ವಿಜಯಪುರ: ಇಲ್ಲಿಯ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಎಸ್.ಎಲ್. ಚಂದ್ರಶೇಖರ್, ರಾಘವೇಂದ್ರ ಸೊಂಡೂರ ಅವರ ಸದಸ್ಯತ್ವ ರದ್ದುಗೊಳಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯ್ದೆ 2000ರ ಸೆಕ್ಷನ್ 39ರ ಅನ್ವಯ, ಈ ಇಬ್ಬರ ವಿರುದ್ಧ ಅನುಚಿತ ಮತ್ತು ಬೇಜವಾಬ್ದಾರಿ ವರ್ತನೆ ಸಾಬೀತಾಗಿರುವುದರಿಂದ, ಸಿಂಡಿಕೇಟ್ ಸದಸ್ಯತ್ವ ರದ್ದುಗೊಳಿಸಿ ಅಧಿಸೂಚನೆ ಹೊರಡಿಸುವಂತೆ ಮಹಿಳಾ ವಿ.ವಿ. ಕುಲಪತಿಗಳಿಗೆ ರಾಜಭವನ ನಿರ್ದೇಶನ ನೀಡಿದೆ. ರಾಜ್ಯಪಾಲರ ಆದೇಶದಂತೆ ಕುಲಸಚಿವರು ಸೋಮವಾರವೇ ಅಧಿಸೂಚನೆ ಹೊರಡಿಸಿದ್ದಾರೆ.
ವಿವರ: ಸಿಂಡಿಕೇಟ್ ಸದಸ್ಯರಾಗಿದ್ದ
ಎಸ್.ಎಲ್. ಚಂದ್ರಶೇಖರ್, ರಾಘವೇಂದ್ರ ಸೊಂಡೂರ ಅವರು ಕಳೆದ ಸೆಪ್ಟೆಂಬರ್ 19ರಂದು ಕಾಮಗಾರಿ ವೀಕ್ಷಿಸುವ ನೆಪದಲ್ಲಿ ಮಹಿಳಾ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು, ವಿ.ವಿ. ಅಧಿಕಾರಿಗಳ ಎದುರು ಕುಲಪತಿ, ಕುಲಸಚಿವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.
ಇದರ ಜತೆಗೆ ಮಹಿಳಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ವಿದ್ಯಾರ್ಥಿ ನಿಲಯದಲ್ಲಿ ಯಾವುದೇ ಕಾಮಗಾರಿ ನಡೆಯುತ್ತಿಲ್ಲದಿದ್ದರೂ ಕಾಮಗಾರಿ ವೀಕ್ಷಿಸುವ ನೆಪದಲ್ಲಿ ಅನುಮತಿ ಇಲ್ಲದೆ ಅಕ್ರಮ ಪ್ರವೇಶ ಮಾಡಿದ್ದಾರೆ. ಅಧಿಕಾರಿಯೊಬ್ಬರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಸದಸ್ಯರು ತಮ್ಮ ಭೇಟಿ ಸಂದರ್ಭದಲ್ಲಿ ಅನುಚಿತವಾಗಿ ಮತ್ತು ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ ಎಂಬ ದೂರುಗಳು ಬಂದಿದ್ದರಿಂದ ಈ ಇಬ್ಬರ ವಿರುದ್ಧ ಕುಲಪತಿ ಪ್ರೊ.ಮೀನಾ ಆರ್.ಚಂದಾವರಕರ ಅವರು ರಾಜ್ಯಪಾಲರು, ಉನ್ನತ ಶಿಕ್ಷಣ ಸಚಿವರು, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸೆ. 20 -ರಂದು ದೂರು ಸಲ್ಲಿಸಿದ್ದರು.
ತನಿಖಾಧಿಕಾರಿ ನೇಮಕ: ಕುಲಪತಿ ದೂರು ಆಧರಿಸಿ, ಆ ಇಬ್ಬರು ಸಿಂಡಿಕೇಟ್ ಸದಸ್ಯರ ವಿರುದ್ಧದ ಅನುಚಿತ ಮತ್ತು ಬೇಜವಾಬ್ದಾರಿ ವರ್ತನೆ ಕುರಿತು ತನಿಖೆ ನಡೆಸುವಂತೆ ರಾಜ್ಯಪಾಲರು ಅಕ್ಟೋಬರ್ 29 ರಂದು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಅಭಿವೃದ್ಧಿ ಆಯಕ್ತರಾಗಿರುವ ಜಿ.ಲತಾ ಕೃಷ್ಣರಾವ್ ಅವರನ್ನು ತನಿಖಾಧಿಕಾರಿಗಳನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದರು.
ತನಿಖಾಧಿಕಾರಿ ಜಿ.ಲತಾ ಕೃಷ್ಣರಾವ್ ಅವರು ನ. 11ರಂದು ಚಂದ್ರಶೇಖರ್, ಸೊಂಡೂರ ಸೇರಿದಂತೆ, ಕುಲಪತಿ, ಕುಲಸಚಿವರು, ನಿಲಯ ಪಾಲಕರು, ಪ್ರಸಾರಾಂಗದ ನಿರ್ದೇಶಕರು ಮತ್ತಿತರರನ್ನು ವಿಚಾರಣೆಗೆ ಒಳಪಡಿಸಿದ್ದರು. ನಂತರ ಜಿ.ಲತಾ ಕೃಷ್ಣರಾವ್ ಸಲ್ಲಿಸಿದ್ದ ತನಿಖಾ ವರದಿ ಆಧರಿಸಿ, ರಾಜ್ಯಪಾಲರು ಇಬ್ಬರೂ ಸದಸ್ಯರ ಸಿಂಡಿಕೇಟ್ ಸದಸ್ಯತ್ವ ರದ್ದುಪಡಿಸಿ ಡಿ. 1ರಂದು ಆದೇಶ ಹೊರಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.