ADVERTISEMENT

ಈಗಿನದೂ ಹಿಂದಿನ ಸರ್ಕಾರದಂತೆಯೇ!

ಪಾರದರ್ಶಕತೆ ಕಾಣುತ್ತಿಲ್ಲ: ಕಾಗೋಡು ಕೋಪ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2014, 19:30 IST
Last Updated 19 ಆಗಸ್ಟ್ 2014, 19:30 IST

ಬೆಂಗಳೂರು: ‘ರಾಜ್ಯದ ಹೊಸ ಸರ್ಕಾರದ ನಡವಳಿಕೆ ಜನರಿಗೆ ಎದ್ದು ಕಾಣುವಂತೆ ಇರಬೇಕಿತ್ತು. ಸರ್ಕಾರ­ದಲ್ಲಿ ಪಾರದರ್ಶಕತೆ ಇಲ್ಲ. ಹಿಂದಿನ ಸರ್ಕಾರಕ್ಕೂ ಈಗಿನ ಸರ್ಕಾರಕ್ಕೂ ಯಾವುದೇ ವ್ಯತ್ಯಾಸ ಇಲ್ಲ. ನನ್ನ ಅಭಿಪ್ರಾಯಗಳನ್ನು ಸರ್ಕಾರಕ್ಕೆ ತಿಳಿಸಿ­ದ್ದೇನೆ. ತಿದ್ದಿಕೊಳ್ಳುವುದು ಅಲ್ಲಿರು­ವವರಿಗೆ ಬಿಟ್ಟಿದ್ದು...’

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಮಂಗಳ­­ವಾರ ಹೀಗೆ ಅಸಮಾಧಾನ ಹೊರಹಾಕಿದವರು ವಿಧಾನಸಭೆ ಸ್ಪೀಕರ್‌ ಕಾಗೋಡು ತಿಮ್ಮಪ್ಪ ಅವರು. ‘ಸರ್ಕಾರ ತುಸು ನಿಧಾನವಾಗಿದೆ. ಜನರ ಅರ್ಜಿಗಳನ್ನು ದೀರ್ಘ ಕಾಲ ಕುರ್ಚಿಯ ಕೆಳಗೆ ಇಟ್ಟುಕೊಂಡು ಕೂರುವ ವ್ಯವಸ್ಥೆ ಬದಲಾಗಬೇಕು. ಆಡ­ಳಿ­ತದಲ್ಲಿ ಇರುವವರು ಜನಸಾ­ಮಾನ್ಯನ ಬೇಡಿಕೆಗೆ ಸ್ಪಂದಿಸಬೇಕು. ನಾವು ಸರ್ಕಾರಕ್ಕೆ ಪತ್ರ ಬರೆದರೆ ಪ್ರತಿ­ಕ್ರಿಯೆಯೇ ದೊರೆಯುವುದಿಲ್ಲ. ಈ ಎಲ್ಲ ವಿಚಾರಗಳ ಕುರಿತು ಹೇಳುವುದು ಸಾಕಷ್ಟಿದೆ. ಇದಕ್ಕೆಲ್ಲ ಅಧಿಕಾರಿಗಳೇ  ಕಾರಣ’ ಎಂದು ಅವರು ವಿಧಾನಸೌಧದಲ್ಲಿ ತಮ್ಮನ್ನು ಭೇಟಿ­ಯಾದ ಸುದ್ದಿಗಾರರಿಗೆ ಹೇಳಿದರು.

‘ಸರ್ಕಾರದ ಕೆಲಸ ನಿಧಾನಗತಿ­ಯಲ್ಲಿ ಸಾಗುತ್ತಿದೆ ಎಂದು ನಾನು ಆರು ತಿಂಗಳ ಹಿಂದೆಯೇ ಪತ್ರ ಬರೆ­ದಿದ್ದೆ. ಪತ್ರ ತಲುಪಿದೆ ಎಂಬ ಉತ್ತರ ಬಂದಿದೆ’ ಎಂದರು. ಮುಖ್ಯಮಂತ್ರಿಯಾಗಿ  ಸಿದ್ದ­ರಾ­ಮಯ್ಯ ವಿಫಲರಾಗಿದ್ದಾರೆಯೇ ಎಂಬ ಪ್ರಶ್ನೆಗೆ, ‘ಅದನ್ನು ಈಗಲೇ ಹೇಳ­ಲಾ­ಗದು. ಆದರೆ ಸಿದ್ದರಾಮಯ್ಯ ಅವರು ಇನ್ನಷ್ಟು ನಿಷ್ಠುರ ಆಗಬೇಕು ಎಂದರು.

ಕೆಪಿಎಸ್‌ಸಿ ವಿವಾದ: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಸಿದ್ಧಪಡಿಸಿದ್ದ 2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ಆಯ್ಕೆ ಪಟ್ಟಿಯನ್ನು ತಿರಸ್ಕರಿಸಿದ ಸರ್ಕಾ­ರದ ಕ್ರಮ ಸರಿಯಾಗಿದೆ. ಒಂದು ವ್ಯವಸ್ಥೆ ಹಾಳಾಗಲು ಅವ­ಕಾಶ ನೀಡಬಾರದು. ವ್ಯವಸ್ಥೆ ಸರಿಪಡಿ­ಸಲು ಕೆಲವರು ಅನಿವಾರ್ಯ­ವಾಗಿ ತ್ಯಾಗ ಮಾಡಬೇಕು. ಎತ್ತಿಗೆ ಒಮ್ಮೆ ಬರೆ ಹಾಕಬೇಕು ಎಂದು ಹೇಳಿದರು.

ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಚಿವರಾಗಿ ಅಧಿಕಾರ ಸ್ವೀಕರಿಸುವ ಬಯಕೆ ಇದೆಯೇ ಎಂಬ ಪ್ರಶ್ನೆಗೆ, ‘ಅಂಥ ಯಾವುದೇ ಬಯಕೆ ಇಲ್ಲ. ನಾನು ಯಾರಿಗೂ ಅದಕ್ಕಾಗಿ ನಮ­ಸ್ಕಾರ ಮಾಡಲಾರೆ’ ಎಂದರು.

ವಿದೇಶ ಪ್ರವಾಸ: ವಿಧಾನ ಮಂಡಲದ ವಿವಿಧ ಸಮಿತಿಗಳ ಸದಸ್ಯರನ್ನು ವಿದೇಶ ಪ್ರವಾಸಕ್ಕೆ ಕಳುಹಿಸುವ ಬದಲು ಶಾಸಕರನ್ನು ವಿಷಯವಾರು ಅಧ್ಯಯನಕ್ಕೆ ವಿದೇಶ ಪ್ರವಾಸಕ್ಕೆ ಕಳುಹಿಸುವ ಶಿಫಾರಸು ತಮ್ಮ ಮುಂದಿದೆ ಎಂದು ಕಾಗೋಡು ತಿಳಿಸಿದರು.

ವಿಳಂಬವೂ ಭ್ರಷ್ಟಾಚಾರಕ್ಕೆ ಸಮ
ಹಳೆ ಸರ್ಕಾರ ಮತ್ತು ಈಗಿನ ಸರ್ಕಾರದ ನಡುವೆ ಯಾವುದೇ ವ್ಯತ್ಯಾಸ ಇಲ್ಲ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ನಡೆಯುತ್ತಿಲ್ಲ ಎಂಬುದು ನನ್ನ ಅನಿಸಿಕೆ. ಭ್ರಷ್ಟಾಚಾರಕ್ಕೆ ಹಲವು ಮುಖಗಳಿವೆ. ಕೆಲಸಗಳ ಅನುಷ್ಠಾನದಲ್ಲಿ ವಿಳಂಬ ಧೋರಣೆ ಅನುಸರಿಸು­ವುದೂ ಒಂದು ಬಗೆಯ ಭ್ರಷ್ಟಾಚಾರ.

– ಕಾಗೋಡು ತಿಮ್ಮಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT