ಬೆಂಗಳೂರು: ರಾಮಕಥಾ ಗಾಯಕಿ ಪ್ರೇಮಲತಾ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧ ಸಿಐಡಿ ಅಧಿಕಾರಿಗಳು ಶನಿವಾರ 680 ಪುಟಗಳ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ.
ಇದನ್ನು ಖಚಿತಪಡಿಸಿರುವ ಸಿಐಡಿ ಡಿಜಿಪಿ ಕಿಶೋರ್‌ಚಂದ್ರ, ‘ಶನಿವಾರ ಆರೋಪಪಟ್ಟಿ ಸಲ್ಲಿಸುವುದು ಬಹುತೇಕ ಖಚಿತ. ಒಂದು ವೇಳೆ ಕರ್ನಾಟಕ ಬಂದ್ ಕಾರಣದಿಂದ ನ್ಯಾಯಾಲಯದ ಕಲಾಪ ನಡೆಯದಿದ್ದರೆ ಸೋಮವಾರ ಸಲ್ಲಿಸುತ್ತೇವೆ’ ಎಂದರು.
ರಾಮಕಥಾ ನಡೆದ ರಾಜ್ಯದ 9 ಜಿಲ್ಲೆಗಳ ಸಾಕ್ಷ್ಯ ಸಂಗ್ರಹ’ ವೈದ್ಯಕೀಯ ತಪಾಸಣೆಯ ವಿವರವನ್ನು ಒಳಗೊಂಡ ಆರೋಪಪಟ್ಟಿಯನ್ನು ನಗರದ 52ನೇ ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆ ಇದೆ.
‘ಸ್ವಾಮೀಜಿ ಹಾಗೂ ಫಿರ್ಯಾದಿ ಹೇಳಿಕೆ, ಮೊಬೈಲ್ ಕರೆಗಳ ವಿವರಗಳು (ಸಿಡಿಆರ್), ಮಹಜರು ವೇಳೆ ದೊರೆತ ಸಾಕ್ಷ್ಯಗಳು, 48 ಸಾಕ್ಷಿಗಳ ಹೇಳಿಕೆಗಳು, ಎಫ್‌ಎಸ್‌ಎಲ್–ಡಿಎನ್‌ಎ ವರದಿಗಳು, ಏಕಾಂತ ಸೇವೆಯ ಬಗ್ಗೆ ಏಳು ಮಂದಿಯ ವಿಚಾರಣೆ ಸೇರಿದಂತೆ ತನಿಖಾ ಕಾಲದಲ್ಲಿ ದೊರೆತ ಎಲ್ಲ ಸಾಕ್ಷ್ಯಗಳನ್ನು ಆರೋಪ ಪಟ್ಟಿಯಲ್ಲಿ ಸೇರಿಸಲಾಗಿದೆ’ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.
ಡಿಎನ್‌ಎ ಪ್ರಮುಖ: ‘ಫಿರ್ಯಾದಿಯ ಆರು ಒಳ ಉಡುಪುಗಳನ್ನು ಹೈದರಾಬಾದ್‌ನಲ್ಲಿರುವ ಕೇಂದ್ರ ವಿಧಿ ವಿಜ್ಞಾನ ಪ್ರಯೋಗಾಯಲಕ್ಕೆ ಕಳುಹಿಸಲಾಗಿತ್ತು. ಅವುಗಳ ಮೇಲೆ ಪುರುಷನ ವೀರ್ಯ ಇರುವುದನ್ನು ಅಲ್ಲಿನ ತಜ್ಞರು ಖಚಿತಪಡಿಸಿದರು. ನಂತರ ಅದು ರಾಘವೇಶ್ವರ ಸ್ವಾಮೀಜಿ ಅವರ ವೀರ್ಯ ಎಂಬುದನ್ನು ಡಿಎನ್‌ಎ ಪರೀಕ್ಷೆ ದೃಢಪಡಿಸಿತು. ಈ ಪ್ರಕ್ರಿಯೆಯ ಸಂಪೂರ್ಣ ವಿವರಗಳು ಚಾರ್ಜ್‌ಶೀಟ್‌ನಲ್ಲಿವೆ’ ಎಂದರು.
‘ದೆಹಲಿ, ಹೃಷಿಕೇಶ ಸೇರಿ ಹೊರ ರಾಜ್ಯಗಳಿಗೂ ಕರೆದೊಯ್ದು ಸ್ವಾಮೀಜಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದರೆಂದು ಫಿರ್ಯಾದಿ ದೂರಿದ್ದರು. ಯಾವ್ಯಾವ ದಿನ ತಮ್ಮ ಮೇಲೆ ಅತ್ಯಾಚಾರ ನಡೆದಿದೆ ಎಂದು ಅವರು ಆರೋಪಿಸಿರೋ, ಆ ದಿನ ಸ್ವಾಮೀಜಿ ಮತ್ತು ಫಿರ್ಯಾದಿಯ ಮೊಬೈಲ್‌ಗಳು ಒಂದೇ ಟವರ್‌ನಿಂದ ಸಂಪರ್ಕ ಪಡೆದಿವೆ’ ಎಂದು ತಿಳಿಸಿದರು.
‘ಸ್ವಾಮೀಜಿ ಹಾಗೂ ಅವರ ಬೆಂಬಲಿಗರು ತಮಗೆ ಕರೆ ಮಾಡಿ ಬೆದರಿಕೆ ಹಾಕಿರುವುದಾಗಿ ಪ್ರೇಮಲತಾ ಆ ಕರೆಗಳ ಸಂಭಾಷಣೆಯ ಮುದ್ರಿಕೆಯನ್ನು ಕೊಟ್ಟಿದ್ದರು. ಆ ಧ್ವನಿ ಸ್ವಾಮೀಜಿ ಹಾಗೂ ಅವರ ಬೆಂಬಲಿಗರದ್ದು ಎಂಬುದೂ ದೃಢಪಟ್ಟಿದೆ’ ಎಂದರು.
ಮಹಿಳಾ ಆಯೋಗ ಮನವಿ: ಬುಧವಾರ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿಯಾಗಿದ್ದ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರಮಂಗಲಂ, ‘ಸ್ವಾಮೀಜಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಸರ್ಕಾರ ಆಸಕ್ತಿ ತೋರುತ್ತಿಲ್ಲ. ತಾವು ಮಧ್ಯಪ್ರವೇಶಿಸಿ ಸಂತ್ರಸ್ತೆಗೆ ನ್ಯಾಯ ಕೊಡಿಸಬೇಕು’ ಎಂದು ಮನವಿ ಮಾಡಿದ್ದರು. ಈ ಬೆನ್ನಲ್ಲೇ ಸಿಐಡಿ ಆರೋಪಪಟ್ಟಿ ಸಲ್ಲಿಕೆಗೆ ಮುಂದಾಗಿದೆ.
ಪ್ರೇಮಲತಾ 2014ರ ಆಗಸ್ಟ್‌ನಲ್ಲಿ ಸ್ವಾಮೀಜಿ ವಿರುದ್ಧ ಗಿರಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸೆ.11ರಂದು ಸ್ವಾಮೀಜಿ ಅವರನ್ನು ಬಂಧಿಸಿದ್ದ ಸಿಐಡಿ ತಂಡ, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿತ್ತು.
*
‘ರಾಜಕೀಯ ಷಡ್ಯಂತ್ರ’
ಬೆಂಗಳೂರು: ‘ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಗೆ ಮುಂದಾಗಿರುವ ಕ್ರಮದ ಹಿಂದೆ ರಾಜಕೀಯ ಷಡ್ಯಂತ್ರ ಇದೆ’ ಎಂದು ರಾಮಚಂದ್ರಾಪುರ ಮಠದ ಶಿಷ್ಯರು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಮಠದ ಶಿಷ್ಯ, ವಕೀಲ ಶಂಭು ಶರ್ಮಾ, ‘ಸ್ವಾಮೀಜಿ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿದ್ದರೂ ಚಾರ್ಜ್‌ಶೀಟ್ ಸಲ್ಲಿಸಲಾಗುತ್ತಿದೆ. ಸಿಐಡಿ ಪೊಲೀಸರ ಮೇಲೆ ಪ್ರಭಾವಿಗಳು ರಾಜಕೀಯ ಒತ್ತಡ ಹಾಕಿದ್ದೇ ಇದಕ್ಕೆ ಕಾರಣ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.