ಬೆಂಗಳೂರು: ಸರ್ಕಾರದ ವಿವಿಧ ಇಲಾಖೆಗಳಿಗೆ ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಸಹಾಯಕರ (ಎಫ್‌ಡಿಎ, ಎಸ್‌ಡಿಎ) ನೇಮಕಾತಿಗಾಗಿ ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ನಡೆಸಲಿರುವ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು 13 ಲಕ್ಷ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.
ಅಕ್ಟೋಬರ್ 3, 4 ಮತ್ತು 18 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು, ಕೆಪಿಎಸ್‌ಸಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ರಾಜ್ಯದಾದ್ಯಂತ 1,200 ಕೇಂದ್ರಗಳಲ್ಲಿ ಎಫ್‌ಡಿಎ, 2,140 ಕೇಂದ್ರಗಳಲ್ಲಿ ಎಫ್‌ಡಿಎ ಪರೀಕ್ಷೆಗಳು ನಡೆಯಲಿವೆ.
‘ಈ ಪರೀಕ್ಷೆ ಆಯೋಗಕ್ಕೊಂದು ಸವಾಲು. ಸಿದ್ಧತೆಗಳು ನಡೆಯುತ್ತಿವೆ. ಇದರಲ್ಲಿ ಯಶಸ್ವಿಯಾಗುವ ವಿಶ್ವಾಸವಿದೆ’ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ ‘ಪ್ರಜಾವಾಣಿ’ಗೆ ತಿಳಿಸಿದರು.
ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿ: ಬೇರೆ ಜಿಲ್ಲೆಗಳಲ್ಲಿ ನಡೆಯಲಿರುವ ಪರೀಕ್ಷೆಗಳ ಹೊಣೆಯನ್ನು ಆಯಾ ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ. ಬೆಂಗಳೂರಿನ ಕೇಂದ್ರಗಳ ಮೇಲ್ವಿಚಾರಣೆಯನ್ನು ಆಯೋಗವೇ ನಡೆಸಲಿದೆ’ ಎಂದರು.
ಕ್ಯಾಮೆರಾ ನಿಗಾ: ಪ್ರತಿ ಪರೀಕ್ಷಾ ಕೇಂದ್ರದ ಚಟುವಟಿಕೆಗಳನ್ನು ಕ್ಯಾಮೆರಾದಲ್ಲಿ ಚಿತ್ರೀಕರಿಸಲಾಗುವುದು. ಭದ್ರತೆಗಾಗಿ ಪೊಲೀಸ್ ಇಲಾಖೆಯ ನೆರವನ್ನೂ ಕೇಳಲಾಗಿದೆ ಎಂದು ಹೇಳಿದರು.
‘ಪರೀಕ್ಷಾ ಕೇಂದ್ರಗಳು ಸಿಗದೇ ಇದ್ದುದರಿಂದ ದ್ವಿತೀಯ ದರ್ಜೆ ಸಹಾಯಕರ ನೇಮಕಾತಿಗೆ ನಡೆಸಲಾಗುವ ಸಾಮಾನ್ಯ ಜ್ಞಾನ ವಿಷಯದ ಪರೀಕ್ಷೆ ದಿನಾಂಕವನ್ನು ಅ.18ಕ್ಕೆ ನಿಗದಿಪಡಿಸಬೇಕಾಯಿತು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.