ಬೆಂಗಳೂರು: ಅಸಂಖ್ಯ ವಿದ್ಯಾರ್ಥಿಗಳ ಪಾಲಿಗೆ ಪ್ರೀತಿಯ ‘ಮೇಷ್ಟ್ರು’ ಆಗಿದ್ದ ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಅವರ ಅಂತ್ಯಕ್ರಿಯೆ ಇಲ್ಲಿನ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾಗ್ರಾಮದ ಆವರಣದಲ್ಲಿ ಶನಿವಾರ ಸಕಲ ಸರ್ಕಾರಿ ಗೌರವದೊಂದಿಗೆ ವೈದಿಕ ವಿಧಿ ವಿಧಾನಗಳ ಪ್ರಕಾರ ನಡೆಯಿತು.
ಅನಂತಮೂರ್ತಿ ಅವರ ಪುತ್ರ ಶರತ್ ಅವರು ಚಿತೆಗೆ ಮಧ್ಯಾಹ್ನ 4.10ಕ್ಕೆ ಅಗ್ನಿಸ್ಪರ್ಶ ಮಾಡಿದರು. ಅನಂತಮೂರ್ತಿ ಅವರ ಪತ್ನಿ ಎಸ್ತರ್, ಸೊಸೆ ಜ್ಯೋತ್ಸ್ನಾ, ಪುತ್ರಿ ಅನುರಾಧಾ, ಅಳಿಯ ವಿವೇಕ ಶಾನಭಾಗ, ಅನಂತಮೂರ್ತಿ ಸಹೋದರರಾದ ಡಾ. ಅನಿಲ್ ಕುಮಾರ್ ಮತ್ತು ಗುರುರಾಜ್ ಸೇರಿದಂತೆ ಕುಟುಂಬದ ಸದಸ್ಯರು ಹಾಜರಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಟಿ.ಬಿ.ಜಯಚಂದ್ರ, ಡಾ.ಎಚ್.ಸಿ. ಮಹದೇವಪ್ಪ, ಅಂಬರೀಷ್, ಉಮಾಶ್ರೀ, ಯು.ಟಿ. ಖಾದರ್, ಸಾಹಿತಿಗಳು, ಒಡನಾಡಿಗಳು ಉಪಸ್ಥಿತರಿದ್ದರು. ಅನಂತಮೂರ್ತಿಯವರ ವಿದ್ಯಾರ್ಥಿಗಳು, ಓದುಗರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕಲಾಗ್ರಾಮಕ್ಕೆ ಬಂದಿದ್ದರು.
ಪುರೋಹಿತ ಸೂರ್ಯನಾರಾಯಣ ಶಾಸ್ತ್ರಿ ನೇತೃತ್ವದ ತಂಡ, ಅಂತ್ಯಸಂಸ್ಕಾರದ ವಿಧಿವಿಧಾನ ನಡೆಸಿಕೊಟ್ಟಿತು. ಅಂತ್ಯಕ್ರಿಯೆಯಲ್ಲಿ ವೈದಿಕರು ಲಯಬದ್ಧವಾಗಿ ಪಠಿಸುತ್ತಿದ್ದ ವೇದ ಮಂತ್ರಗಳು ಕಲಾಗ್ರಾಮದ ತುಂಬ ಧ್ವನಿಸಿದವು. ಆಗ ಕುಟುಂಬದ ಸದಸ್ಯರಷ್ಟೇ ಅಲ್ಲದೆ, ಅನಂತಮೂರ್ತಿ ಅವರ ಹತ್ತಿರದ ಒಡನಾಡಿಗಳು, ಓದಿನ ಮೂಲಕವೇ ಅನಂತಮೂರ್ತಿ ಯವರನ್ನು ಅರ್ಥ ಮಾಡಿಕೊಂಡವರ ಕಣ್ಣಲ್ಲೂ ನೀರಿನ ಪಸೆ ಒಸರಿತು.
ಪುರೋಹಿತರು ತಾರಕ ಸ್ವರದಲ್ಲಿ ‘ನಾರಾಯಣ ನಾರಾಯಣ ನಾರಾಯಣ’ ಎಂದಾಗ, ಅಲ್ಲಿ ಸೇರಿದ್ದವರ ಪೈಕಿ ನೂರಾರು ಮಂದಿಯ ಕೊರಳು ಉಬ್ಬಿ ಬಂದಿತ್ತು. ಚಿತೆಗೆ ಎರಡು ಟನ್ ಕಟ್ಟಿಗೆ, 50 ಕೆ.ಜಿ. ಶ್ರೀಗಂಧ, ತುಪ್ಪ, ಕರ್ಪೂರ ಬಳಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಮೌನವೇ ಮಾತು: ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಕಲಾಗ್ರಾಮಕ್ಕೆ ಬಂದಿದ್ದ ಯಾರಲ್ಲೂ ಮಾತು ಸರಿಯಾಗಿ ಹೊರಡುತ್ತಿರಲಿಲ್ಲ. ಎಲ್ಲರಲ್ಲೂ, ‘ಮೇಷ್ಟ್ರು’ ಲವಲವಿಕೆಯಿಂದ ಇದ್ದಾಗ ಆಡುತ್ತಿದ್ದ ಮಾತುಗಳದೇ ನೆನಪು. ಅನಂತಮೂರ್ತಿ ಅವರ ಒಡನಾಡಿಗಳ ಜೊತೆ ಮಾತನಾಡಲು ಮುಂದಾದರೆ ಬರುತ್ತಿದ್ದದ್ದು, ‘ಕ್ಷಮಿಸಿ, ಮಾತನಾಡುವ ಮನಸ್ಸು ಈಗಿಲ್ಲ’ ಎಂಬ ಉತ್ತರ.
‘ಕೆಲವೇ ದಿನಗಳ ಹಿಂದೆ ನೋಡಿಬಂದಿದ್ದೆ. ಮತ್ತೆ ಹೋಗಬೇಕು ಮೇಷ್ಟ್ರ ಬಳಿ ಅಂದುಕೊಂಡಿದ್ದೆ. ಇನ್ನೆಲ್ಲಿ ಮೇಷ್ಟ್ರು?’ ಎಂಬ ಪ್ರಶ್ನೆ ಅನೇಕರ ಮಾತುಗಳಲ್ಲಿ ಕೇಳಿಬರುತ್ತಿತ್ತು. ಆ ಮಾತು ಆಡುವ ವೇಳೆಗಾಗಲೇ ಅವರೆಲ್ಲರ ನೆಚ್ಚಿನ ಸಾಹಿತಿ, ‘ಅನಂತ’ದಲ್ಲಿ ಲೀನವಾಗಿ ಆಗಿತ್ತು.
ಹೆಗ್ಗೋಡಿನ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಅನಂತಮೂರ್ತಿ ಅವರ ಜೊತೆಗಿನ ಒಡನಾಟವನ್ನೂ ಕೆಲವರು ತಮ್ಮ ತಮ್ಮಲ್ಲಿ ನೆನಪು ಮಾಡಿಕೊಂಡರು.
ಅಮರರಾಗಲಿ: ಇದಕ್ಕೂ ಮುನ್ನ ಅನಂತಮೂರ್ತಿ ಅವರ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಿಂದ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ತೆರೆದ ವಾಹನದಲ್ಲಿ ಕಲಾಗ್ರಾಮಕ್ಕೆ ತರಲಾಯಿತು. ವಾಹನಕ್ಕೆ ಸಿಗ್ನಲ್ ಮುಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು. ‘ಅನಂತಮೂರ್ತಿ ಅಮರರಾಗಲಿ’ ಎಂದು ಅಭಿಮಾನಿಗಳು ಘೋಷಣೆ ಕೂಗಿದರು.
ಸಾರ್ವಜನಿಕ ದರ್ಶನ: ಕಲಾ ಚಟುವಟಿಕೆಗಳ ಕೇಂದ್ರ ಸ್ಥಾನವಾಗಿರುವ ರವೀಂದ್ರ ಕಲಾ ಕ್ಷೇತ್ರದ ಆವರಣಕ್ಕೆ ಶನಿವಾರ ಬೆಳಿಗ್ಗೆ ಅನಂತಮೂರ್ತಿ ಅವರ ಪಾರ್ಥಿವ ಶರೀರವಿದ್ದ ವಾಹನ ಬಂದಾಗ ಅಭಿಮಾನಿಗಳ ಗಂಟಲುಬ್ಬಿ ಬಂತು.
ಅನಂತಮೂರ್ತಿ ಅವರ ಆಪ್ತರು, ಕುಟುಂಬದ ಸ್ನೇಹಿತರು ಅವರೊಂದಿಗಿನ ಒಡನಾಟ ನೆನಪಿಸಿಕೊಂಡು ಭಾವುಕರಾದರು. ಕೆಲವರು ಪಾರ್ಥಿವ ಶರೀರ ಕಂಡು ನಿಸ್ತೇಜರಾದರು. ಕೆಲವು ಅಭಿಮಾನಿಗಳಂತೂ ಬಿಕ್ಕಿ ಬಿಕ್ಕಿ ಅತ್ತರು.
ಅನಂತಮೂರ್ತಿ ಅವರ ಡಾಲರ್ಸ್ ಕಾಲೋನಿಯ ನಿವಾಸ ‘ಸುರಗಿ’ಯಲ್ಲಿಯೂ ಶನಿವಾರ ಬೆಳಿಗ್ಗೆ ನೂರಾರು ಮಂದಿ ಅಂತಿಮ ನಮನ ಸಲ್ಲಿಸಿದರು.
ಬೆಳಿಗ್ಗೆ 10.30ಕ್ಕೆ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರಕ್ಕೆ ತರಲಾಯಿತು. ಕಲಾಕ್ಷೇತ್ರದ ಮುಖ್ಯ ದ್ವಾರದ ಮೂಲಕವೇ ಸರತಿ ಸಾಲಿನಲ್ಲಿ ಅವರ ಅಭಿಮಾನಿಗಳನ್ನು ಒಳಗೆ ಬಿಡಲಾಯಿತು. ಅಂತಿಮ ದರ್ಶನ ಪಡೆಯಲು ಬೆಳಿಗ್ಗೆಯಿಂದಲೇ ಮಾರುದ್ದದ ಸರತಿ ಸಾಲು ಕಂಡು ಬಂತು.
ಮಧ್ಯಾಹ್ನ 1.45ರ ವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಕಲಾಗ್ರಾಮಕ್ಕೆ ಕೊಂಡೊಯ್ಯುವ ಮುನ್ನ ಕುಟುಂಬ ಸದಸ್ಯರು ಮತ್ತೊಮ್ಮೆ ಪಾರ್ಥಿವ ಶರೀರದ ದರ್ಶನ ಪಡೆದರು. ಈ ವೇಳೆ ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಬಿಕ್ಕಿ ಬಿಕ್ಕಿ ಅತ್ತರು. ಪತ್ನಿ ಎಸ್ತರ್ ಅವರು ಪಾರ್ಥಿವ ಶರೀರವನ್ನು ಕೆಲ ಕ್ಷಣಗಳ ಕಾಲ ಎವೆಯಿಕ್ಕದೆ ನೋಡಿ ನೋವಿನಿಂದ ನೆಲಕ್ಕೆ ಒರಗಿದರು.
ಗೀತ ನಮನ: ಸಾರ್ವಜನಿಕ ದರ್ಶನದ ವೇಳೆ ಹಿರಿಯ ಗಾಯಕರಾದ ಶಿವಮೊಗ್ಗ ಸುಬ್ಬಣ್ಣ, ಶ್ರೀನಿವಾಸ ಉಡುಪ, ಮುದ್ದುಮೋಹನ್, ಕಿಕ್ಕೇರಿ ಕೃಷ್ಣಮೂರ್ತಿ ಸೇರಿದಂತೆ ನಾಡಿನ ಪ್ರಮುಖ ಗಾಯಕರು ಗೀತೆಗಳನ್ನು ಹಾಡಿ ನಮನ ಸಲ್ಲಿಸಿದರು.
ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಆರೋಗ್ಯ ಸಚಿವ ಯು.ಟಿ. ಖಾದರ್ ಆರಂಭದಿಂದ ಕೊನೆಯವರೆಗೂ ಹಾಜರಿದ್ದು ಉಸ್ತುವಾರಿಯನ್ನು ನೋಡಿಕೊಂಡರು.
ಸರ್ವಧರ್ಮ ಪ್ರಾರ್ಥನೆ
ರವೀಂದ್ರ ಕಲಾಕ್ಷೇತ್ರದಲ್ಲಿ ಕ್ರೈಸ್ತ, ಮುಸ್ಲಿಂ ಸೇರಿದಂತೆ ನಾನಾ ಧರ್ಮದ ಧರ್ಮಗುರುಗಳು ಪ್ರಾರ್ಥನೆ ಸಲ್ಲಿಸಿದರು. ‘ಅನಂತಮೂರ್ತಿ ಅವರು ಎಲ್ಲ ಧರ್ಮದವರನ್ನು ಪ್ರೀತಿಸುತ್ತಿದ್ದರು. ಹೀಗಾಗಿ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧಾರ್ಮಿಕ ಪ್ರಾರ್ಥನೆಗೆ ವ್ಯವಸ್ಥೆ ಮಾಡಲಾಗಿತ್ತು’ ಎಂದು ಕುಟುಂಬದ ಸದಸ್ಯರು ತಿಳಿಸಿದರು.
ಅಚಾತುರ್ಯ
ಅಗಲಿದ ಸಾಹಿತಿಯ ಗೌರವಾರ್ಥ ಪೊಲೀಸರು ಆಕಾಶದತ್ತ 3 ಸುತ್ತು ಗುಂಡು ಹಾರಿಸುವ ಸಂದರ್ಭದಲ್ಲಿ, ಪೊಲೀಸ್ ಸಿಬ್ಬಂದಿಯೊಬ್ಬರು ಬಂದೂಕಿಗೆ ಗುಂಡು ತುಂಬುತ್ತಿರುವಾಗಲೇ ಹಾರಿ ಅಚಾತುರ್ಯ ಸಂಭವಿಸಿತು. ಅದೃಷ್ಟವಶಾತ್ ಯಾರಿಗೂ ಅಪಾಯವಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.