ADVERTISEMENT

ಉತ್ತರ ಪತ್ರಿಕೆ ಬದಲು: ಅಕ್ರಮ ಖಚಿತ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2014, 19:30 IST
Last Updated 29 ಅಕ್ಟೋಬರ್ 2014, 19:30 IST

ಬೆಂಗಳೂರು: ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ­ಗಳ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪರೀಕ್ಷೆಯ ಉತ್ತರಪತ್ರಿಕೆ ಬದಲು ಪ್ರಕರಣದಲ್ಲಿ ಅಕ್ರಮ ನಡೆದಿರುವುದು ಖಚಿತವಾಗಿದ್ದು, ಹೆಚ್ಚಿನ ತನಿಖೆ ನಡೆ­ಸುವಂತೆ ಸ್ಥಳೀಯ ಪೊಲೀಸರಿಗೆ ದೂರು ನೀಡುವ ಜತೆಗೆ ಸರ್ಕಾರಕ್ಕೆ ವರದಿ ಸಲ್ಲಿಸಲು ವಿ.ವಿ ನಿರ್ಧರಿಸಿದೆ.

‘ಹತ್ತು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳ ೧೯ ಉತ್ತರ ಪತ್ರಿಕೆಗಳು ಅಕ್ರಮವಾಗಿ ಬದಲಾಗಿವೆ ಎನ್ನುವುದು ಆಂತರಿಕ ತನಿಖೆ ಮತ್ತು ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌) ವರದಿ­ಯಿಂದಲೂ ಖಾತ್ರಿ­ಯಾಗಿ­­ರುವುದರಿಂದ ಈ ಕ್ರಮ ತೆಗೆದು­ಕೊಳ್ಳಲು ತೀರ್ಮಾನಿಸಲಾಗಿದೆ’ ಎಂದು ವಿ.ವಿ ಕುಲಪತಿ ಡಾ.ರವೀಂದ್ರನಾಥ್ ‘ಪ್ರಜಾವಾಣಿ’­ಗೆ ತಿಳಿಸಿದ್ದಾರೆ.

ಈ ಕ್ರಮದ ಜೊತೆಗೆ ಆರೋಪ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ಮತ್ತು ಅಂಕಪಟ್ಟಿ ನೀಡದಿರಲು ತೀರ್ಮಾನಿಸಲಾಗಿದೆ. ವಿದ್ಯಾರ್ಥಿಗಳು ರಾಜ್ಯದ ವಿವಿಧ ಭಾಗದ ಏಳು ಖಾಸಗಿ ಕಾಲೇಜಿಗೆ ಸೇರಿದವರು ಎಂದು ತಿಳಿದುಬಂದಿದೆ.
ಹಿಂದಿನ ಕುಲಪತಿಗಳ ಅವಧಿಯಲ್ಲಿ ನಡೆದಿದ್ದ ೨೦೧೪ರ ವೈದ್ಯಕೀಯ ಸ್ನಾತಕೋತ್ತರ ಮತ್ತು ದಂತ ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತರಪತ್ರಿಕೆಗಳು ಅದಲು ಬದಲಾಗಿವೆ ಎಂದು ಜಯಪ್ರಕಾಶ್‌ ಉಲ್ಲಾಸ್‌ ಎಂಬುವರ ಹೆಸರಿನಲ್ಲಿ ಪತ್ರವೊಂದು ೨೦೧೪ರ ಜುಲೈ ೨೧ರಂದು ಮುಖ್ಯಮಂತ್ರಿಗಳ ಹೆಸರಿಗೆ ಬಂದಿತ್ತು.

ಅದರ ಪ್ರತಿಯನ್ನು ವಿ.ವಿ ಕುಲಪತಿ, ರಿಜಿಸ್ಟ್ರಾರ್‌ ಮತ್ತು ಲೋಕಾಯುಕ್ತರಿಗೆ ಸಲ್ಲಿಸಲಾಗಿತ್ತು. ಈ ಬಗ್ಗೆ ಮಾಹಿತಿ ನೀಡಿ ಎಂದು ಉಪಲೋಕಾಯುಕ್ತರು ವಿ.ವಿಗೆ ಪತ್ರ ಬರೆದಿದ್ದರು. ಈ ವಿಚಾರದಲ್ಲಿ ಜುಲೈ ೨೬ರಂದು ನಡೆದ ಸಿಂಡಿಕೇಟ್‌ನ ವಿಶೇಷ ಸಭೆಯಲ್ಲಿ ಚರ್ಚೆ ನಡೆಸಿ ಆಂತರಿಕ ಸಮಿತಿಯ ಮೂಲಕ ತನಿಖೆ ನಡೆಸಿ ಮುಂದಿನ ಹೆಜ್ಜೆ ಇರಿಸಲು ತೀರ್ಮಾನ ತೆಗೆದು­ಕೊಳ್ಳಲಾಗಿತ್ತು.

ಸಿಂಡಿಕೇಟ್‌ ಸದಸ್ಯರಾದ ಡಾ.ರಾಜೇಶ್‌ ಶೆಣೈ ಅವರ ಅಧ್ಯಕ್ಷತೆಯಲ್ಲಿ ಸೆನೆಟ್‌ ಸದಸ್ಯರಾದ ಡಾ.ಎಂ.ಕೆ.ರಮೇಶ್‌ ಹಾಗೂ ಡಾ.ಕಿರಣ್‌ ಅವರನ್ನು ಒಳಗೊಂಡ ಆಂತರಿಕ ತನಿಖಾ ಸಮಿತಿಯನ್ನು ರಚಿಸಿ ೨೦೧೪ರಲ್ಲಿ ನಡೆದ ವೈದ್ಯಕೀಯ, ದಂತವೈದ್ಯಕೀಯ, ಆಯುಷ್‌, ಔಷಧ ವಿಜ್ಞಾನ ಮತ್ತು ಇತರೆ ಆರೋಗ್ಯ ಸೇವೆಗಳ ಪರೀಕ್ಷಾ ಉತ್ತರ ಪತ್ರಿಕೆಗಳನ್ನು ಪರಿ­ಶೀಲಿಸುವ ಅಧಿಕಾರವನ್ನು ಸಮಿತಿಗೆ ನೀಡಲಾಗಿತ್ತು.

ವೈದ್ಯಕೀಯ ಸ್ನಾತಕೋತ್ತರ ಪರೀಕ್ಷೆಯನ್ನು ತೆಗೆದುಕೊಂಡಿದ್ದ ೧,೬೩೦ ಹಾಗೂ ದಂತವೈದ್ಯಕೀಯ ಸ್ನಾತಕೋತ್ತರ ಪರೀಕ್ಷೆ ಎದುರಿಸಿದ್ದ ೬೩೫ ವಿದ್ಯಾರ್ಥಿಗಳ ವಿವಿಧ ವಿಷಯಗಳ ೯,೦೬೦ ಉತ್ತರ ಪತ್ರಿಕೆಗಳನ್ನು ಕೂಲಂಕಷವಾಗಿ ಸಮಿತಿ ಪರಿಶೀಲಿಸಿ ಹತ್ತು ವಿದ್ಯಾರ್ಥಿಗಳ ೧೯ ಪತ್ರಿಕೆಗಳನ್ನು ಅಕ್ರಮವಾಗಿ ಬದಲಿಸಲಾಗಿದೆ ಎಂದು ವರದಿ ನೀಡಿತ್ತು.

ಈ ವರದಿಯನ್ನು ಆಗಸ್ಟ್‌ ೨೭ರಂದು ನಡೆದ ವಿಶೇಷ ಸಿಂಡಿಕೇಟ್‌ ಸಭೆಯ ಮುಂದಿರಿಸಿದಾಗ, ಉತ್ತರ ಪತ್ರಿಕೆ ಬದಲಾಗಿರುವುದನ್ನು ಖಚಿತಪಡಿಸಿ­ಕೊಳ್ಳಲು ಎಫ್‌ಎಸ್‌ಎಲ್‌ಗೆ ಉತ್ತರ ಪತ್ರಿಕೆಗಳನ್ನು ಕಳುಹಿಸಲು ತೀರ್ಮಾನಿಸಿ ಸರ್ಕಾರಿ ಮಾನ್ಯತೆ­ಯಿರುವ ‘ಟ್ರೂತ್‌ ಲ್ಯಾಬ್‌’ ಪ್ರಯೋಗಾ­ಲಯದ ಸಹಾಯ­ವನ್ನು ಪಡೆಯಲಾಯಿತು. ಪ್ರಯೋ­ಗಾಲಯ ನೀಡಿದ ವರದಿಯಲ್ಲಿಯೂ ಮೋಸ ನಡೆದಿರುವುದು ಖಚಿತ­ವಾಗಿದೆ ಎಂದು ಪರೀಕ್ಷಾಂಗ ಕುಲಸಚಿವ ಡಾ.ಎಸ್‌.­ಸಚ್ಚಿದಾನಂದ  ತಿಳಿಸಿದರು.

ಪ್ರಸ್ತುತ ವಿ.ವಿ ನೀಡುತ್ತಿರುವ ಉತ್ತರ ಪತ್ರಿಕೆಗಳಲ್ಲಿ ಐದು ರೀತಿಯ ವಿಶಿಷ್ಟ ಗುರುತಿವೆ. ಪತ್ರಿಕೆಯನ್ನು ಎರಡು ರೀತಿಯ ದಾರದಿಂದ ಹೊಲೆಯಲಾಗಿದೆ. ಪ್ರತಿ ಹೊಲಿಗೆಯ ಅಂತರ ಮೂರು ಮಿ.ಮೀ. ಹೊಲೆ­ಯಲು ವಿಶಿಷ್ಟ ದಾರವನ್ನು ಬಳಸಲಾಗಿದೆ. ಪತ್ರಿಕೆಯ ಮೇಲ್ಭಾಗ­ದಲ್ಲಿ ತ್ರಿಕೋಣಾಕಾರದಲ್ಲಿ ಪಂಚ್‌ ಮಾಡಲಾಗಿದೆ ಹಾಗೂ ಹೊಲಿಗೆಯನ್ನು ಸೇರಿಸಿ ಹಾಲೋಗ್ರಾಮ್‌ ಹಾಕಲಾಗಿದೆ. ಈ ಗುರುತುಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದರಿಂದ ಅಕ್ರಮ ಬಯಲಾಯಿತು ಎಂದು ಡಾ.ಸಚ್ಚಿದಾನಂದ ತಿಳಿಸಿದರು.

ಉತ್ತರ ಪತ್ರಿಕೆ ಬದಲು ಯಾವ ಹಂತದಲ್ಲಿ ನಡೆದಿದೆ ಎನ್ನುವುದು ಖಚಿತವಾಗುತ್ತಿಲ್ಲ. ಈ ಅಕ್ರಮ­ದಲ್ಲಿ ಯಾರು ಭಾಗಿಯಾಗಿದ್ದಾರೆ ಎನ್ನು­ವುದು  ಪತ್ತೆ­ಯಾಗಿಲ್ಲ. ಹೀಗಾಗಿ ಪೊಲೀಸ್‌ ತನಿಖೆ ಅನಿವಾರ್ಯ ಎಂದ ಡಾ.ರವೀಂದ್ರನಾಥ್‌, ಪ್ರಕರಣದ ಬಗ್ಗೆ ಮುಂದಿನ ಕ್ರಮ ತೆಗೆದುಕೊಳ್ಳಲು  ವೈದ್ಯಕೀಯ ಶಿಕ್ಷಣ ಇಲಾಖೆಗೆ ವರದಿ ಸಲ್ಲಿಸಲಾಗುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.