ADVERTISEMENT

ಉಡುಪಿಯ ನಿತೀಶ್‌ 8ನೇ ರ‍್ಯಾಂಕ್‌

ಯುಪಿಎಸ್‌ಸಿ ಫಲಿತಾಂಶ: ವಿಕಲಾಂಗ ಯುವತಿಗೆ ಮೊದಲ ಸ್ಥಾನ, ದಾಖಲೆ ಸೃಷ್ಟಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2015, 19:55 IST
Last Updated 4 ಜುಲೈ 2015, 19:55 IST

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ)  2014ನೇ ಸಾಲಿನಲ್ಲಿ ನಡೆಸಿದ ನಾಗರಿಕ ಸೇವೆ ಪರೀಕ್ಷೆ ಫಲಿತಾಂಶ ಶನಿವಾರ ಹೊರಬಿದ್ದಿದ್ದು, ರಾಜ್ಯದ 61 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಉಡುಪಿಯ ಕೆ. ನಿತೀಶ್‌ ಅವರು ಎಂಟನೇ ರ‍್ಯಾಂಕ್‌ ಗಳಿಸಿ ರಾಜ್ಯಕ್ಕೆ ಪ್ರಥಮ  ಬಂದಿದ್ದಾರೆ. ಸುಮಾರು ಒಂದು ದಶಕದ ಬಳಿಕ ರಾಜ್ಯದ ವಿದ್ಯಾರ್ಥಿಯೊಬ್ಬರು ಮೊದಲ ಹತ್ತು ರ‍್ಯಾಂಕ್‌ ಗಳಲ್ಲಿ ಸ್ಥಾನ ಪಡೆದಿದ್ದಾರೆ. ಅದೇ ರೀತಿ ಬೆಂಗಳೂರಿನ ಬಿ. ಫೌಜಿಯಾ ತರನಮ್‌ 31ನೇ ರ‍್ಯಾಂಕ್‌ ಗಳಿಸಿದ್ದಾರೆ.

ನವದೆಹಲಿ ವರದಿ (ಪಿಟಿಐ): ಈ ಬಾರಿ ಮೊದಲ ನಾಲ್ಕು ಸ್ಥಾನಗಳು ಮಹಿಳೆಯರ ಪಾಲಾಗಿವೆ. ಇದರಲ್ಲಿ ಮೂವರು ದೆಹಲಿಯವರು. ದೆಹಲಿಯ ಇರಾ ಸಿಂಘಾಲ್‌ಗೆ ಅಗ್ರಸ್ಥಾನ ದೊರೆತಿದೆ. ಪ್ರಸ್ತುತ ಭಾರತೀಯ ಕಂದಾಯ ಸೇವೆ (ಐಆರ್‌ಎಸ್‌) ಅಧಿಕಾರಿಯಾಗಿರುವ ಸಿಂಘಾಲ್‌ ಅಂಗವಿಕಲರಾಗಿದ್ದಾರೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಂಗವಿಕಲ ಮಹಿಳೆಯೊಬ್ಬರು ಅಗ್ರ ರ್‍್ಯಾಂಕ್‌ ಪಡೆದದ್ದು ಇದೇ ಮೊದಲು.

ಕೇರಳದ ವೈದ್ಯೆ ಡಾ. ರೇಣು ರಾಜ್‌ ಮೊದಲ ಯತ್ನದಲ್ಲೇ ಯಶಸ್ವಿಯಾಗಿ ಎರಡನೇ ಎರಡನೇ ಸ್ಥಾನ ಪಡೆದಿದ್ದಾರೆ.  ದೆಹಲಿಯ ನಿಧಿ ಗುಪ್ತಾ ಮತ್ತು ವಂದನಾ ರಾವ್‌ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನಗಳನ್ನು ಗಳಿಸಿದ್ದಾರೆ. ಬಿಹಾರದ ಸುಹರ್ಷಾ ಭಗತ್‌ ಐದನೇ ರ‍್ಯಾಂಕ್‌ ಪಡೆದಿದ್ದು, ಪುರುಷ ಅಭ್ಯರ್ಥಿಗಳಲ್ಲಿ ಅತ್ಯಧಿಕ ಅಂಕ ಪಡೆದ ಸಾಧನೆ ತಮ್ಮದಾಗಿಸಿಕೊಂಡಿದ್ದಾರೆ.

ನಂಬಲು ಆಗುತ್ತಿಲ್ಲ: ಅಗ್ರಸ್ಥಾನ ಪಡೆದ ಇರಾ ಸಿಂಘಾಲ್‌ ಸ್ಕೋಲಿಯೋಸಿಸ್‌ನಿಂದ (ಬೆನ್ನುಹುರಿಗೆ ಸಂಬಂಧಿಸಿದ ತೊಂದರೆ) ಬಳಲುತ್ತಿದ್ದಾರೆ. ಆರನೇ ಪ್ರಯತ್ನದಲ್ಲಿ ಅವರಿಗೆ ಅಗ್ರಸ್ಥಾನ ದೊರೆತಿದೆ. ‘ನನಗೆ ನಂಬಲು ಆಗುತ್ತಿಲ್ಲ. ಅತಿಯಾದ ಸಂತಸ ಉಂಟಾಗಿದೆ. ಪರೀಕ್ಷೆಗಾಗಿ ತಯಾರಿ ನಡೆಸಿದ್ದೆ. ಆದರೆ ಅಗ್ರಸ್ಥಾನ ನಿರೀಕ್ಷಿಸಿರಲಿಲ್ಲ. ಅಂಗವಿಕಲರ ಏಳಿಗೆಗಾಗಿ ದುಡಿಯುವುದು ನನ್ನ ಗುರಿ’ ಎಂದು 31ರ ಹರೆಯದ ಇರಾ ಪ್ರತಿಕ್ರಿಯಿಸಿದ್ದಾರೆ.

‘ಕಳೆದ ಒಂದು ವರ್ಷದಿಂದ ಪರೀಕ್ಷೆಗೆ ತಯಾರಿ ನಡೆಸಿದ್ದೆ. ಸತತ ಪ್ರಯತ್ನಕ್ಕೆ ಫಲ ದೊರೆತಿದೆ’ ಎಂದು 27ರ ಹರೆಯದ ರೇಣು ಪ್ರತಿಕ್ರಿಯಿಸಿದ್ದಾರೆ. ಕೊಟ್ಟಾಯಂ ಜಿಲ್ಲೆಯವರಾದ ರೇಣು ಪ್ರಸಕ್ತ ಕೊಲ್ಲಂನ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ.

‘ಕಳೆದ ಆಗಸ್ಟ್‌ನಲ್ಲಿ ದೇಶದಾದ್ಯಂತ 59 ಕೇಂದ್ರಗಳ 2,137 ಸ್ಥಳಗಳಲ್ಲಿ  ಪೂರ್ವಭಾವಿ ಪರೀಕ್ಷೆ ನಡೆದಿತ್ತು. 9.45 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದು, 4.51 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.  ಇದರಲ್ಲಿ 16,933 ಮಂದಿ ಅಂತಿಮ ಪರೀಕ್ಷೆಗೆ ಅರ್ಹತೆ ಪಡೆದುಕೊಂಡಿದ್ದರು. 16,286 ಮಂದಿ ಅಂತಿಮ ಪರೀಕ್ಷೆ ಬರೆದಿದ್ದರು' ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
*
ಮೊದಲ ಪ್ರಯತ್ನದಲ್ಲಿ ಯಶಸ್ಸು ಸಿಗದಿದ್ದರೆ ಯಾಕೆ ಸೋಲಾಯಿತು, ಯಾವ ತಪ್ಪಿನಿಂದ ಹೀಗಾಯಿತು ಎಂದು ವಿಮರ್ಶೆ ಮಾಡಬೇಕು. ಅದುವೇ ಯಶಸ್ಸಿನ ಮೆಟ್ಟಿಲು.
- ನಿತೀಶ್‌ ಕೆ,
ಯುಪಿಎಸ್‌ಸಿ ಸಾಧಕ

*
ಬಹಳ ಪರಿಶ್ರಮಪಟ್ಟಿದ್ದೆ. ಅದರ ಫಲ ದೊರೆತಿದೆ. ಅಗ್ರ ರ್‍್ಯಾಂಕ್‌ನ ನಿರೀಕ್ಷೆ ಇರಲಿಲ್ಲ. ಅಂಗವಿಕಲರ ಏಳಿಗೆಗಾಗಿ ದುಡಿಯುವುದು ನನ್ನ ಗುರಿ.
- ಇರಾ ಸಿಂಘಾಲ್‌,
ಅಗ್ರಸ್ಥಾನ ಪಡೆದ ಅಭ್ಯರ್ಥಿ

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.