ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಧ್ಯಕ್ಷ ಕೆ.ರಾಧಾಕೃಷ್ಣನ್ ಅವರು ಬುಧವಾರ (ಡಿ.31) ಸೇವೆಯಿಂದ ನಿವೃತ್ತರಾದರು. ಭೂವಿಜ್ಞಾನ ಸಚಿವಾಲಯದ ಕಾರ್ಯದರ್ಶಿಯಾದ ವಿಜ್ಞಾನಿ ಶೈಲೇಶ್ ನಾಯಕ್ ಅವರಿಗೆ ಒಂದು ತಿಂಗಳ ಮಟ್ಟಿಗೆ ಇಸ್ರೊ ಮುಖ್ಯಸ್ಥರ ಹೊಣೆ ವಹಿಸಲಾಗಿದೆ.
2009ರ ಅಕ್ಟೋಬರ್ 31ರಂದು ಇಸ್ರೊ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ರಾಧಾಕೃಷ್ಣನ್, ‘ಮಂಗಳಯಾನ’ ಮತ್ತು ಮಾನವ ಸಹಿತ ಗಗನನೌಕೆಯ ಸ್ವಯಂಪೂರ್ಣ ಘಟಕದ ಮಾದರಿ ‘ಜಿಎಸ್‌ಎಲ್‌ವಿಎಂಕೆ–3’ ಯೋಜನೆಗಳ ಯಶಸ್ವಿಯ ಶ್ರೇಯಕ್ಕೆ ಪಾತ್ರರು.
ಇಸ್ರೊದಲ್ಲಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿರುವ ರಾಧಾಕೃಷ್ಣನ್, ಕೇರಳ ವಿಶ್ವವಿದ್ಯಾಲಯದಲ್ಲಿ ಪದವಿ ಮತ್ತು ಖರಗ್‌ಪುರದ ಐಐಟಿಯಲ್ಲಿ ಪಿಎಚ್.ಡಿ ಪೂರೈಸಿದವರು. ವಿಜ್ಞಾನ ವಿಷಯದ ನಿಯತಕಾಲಿಕೆ ‘ನೇಚರ್’ 2014ರಲ್ಲಿ ರಾಧಾಕೃಷ್ಣನ್ ಅವರನ್ನು ವಿಶ್ವದ 10 ಹೆಸರಾಂತ ವಿಜ್ಞಾನಿಗಳ ಪಟ್ಟಿಯಲ್ಲಿ ಗುರುತಿಸಿದೆ.
ಬಾಹ್ಯಾಕಾಶ ವಿಜ್ಞಾನಿಯೂ ಆದ ರಾಧಾಕೃಷ್ಣನ್ ಅವರದ್ದು ಬಹುಮುಖ ಪ್ರತಿಭೆ. ಕಥಕಳಿ ನೃತ್ಯಪಟುವಾದ ಅವರು, ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡಿದ್ದಾರೆ. ರಾಧಾಕೃಷ್ಣನ್ ಅಧ್ಯಕ್ಷರಾಗಿದ್ದ ಅವಧಿಯಲ್ಲೇ (2010ರ ಡಿಸೆಂಬರ್) ಉಡಾವಣೆಯಾದ ಸಂವಹನ ಉದ್ದೇಶದ ಭೂಸ್ಥಾಯೀ ಉಪಗ್ರಹ (ಜಿಎಸ್ಎಟಿ5ಪಿ) ಹೊತ್ತ ಉಡಾವಣಾ ವಾಹನ ‘ಜಿಎಸ್‌ಎಲ್‌ವಿಎಫ್06’ ಆಗಸದಲ್ಲೇ ಸ್ಫೋಟಗೊಂಡಿತು. ಇದು ದೇಶದ ಬಾಹ್ಯಾಕಾಶ ಸಂಶೋಧನೆಯ ದೊಡ್ಡ ವೈಫಲ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.