ADVERTISEMENT

ಇದೇ 19 ರಂದು ಗೋವಿಂದ ಪೈ ಸಾಂಸ್ಕೃತಿಕ ಕೇಂದ್ರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 19:30 IST
Last Updated 16 ಜನವರಿ 2017, 19:30 IST
ಇದೇ 19 ರಂದು ಗೋವಿಂದ ಪೈ ಸಾಂಸ್ಕೃತಿಕ ಕೇಂದ್ರ ಉದ್ಘಾಟನೆ
ಇದೇ 19 ರಂದು ಗೋವಿಂದ ಪೈ ಸಾಂಸ್ಕೃತಿಕ ಕೇಂದ್ರ ಉದ್ಘಾಟನೆ   

ಬೆಂಗಳೂರು: ಕಾಸರಗೋಡಿನ ಮಂಜೇಶ್ವರದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಾಂಸ್ಕೃತಿಕ ಕೇಂದ್ರ ‘ಗಿಳಿವಿಂಡು’ ಇದೇ 19 ರಂದು ಉದ್ಘಾಟನೆಯಾಗಲಿದೆ.
ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷ ಎಂ.ವೀರಪ್ಪ ಮೊಯಿಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.

ರಾಜ್ಯದ  ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರು ಗೋವಿಂದ ಪೈ ಸಾಂಸ್ಕೃತಿಕ ಕೇಂದ್ರ ಹಾಗೂ ಕೇರಳ  ಮುಖ್ಯಮಂತ್ರಿ ಪಿಣರಾಯಿ ವಿಜಯನ್‌  ಅವರು ‘ಭವನಿಕ ರಂಗಮಂದಿರ’ ಉದ್ಘಾಟಿಸುವರು ಎಂದು ಮೊಯಿಲಿ ತಿಳಿಸಿದರು.

‘ಇದೇ ಸಂದರ್ಭದಲ್ಲಿ ಎಂ.ಗೋವಿಂದ ಪೈ ಅವರ ಕಂಚಿನ ಪ್ರತಿಮೆ ಅನಾವರಣ ಹಾಗೂ ಗಿಳಿವಿಂಡು ಯಕ್ಷ ದೇಗುಲದ ಉದ್ಘಾಟನೆ ನಡೆಯಲಿದೆ. ಅಲ್ಲದೆ, ಯಕ್ಷಗಾನ, ಗಮಕ, ಗಾಯನ, ವಾಚನ, ವ್ಯಾಖ್ಯಾನ ನಡೆಯಲಿವೆ. ಸಂಶೋಧನಾ ಕ್ಷೇತ್ರದಲ್ಲಾದ ಬೆಳವಣಿಗೆ, ಅನುವಾದ ಕ್ಷೇತ್ರದಲ್ಲಾಗುತ್ತಿರುವ ಆವಿಷ್ಕಾರ ಕುರಿತು ಉಪನ್ಯಾಸ ಏರ್ಪಡಿಸಲಾಗಿದೆ’ ಎಂದರು.

‘ಗೋವಿಂದ ಪೈ ಅವರ ಸಾಹಿತ್ಯ ಕೃತಿಗಳು ಮತ್ತು ವಾಸ ಸ್ಥಳವನ್ನು ಸಂರಕ್ಷಿಸುವ ಸಲುವಾಗಿ ಗಿಳಿವಿಂಡು ಯೋಜನೆಯಡಿ ₹6.6 ಕೋಟಿ ವೆಚ್ಚದಲ್ಲಿ ನವೀಕರಿಸಲಾಗಿದೆ.   ಗೋವಿಂದ ಪೈ ಅವರ ಮನೆಯನ್ನು  ಯಕ್ಷಗಾನಕ್ಕೆ ಸಂಬಂಧಿಸಿದ ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ’ ಎಂದರು.

ಈ ಕೇಂದ್ರದಲ್ಲಿ ನಿರ್ಮಿಸಿರುವ ‘ಪಾರ್ಥಿಸುಬ್ಬು ವೇದಿಕೆ’  ಸುಸಜ್ಜಿತ ಹಸಿರು ಹಾಸಿನ ಕೊಠಡಿಗಳನ್ನು ಒಳಗೊಂಡಿದೆ. ಇದರಲ್ಲಿ ಧ್ವನಿಸಾಂದ್ರ ಕೊಠಡಿ, ಮ್ಯೂಸಿಯಂ ಹಾಗೂ ಕವಿಯ ಹಲವು ಪುಸ್ತಕಗಳನ್ನು ಇರಿಸಲಾಗಿದೆ. ಗ್ರಂಥಾಲಯ, ಅಧ್ಯಯನ ಕೊಠಡಿ, ಪತ್ರಾಗಾರ, ಸಂಶೋಧನಾ ವಿದ್ಯಾರ್ಥಿಗಳ ನಿವಾಸ, ಊಟದ ಮನೆಯೂ ಇದೆ ಎಂದು ಮೊಯಿಲಿ ಹೇಳಿದರು.
*
ಗಿಳಿವಿಂಡುವಿನಲ್ಲಿ ಏನೇನಿವೆ?
* ನಳಂದ– ವಸ್ತು ಪ್ರದರ್ಶನಾಲಯ
* ಭವನಿಕ– 800 ಆಸನವುಳ್ಳ ಸಭಾಂಗಣ
* ವೈಶಾಖ, ಸಾಕೇತ ಹಾಗೂ  ಆನಂದ ಅತಿಥಿ ಗೃಹಗಳು
* ಬೋಧಿರಂಗ– ಬಯಲು ರಂಗಮಂದಿರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.