ಬೆಂಗಳೂರು: ರಾಜ್ಯದಲ್ಲಿ ಎಲ್‌ಇಡಿ ಬಲ್ಬ್‌ಗಳ ಬಳಕೆಯನ್ನು ಕಡ್ಡಾಯ ಮಾಡುವ ಚಿಂತನೆ ಇದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಎಲ್ಲ ಗ್ರಾಹಕರೂ ಎಲ್‌ಇಡಿ ಬಳಸಿದರೆ ರಾಜ್ಯದಲ್ಲಿ 800 ಮೆಗಾವಾಟ್ ವಿದ್ಯುತ್ ಉಳಿತಾಯ ಆಗಲಿದೆ ಎಂದು ತಜ್ಞರು ವರದಿ ನೀಡಿದ್ದಾರೆ. ಇದನ್ನು ಆಧರಿಸಿ ಸರ್ಕಾರ ಕ್ರಮ ಕೈಗೊಳ್ಳಲಿದೆ. ಈ ಬಗ್ಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೂ ಪತ್ರ ಬರೆದಿದ್ದೇವೆ’ ಎಂದರು.
‘ಎಲ್‌ಇಡಿ ಬೆಲೆ ದುಬಾರಿಯಲ್ಲವೇ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಎಲ್‌ಇಡಿ ಬಳಕೆಗೆ ಕೇಂದ್ರ ಸರ್ಕಾರವೂ ಉತ್ತೇಜನ ನೀಡುತ್ತಿದೆ. ಕಡಿಮೆ ದರದಲ್ಲಿ ಬಲ್ಬ್ ಪೂರೈಸುವ ಬಗ್ಗೆ ಚರ್ಚಿಸಲು ಎಲ್‌ಇಡಿ ಬಲ್ಬ್ ತಯಾರಿಸುವ ಕಂಪೆನಿಗಳ ಸಭೆಯನ್ನು ಅಕ್ಟೋಬರ್ 5ರಂದು ಕರೆಯಲಾಗಿದೆ. ₹ 100ಕ್ಕಿಂತ ಕಡಿಮೆ ದರಕ್ಕೆ ಬಲ್ಬ್ ಲಭಿಸುವಂತಾಗಬೇಕು ಎಂಬುದು ನಮ್ಮ ಆಶಯ’ ಎಂದರು.
ವಿದ್ಯುತ್ ಖರೀದಿ ಶೀಘ್ರ ನಿರ್ಧಾರ: ‘ರಾಜ್ಯದ ಕೆಲವೆಡೆ ಮಳೆ ಆಗುತ್ತಿದೆ. ಆದರೆ ಜಲಾಶಯಗಳಿನ್ನೂ ಭರ್ತಿ ಆಗಿಲ್ಲ. ವಿದ್ಯುತ್ ಕೊರತೆ ಮುಂದುವರಿದಿದೆ. ಲೋಡ್‌ಶೆಡ್ಡಿಂಗ್ ಮಾಡುವುದು ನನಗೂ ಇಷ್ಟ ಇಲ್ಲ. ಹಾಗಾಗಿ ಖಾಸಗಿ ಕಂಪೆನಿಗಳಿಂದ ವಿದ್ಯುತ್ ಖರೀದಿಸುವ ಚಿಂತನೆ ಇದೆ.
ಈ ಬಗ್ಗೆ ಅಕ್ಟೋಬರ್ 1 ರಂದು ಉನ್ನತ ಅಧಿಕಾರಿಗಳು ಹಾಗೂ ನಿಗಮಗಳ ಮುಖ್ಯಸ್ಥರ ಸಭೆ ನಡೆಸಿ ಸ್ಪಷ್ಟ ನಿರ್ಧಾರಕ್ಕೆ ಬರಲಾಗುವುದು. ವಿದ್ಯುತ್ ದರ ನಿಗದಿಯ ಬಗ್ಗೆಯೂ ಚರ್ಚಿಸಲಾಗುವುದು’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.