ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ವಿಶ್ವಾಸಮತ ಗಳಿಸುತ್ತಿದ್ದಂತೆಯೇ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಮತ್ತು ಕರ್ನಾಟಕಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದರು.
‘ರಾಜೀನಾಮೆ ನೀಡಬೇಕೆಂಬ ನಿಯಮವೇನೂ ಇಲ್ಲ, ಆದರೆ ನೈತಿಕ ಮತ್ತು ತಾತ್ವಿಕ ನೆಲೆಗಟ್ಟಿನಲ್ಲಿಈಗಿನ ಹೊಸ ಆಡಳಿತ ವ್ಯವಸ್ಥೆಯಲ್ಲಿ ಮುಂದುವರಿಯುವ ಮನಸ್ಸಿಲ್ಲ. ರಾಜೀನಾಮೆ ನೀಡಿ ಎಂದು ಸರ್ಕಾರ ಹೇಳುವ ಮೊದಲೇ ನಾವಾಗಿಯೇ ಗೌರವಯುತವಾಗಿ ರಾಜೀನಾಮೆ ಸಲ್ಲಿಸುತ್ತಿದ್ದೇವೆ’ ಎಂದು ಸಿದ್ಧರಾಮಯ್ಯ ಹೇಳಿದರು.
‘ನಮಗೆ ಒಂದು ತಾತ್ವಿತ ಬದ್ಧತೆ ಇದೆ. ಅದಕ್ಕೆ ವಿರುದ್ಧವಾದ ಆಡಳಿತ ವ್ಯವಸ್ಥೆ ಬಂದಾಗ ನಾವು ಆತ್ಮಸಾಕ್ಷಿಗೆ ಉತ್ತರ ಕೊಡಬೇಕಾಗುತ್ತದೆ.ನಮ್ಮ ಬಹು ಸಂಸ್ಕೃತಿಯ ಒಕ್ಕೂಟದ ವ್ಯವಸ್ಥೆಯಲ್ಲಿ ನಾವು ವಿರೋಧಿಸುತ್ತಿರುವ ಕ್ರಮಗಳೇ ನಡೆಯುತ್ತಿರುವಾಗ ಅದರ ಆಶ್ರಯದಲ್ಲೇ ಮುಂದುವರಿದರೆ ನಾವೂ ಅವರ ಕಾರ್ಯಗಳಿಗೆ ಕೈಜೋಡಿಸಿದಂತಾಗುತ್ತದೆ. ನಮಗೆ ಒಗ್ಗದ ವ್ಯವಸ್ಥೆಯಲ್ಲಿ ಕೆಲಸ ಮಾಡುವುದು ಆತ್ಮದ್ರೋಹವಾಗುತ್ತದೆ’ ಎಂದರು.
‘ಕನ್ನಡ ಅನುಷ್ಠಾನಕ್ಕಾಗಿಜಿಲ್ಲಾ ಜಾಗೃತಿ ಸಮಿತಿ ರಚನೆ ಪ್ರಾಧಿಕಾರದ ಬಹುದೊಡ್ಡ ಸಾಧನೆ’ ಎಂದ ಅವರು, ಮೂರು ವರ್ಷಗಳಲ್ಲಿ ಮಾಡಿದ ಇತರ ಕೆಲಸಗಳನ್ನುವಿವರಿಸಿದರು.
ಸೀಮಾತೀತ ಸಾಹಿತ್ಯ ಪರ್ಬ ಮುಂದೂಡಿಕೆ
‘ಆಗಸ್ಟ್ 1ರಿಂದ 3 ದಿನ ಸೀಮಾತೀತ ಸಾಹಿತ್ಯ ಪರ್ಬ ನಡೆಸಲು ನಿರ್ಧರಿಸಲಾಗಿತ್ತು. ಆದರೆ ನನ್ನ ರಾಜೀನಾಮೆ ಕಾರಣ ಅದನ್ನು ಮುಂದೂಡಲಾಗಿದೆ. ಮುಂದೆ ಬರಲಿರುವ ಅಧ್ಯಕ್ಷರು ಇದನ್ನು ನಡೆಸಿಕೊಡಲಿದ್ದಾರೆ’ ಎಂದುಅರವಿಂದ ಮಾಲಗತ್ತಿ ಹೇಳಿದರು.
‘ನನ್ನ ಅವಧಿಯಲ್ಲಿ ಎಂಟು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೆ. ಅದರಲ್ಲಿ ಏಳು ಯೋಜನೆಗಳು ಕೊನೆಗೊಂಡಿವೆ. ಎರಡು ವರ್ಷದಲ್ಲಿ ಅದನ್ನು ಸಾಧಿಸಿದ ತೃಪ್ತಿ ಇದೆ’ ಎಂದರು.
‘ಮಕ್ಕಳ ಮನಸ್ಸನ್ನು ಕೊಲ್ಲಬೇಡಿ’
‘ಸರ್ಕಾರಿ ಕನ್ನಡ ಶಾಲೆಗಳನ್ನು ಸಬಲೀಕರಣಗೊಳಿಸಿ. ಶಾಲೆಗಳಲ್ಲಿ ಒಂದು ಭಾಷೆಯಾಗಿ ಇಂಗ್ಲಿಷ್ ಅನ್ನು ಒಂದನೇ ತರಗತಿಯಿಂದ ಕಲಿಸಿ. ಆದರೆ ಮಾಧ್ಯಮವಾಗಿ ಮಾಡುವ ಮೂಲಕ ಮಕ್ಕಳ ಮನಸ್ಸನ್ನು ಕೊಲ್ಲಬೇಡಿ. ಇದನ್ನು ನಾನು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದೇನೆ’ ಎಂದುಎಸ್.ಜಿ.ಸಿದ್ಧರಾಮಯ್ಯ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.