ಹುಬ್ಬಳ್ಳಿ: ಕೋರ್ಟ್ ಮೆಟ್ಟಿಲೇರಿದ ಉಪನ್ಯಾಸಕರಿಗೆ ಮಾತ್ರ ಯುಜಿಸಿ ಬಾಕಿ ವೇತನ ನೀಡುವುದಾಗಿ ಸರ್ಕಾರ ಸುತ್ತೋಲೆ ಹೊರಡಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಅರ್ಹರಿಗೆ ಇದೇ ತಿಂಗಳ 31ರ ಒಳಗಾಗಿ ಬಾಕಿ ವೇತನ ಪಾವತಿಗೆ ಕ್ರಮ ತೆಗೆದುಕೊಳ್ಳುವಂತೆ ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ ಅವರಿಗೆ ಆಗ್ರಹಪಡಿಸಿದ್ದಾರೆ.
‘ಕಳೆದ ನವೆಂಬರ್‌ನಲ್ಲಿ ನಡೆದ ವಿಧಾನಮಂಡಲದ ಅಧಿವೇಶನದ ಸಂದರ್ಭದಲ್ಲಿ ನಾನು ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆಗೆ, ಜನವರಿ 1ರ ಒಳಗೆ ಯುಜಿಸಿ ಬಾಕಿ ವೇತನ ಬಿಡುಗಡೆ ಮಾಡುವುದಾಗಿ ಉತ್ತರ ನೀಡಿದ್ದೀರಿ. ಈಗ ನ್ಯಾಯಾಲಯಕ್ಕೆ ಹೋದವರಿಗೆ ಮಾತ್ರ ಕೊಡುವುದಾಗಿ ಹೇಳಿರುವುದರಿಂದ ಹಕ್ಕು ಚ್ಯುತಿ ಯಾಗಿದೆ’ ಎಂದು ಸಚಿವರಿಗೆ ಬರೆದಿರುವ ಪತ್ರದಲ್ಲಿ ಅವರು ತಿಳಿಸಿದ್ದಾರೆ.
‘ಇದು, ತಮಗೆ ಸಿಗಬೇಕಾದ ನ್ಯಾಯಯುತ ಸೌಲಭ್ಯ ಪಡೆದುಕೊಳ್ಳಲು ನ್ಯಾಯಾಲಯದ ಮೊರೆ ಹೋಗುವಂತೆ ಸರ್ಕಾರವೇ ಸುತ್ತೋಲೆ ಮೂಲಕ ಉಪನ್ಯಾಸಕರಿಗೆ ಹೇಳಿದಂತಾಗಿದೆ. ಅದು ಸರಿಯಲ್ಲ. ಅವರು ತಮ್ಮ ಕೆಲಸ ಬಿಟ್ಟು ನ್ಯಾಯಾಲಯಕ್ಕೆ ಅಲೆದಾಡಲು ಆಗುವುದಿಲ್ಲ. ಕೇಂದ್ರ ಸರ್ಕಾರ 7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುವ ಮುನ್ನ ಅವರಿಗೆ ನೀಡಬೇಕಾದ ಬಾಕಿ ವೇತನ ನೀಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.