ಉಡುಪಿ: ಉತ್ತರ ಭಾರತ ಪ್ರವಾಸದಲ್ಲಿದ್ದ ಕಾರಣ ರಂಜಾನ್ ಸಂದರ್ಭ ಇಫ್ತಾರ್ ಕೂಟ ಆಯೋಜಿಸಲು ಸಾಧ್ಯವಾಗಲಿಲ್ಲ. ಇಫ್ತಾರ್ ಬದಲಿಗೆ ಶೀಘ್ರ ಸ್ನೇಹಕೂಟ ಆಯೋಜಿಸುವುದಾಗಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಹಬ್ಬದ ಶುಭಾಶಯ ಹೇಳಲು ಮುಸ್ಲಿಮರು ಮಠಕ್ಕೆ ಭೇಟಿ ನೀಡಿದ್ದ ವೇಳೆ ಸ್ವಾಮೀಜಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.
ಪೂರ್ವನಿಗದಿ ಕಾರ್ಯಕ್ರಮಗಳು ಇದ್ದಿದ್ದರಿಂದ ಇಫ್ತಾರ್ ಕೂಟ ಏರ್ಪಡಿಸಲು ಸಾಧ್ಯವಾಗಲಿಲ್ಲ. ಮುಂದೆ ಯೋಗ್ಯ ಸಂದರ್ಭ ನೋಡಿ ಸ್ನೇಹಕೂಟ ಮಾಡಲಿದ್ದು, ಕ್ರೈಸ್ತರನ್ನು, ಮುಸಲ್ಮಾನರನ್ನು ಕರೆಯಲಾಗುವುದು ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು.
‘ಈ ಬಾರಿಯ ಇಫ್ತಾರ್ ಕೂಟಕ್ಕೆ ಯಾರ ವಿರೋಧವು ಇರಲಿಲ್ಲ. ಸಂಘದ ಪ್ರಮುಖರು ನಮ್ಮ ವಿರೋಧವಿಲ್ಲ ಎಂದು ಹೇಳಿದ್ದಾರೆ. ಆದರೆ, ಕಳೆದ ಬಾರಿ ಹಿಂದೂಗಳಲ್ಲೇ ಕೆಲವರು ನೀವು ಮಾಡಿದ್ದು ತಪ್ಪು ಎಂದು ಹೇಳಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಪರಮಗುರುಗಳು ಪರ್ಯಾಯ ಪೂರ್ವದಲ್ಲಿ ಹಾಜಿ ಅಬ್ದುಲ್ಲಾ ಅವರಿಂದ ಪಾದ ಪೂಜೆ ಸ್ವೀಕರಿಸಿದ್ದಾರೆ. ಮುಸ್ಲಿಮರನ್ನು ಕರೆಸಿ ಊಟ ಹಾಕಿದರೆ ಏನು ತಪ್ಪು ಎಂದು ಕೇಳಿದ್ದೆ’ ಎಂದು ಸ್ವಾಮೀಜಿ ನುಡಿದರು.
‘ಸ್ನೇಹಕೂಟ, ಮಾತುಕತೆ ಆಗಾಗ ನಡೆಯುತ್ತಿದ್ದರೆ ಮತ್ತಷ್ಟು ಸಮನ್ವಯ ಬೆಳೆಯಲು ಅನುಕೂಲ. ಇದರಲ್ಲಿ ಯಾವ ರಾಜಕೀಯ ಉದ್ದೇಶ ಇಲ್ಲ. ರಾಜಕಾರಣಿಗಳು ಮಾಡುವುದು ಮುಸ್ಲಿಮರ ತುಷ್ಟೀಕರಣಕ್ಕೆ ಹಾಗೂ ಮತಕ್ಕಾಗಿ. ನಮ್ಮದು ಸೌಹಾರ್ದದ ಉದ್ದೇಶ’ ಎಂದು ಪೇಜಾವರ ಶ್ರೀ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.