ADVERTISEMENT

ಎಂಜಿನಿಯರಿಂಗ್‌ ದುಬಾರಿ

ಶುಲ್ಕ ಶೇ 40ರಷ್ಟು ಹೆಚ್ಚಳ: ಒಪ್ಪಂದಕ್ಕೆ ಶಿಕ್ಷಣ ಇಲಾಖೆ, ಕಾಮೆಡ್‌–ಕೆ ಸಹಿ

​ಪ್ರಜಾವಾಣಿ ವಾರ್ತೆ
Published 27 ಮೇ 2015, 19:30 IST
Last Updated 27 ಮೇ 2015, 19:30 IST

ಬೆಂಗಳೂರು: ಈ ವರ್ಷದಿಂದ ಎಂಜಿನಿಯರಿಂಗ್‌ ಕೋರ್ಸ್‌ಗಳ ಶುಲ್ಕ ಸುಮಾರು ಶೇ40ರಷ್ಟು ಹೆಚ್ಚಳವಾಗಲಿದೆ.
ಈ ಸಂಬಂಧ ಉನ್ನತ ಶಿಕ್ಷಣ  ಇಲಾಖೆ ಹಾಗೂ ಖಾಸಗಿ ವೃತ್ತಿ ಶಿಕ್ಷಣ ಕಾಲೇಜುಗಳ ಒಕ್ಕೂಟ ‘ಕಾಮೆಡ್‌–ಕೆ’ ನಡುವೆ ಒಮ್ಮತ ಮೂಡಿದ್ದು, ಬುಧವಾರ ಸರ್ವಸಮ್ಮತ ಒಪ್ಪಂದಕ್ಕೆ ಎರಡೂ ಕಡೆಯವರು ಸಹಿ ಹಾಕಿದ್ದಾರೆ.

ಒಪ್ಪಂದದ ಪ್ರಕಾರ, ಕಾಮೆಡ್‌–ಕೆ ವ್ಯಾಪ್ತಿಯ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ‌ಸೀಟಿನ‌ ಶುಲ್ಕ ಈಗಿರುವುದಕ್ಕಿಂತ ಸುಮಾರು ₨13 ಸಾವಿರದವರೆಗೂ  ಏರಿಕೆಯಾಗಲಿದೆ. ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಸರ್ಕಾರಿ ಕೋಟಾ ಪ್ರವೇಶ ಶುಲ್ಕ ವನ್ನು ಶೇ 20 ರಷ್ಟು ಹೆಚ್ಚಿಸುವ ವಿಚಾರದಲ್ಲೂ ವೈದ್ಯಕೀಯ ಶಿಕ್ಷಣ ಇಲಾಖೆ  ಮತ್ತು ಖಾಸಗಿ ಕಾಲೇಜುಗಳ ನಡುವೆ ಒಮ್ಮತ ಮೂಡಿದೆ. ಈ ಒಪ್ಪಂದಕ್ಕೆ ಎರಡೂ ಕಡೆ ಯವರು ಗುರುವಾರ ಸಹಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.  ಇದರಿಂದಾಗಿ ಕಾಮೆಡ್‌ –ಕೆ ವೈದ್ಯಕೀಯ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದ ವೈದ್ಯಕೀಯ ಸೀಟುಗಳ ಶುಲ್ಕ ₨ 46 ಸಾವಿರದಿಂದ ₨55 ಸಾವಿರಕ್ಕೆ ಏರಲಿದೆ.

ಸರ್ಕಾರದ ಸಮ್ಮತಿ: ಬುಧವಾರದ ಒಪ್ಪಂದದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಒಕ್ಕೂಟದ  ಅಧ್ಯಕ್ಷ ಎಂ.ಕೆ. ಪಾಂಡುರಂಗ ಶೆಟ್ಟಿ, ‘ಕಳೆದ ವರ್ಷದವರೆಗೆ ₨ 33 ಸಾವಿರವರೆಗೆ ಇದ್ದ ಸರ್ಕಾರಿ ಕೋಟಾ ಸೀಟಿನ ಬೋಧನಾ ಶುಲ್ಕ  ₨45 ಸಾವಿರ ಆಗಲಿದೆ.  ಅದೇ ರೀತಿ ₨ 37 ಸಾವಿರ ಇದ್ದ  ಬೋಧನಾ ಶುಲ್ಕವನ್ನು ₨ 50 ಸಾವಿರಕ್ಕೆ ಹೆಚ್ಚಿಸಲು ಸರ್ಕಾರ ಒಪ್ಪಿದೆ’ ಎಂದು  ಹೇಳಿದರು.

‘ಸರ್ಕಾರಿ ಸೀಟು ಶುಲ್ಕ ₨ 45 ಸಾವಿರ ಇರುವ ಕಾಲೇಜುಗಳು  ಕಾಮೆಡ್‌–ಕೆ ಸೀಟುಗಳಿಗೆ ₨1.5 ಲಕ್ಷದವರೆಗೆ ಮತ್ತು  ಸರ್ಕಾರಿ

ಸೀಟು ಶುಲ್ಕ ₨ 50 ಸಾವಿರ ಇರುವ ಕಾಲೇಜುಗಳು  ಕಾಮೆಡ್‌–ಕೆ ಸೀಟುಗಳಿಗೆ ₨1.16 ಲಕ್ಷದಷ್ಟು ಶುಲ್ಕ ಪಡೆಯಲು ಒಪ್ಪಂದ ಅವಕಾಶ ಕೊಟ್ಟಿದೆ’ ಎಂದು  ಅವರು ವಿವರಿಸಿದರು.

ವಿ.ವಿ ಶುಲ್ಕ ಪ್ರತ್ಯೇಕ: ಈಗ ಹೆಚ್ಚಳ ಮಾಡಿರುವುದು ಬೋಧನಾ ಶುಲ್ಕ ಮಾತ್ರ. ವಿದ್ಯಾರ್ಥಿಗಳು ಪ್ರವೇಶದ ಸಂದರ್ಭದಲ್ಲಿ ಪಾವತಿಸುವ ವಿಶ್ವವಿದ್ಯಾ ಲಯ (ವಿಟಿಯು) ಶುಲ್ಕವನ್ನು ಪ್ರತ್ಯೇಕ ವಾಗಿ ಪಾವತಿಸಬೇಕಾಗುತ್ತದೆ. ಇದುವರೆಗೆ ವಿವಿ ಶುಲ್ಕ ₨3,096 ಇತ್ತು. ಇದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಸರ್ಕಾರಿ ಶುಲ್ಕ ಯಥಾಸ್ಥಿತಿ: ಸರ್ಕಾರಿ ಮತ್ತು ಅನುದಾನಿತ ಎಂಜಿನಿಯರಿಂಗ್‌ ಕಾಲೇಜುಗಳ  ಶುಲ್ಕದಲ್ಲಿ (₨18,096) ಈ ಸಲ ಯಾವುದೇ ಬದಲಾವಣೆಯಾಗಿಲ್ಲ. ಐಅಲ್ಲದೆ ಸೀಟು ಹಂಚಿಕೆಯಲ್ಲಿ ಸಹ ಯಾವುದೇ ವ್ಯತ್ಯಾಸವಾಗಿಲ್ಲ.ಈ ಹಿಂದೆ ಇದ್ದ ಸೂತ್ರವನ್ನೇ ಈ ಬಾರಿಯೂ ಅನುಸರಿಸಲು  ಇಲಾಖೆ ಮತ್ತು ಖಾಸಗಿ ಕಾಲೇಜುಗಳು ನಿರ್ಧರಿಸಿವೆ.

ಕೌನ್ಸೆಲಿಂಗ್‌ ವೇಳಾಪಟ್ಟಿ ಬದಲು
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ ಫಲಿತಾಂಶವನ್ನು ಜೂನ್‌ 1ಕ್ಕೆ ಮುಂದೂಡಿರುವ ಕಾರಣ ಕೌನ್ಸೆಲಿಂಗ್‌ನ ವೇಳಾಪಟ್ಟಿಯಲ್ಲೂ ಬದಲಾವಣೆ ಮಾಡಿದೆ.

ADVERTISEMENT

ಅಂಗವಿಕಲ ಅಭ್ಯರ್ಥಿಗಳ ವೈದ್ಯಕೀಯ ಪರೀಕ್ಷೆ, ಎನ್.ಸಿ.ಸಿ ಅಭ್ಯರ್ಥಿಗಳ (ಬಿ- ಸರ್ಟಿಫಿಕೇಟ್ ಹೊಂದಿರುವವರು ಮಾತ್ರ) ದಾಖಲಾತಿ ಪರಿಶೀಲನೆ ಜೂನ್‌ 3 ರಂದು ಮತ್ತು ಕ್ರೀಡಾ ಕೋಟಾದ ಅಭ್ಯರ್ಥಿಗಳ (ರಾಷ್ಟ್ರೀಯ  ಮಟ್ಟದಲ್ಲಿ ಪಾಲ್ಗೊಂಡವರು) ದಾಖಲಾತಿ ಪರಿಶೀಲನೆ ಜೂನ್‌ 4 ರಂದು  ಪ್ರಾಧಿಕಾರದ ಕಚೇರಿಯ ಆವರಣದಲ್ಲಿ ಬೆಳಿಗ್ಗೆ 11 ಗಂಟೆಯಿಂದ ನಡೆಯಲಿದೆ.

ಹೊರನಾಡು/ಗಡಿನಾಡು, ಜಮ್ಮು ಮತ್ತು ಕಾಶ್ಮೀರದಿಂದ ವಲಸೆ ಬಂದವರ ಮಕ್ಕಳು, ಸೈನಿಕರು/ ಮಾಜಿ ಸೈನಿಕರ ಮಕ್ಕಳು, ಸ್ಕೌಟ್ಸ್ & ಗೈಡ್ಸ್, ಕೇಂದ್ರ ಸಶಸ್ತ್ರ ಪೊಲೀಸ್ ದಳ/,  ಕೇಂದ್ರ ಸಶಸ್ತ್ರ ಪೊಲೀಸ್ ದಳದ ನಿವೃತ್ತರು, ಎನ್.ಸಿ.ಸಿ ಮತ್ತು ಕ್ರೀಡಾ  ಕೋಟದ  ಅಭ್ಯರ್ಥಿಗಳು ಬೆಂಗಳೂರು ಕೇಂದ್ರದಲ್ಲೇ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕು. ಉಳಿದ ಅಭ್ಯರ್ಥಿ ಗಳು  ( ವಿಶೇಷ ಮೀಸಲಾತಿಯೂ  ಸೇರಿ)  ಸಹಾಯ ಕೆಂದ್ರಗಳಲ್ಲಿ ಜೂನ್‌ 5ರಿಂದ 20ರವರೆಗೆ  ನಡೆಯುವ  ದಾಖಲಾತಿ ಪರಿಶೀಲನೆ
ಯಲ್ಲಿ ಪಾಲ್ಗೊಳ್ಳಬಹುದು.

ಮೊದಲಸುತ್ತಿನ ಸೀಟು ಆಯ್ಕೆ  ವೇಳಾಪಟ್ಟಿ ಮತ್ತು ಎರಡನೇ ಸುತ್ತಿನ  ಸೀಟು ಆಯ್ಕೆ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ.  ವಿವರಗಳಿಗೆ ಅಭ್ಯರ್ಥಿಗಳು  ಪ್ರಾಧಿಕಾರದ ವೆಬ್‌ಸೈಟ್‌ (kea.kar.nic.in) ನೋಡಬಹುದು ಎಂದು ಕೆಇಎಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.