ್ಣದಲ್ಲಿ ಕನ್ನಡ ಭಾಷೆಯಲ್ಲಿ ಮುದ್ರಿಸಲಾಗಿತ್ತು. ಈ ಪತ್ರವು 1.5 ಅಡಿ ಅಗಲ ಹಾಗೂ 2.5 ಅಡಿ ಉದ್ದ ಇದೆ. ‘ಆಭಾರ ಮನ್ನಣೆ’ ಪತ್ರವನ್ನು ಖಾಕಿ ಕಾಗದದ ಮೇಲೆ ಅಕ್ಷರಗಳನ್ನು ಕೆಂಪು ಬಣ್ಣದಲ್ಲಿ ಮುದ್ರಿಸಲಾಗಿತ್ತು. ಈ ಪತ್ರವು 10 ಇಂಚು ಅಗಲ ಹಾಗೂ 16 ಇಂಚು ಉದ್ದ ಇದೆ. ಎರಡೂ ಪತ್ರಗಳ ಮೇಲಿನ ಭಾಗದಲ್ಲಿ ಬ್ರಿಟಿಷ್ ರಾಷ್ಟ್ರ ಮುದ್ರೆ ಇತ್ತು. ಈ ಪತ್ರವನ್ನು ಬಾಂಬೆಯ (ಮುಂಬೈ) ಸರ್ಕಾರಿ ಕೇಂದ್ರ ಮುದ್ರಣಾಲಯದಲ್ಲಿ ಮುದ್ರಿಸಲಾಗಿದೆ ಎಂದು ಕೆಳಗಡೆ ಇಂಗ್ಲಿಷ್‌ನಲ್ಲಿ ಮುದ್ರಿಸಲಾಗಿದೆ. ಜೊತೆಗೆ ಈ ಪತ್ರವನ್ನು ಕನ್ನಡಕ್ಕೆ ಅನುವಾದ ಮಾಡಿರುವವರ ಹೆಸರನ್ನೂ ನಮೂದಿಸಲಾಗಿದೆ.
ಶಿವನಗೌಡರ ತಂದೆ ಭೀಮಗೌಡ ಸಿದ್ಧಗೌಡ ಪಾಟೀಲ ಅವರು ಪೊಲೀಸ್ ಪಾಟೀಲರಾಗಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಆ ಸಂದರ್ಭದಲ್ಲಿ ಇವರಿಗೆ ರಾಜ್ಯಾರೋಹಣ ಮಹೋತ್ಸವದ ಆಹ್ವಾನ ಪತ್ರವು ಕಣಬರ್ಗಿಯ ವಿಳಾಸಕ್ಕೆ ಬಂದಿತ್ತು. ಬಳಿಕ ಅವರು ದೆಹಲಿಗೆ ಹೋಗಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ನಂತರ ‘ಆಭಾರ ಮನ್ನಣೆ’ ಪತ್ರವನ್ನೂ ಇವರಿಗೆ ಕಳುಹಿಸಲಾಗಿತ್ತು.
ಈ ಮಹತ್ವದ ದಾಖಲೆಗಳನ್ನು ಭೀಮಗೌಡ ಸಿದ್ಧಗೌಡ ಪಾಟೀಲರ ಮಕ್ಕಳಾದ ಶಿವನಗೌಡ ಪಾಟೀಲ ಹಾಗೂ ಬಾಳಗೌಡ ಪಾಟೀಲ ಅವರು ರಾಜ್ಯ ವಕೀಲರ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ರವೀಂದ್ರ ತೋಟಿಗೇರ ಹಾಗೂ ಉಪಾಧ್ಯಕ್ಷ ಸುಧೀರ ನಿರ್ವಾಣಿ ಅವರಿಗೆ ನೀಡಿದ್ದಾರೆ.
‘ಜಾಗತಿಕ ಮಟ್ಟದಲ್ಲಿ ಗಮನಿಸಿದರೂ ಬೆಳಗಾವಿ ಕನ್ನಡದ ಭೂಪ್ರದೇಶವಾಗಿತ್ತು ಎಂಬುದು ಈ ಎರಡು ಪತ್ರಗಳ ಮೂಲಕ ತಿಳಿದು ಬರುತ್ತದೆ. ಬೆಳಗಾವಿ ತಾಲ್ಲೂಕಿನ ಕಣಬರ್ಗಿ ಗ್ರಾಮದ ಭೀಮಗೌಡ ಪಾಟೀಲರಿಗೆ ಇಂಗ್ಲೆಂಡ್ ರಾಣಿಯ ಪರವಾಗಿ ಅಚ್ಚ ಕನ್ನಡದಲ್ಲಿ ಕಳುಹಿಸಿರುವ ಈ ಎರಡು ಪತ್ರಗಳು, ಬೆಳಗಾವಿ ಅಪ್ಪಟ ಕನ್ನಡ ಪ್ರದೇಶವಾಗಿತ್ತು ಎಂಬುದನ್ನು ಸಾರಿ ಹೇಳುತ್ತಿವೆ’ ಎಂದು ರವೀಂದ್ರ ತೋಟಿಗೇರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕನ್ನಡ ಭಾಷೆಯಲ್ಲಿರುವ 1928ರ ‘ಆಸ್ತಿ ಖರೀದಿ ಪತ್ರ’, ಅರಣ್ಯ ಇಲಾಖೆಯಿಂದ 1929ರಲ್ಲಿ ಸೌದೆ ಕಡಿಯಲು ಪಡೆದಿರುವ ಪರವಾನಗಿ ಪತ್ರ, 1939 ರಲ್ಲಿ ಸರ್ವೆ ಮಾಡಿಸಲು ಹಣ ಪಾವತಿಸಿರುವ ರಸೀದಿ ಪತ್ರ ಹಾಗೂ 1940ರಲ್ಲಿ ನ್ಯಾಯಾಲಯಕ್ಕೆ ಶುಲ್ಕ ತುಂಬಿದ ರಸೀದಿ ಪತ್ರ ಶಿವನಗೌಡರ ಮನೆಯಲ್ಲಿ ಸಿಕ್ಕಿವೆ. ಈ ಎಲ್ಲ ದಾಖಲೆಗಳನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು. ಇದನ್ನು ಸಂಶೋಧನೆಗೆ ಬಳಸಿಕೊಳ್ಳಲಾಗುವುದು’ ಎಂದು ತೋಟಿಗೇರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.