ADVERTISEMENT

ಏಕಕಾಲಕ್ಕೆ ಪಿಎಚ್.ಡಿ, ಎಂ.ಎ

ವಿಶ್ವವಿದ್ಯಾಲಯಗಳ  ಹಗರಣ –12

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2014, 19:30 IST
Last Updated 16 ನವೆಂಬರ್ 2014, 19:30 IST

ಬೆಂಗಳೂರು: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲ­ಯದಲ್ಲಿ ಸಹ– ಪ್ರಾಧ್ಯಾಪಕರ ಹುದ್ದೆಗಳ ನೇಮ­ಕಾತಿ­ಯಲ್ಲಿ ಹಲವಾರು ಪವಾಡಗಳು ನಡೆದಿವೆ. ಒಂದೇ ವರ್ಷ ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌.ಡಿ ಮಾಡಿರುವುದಾಗಿ ಪ್ರಮಾಣ ಪತ್ರ ಸಲ್ಲಿಸಿದ­ವರಿಗೂ ಇಲ್ಲಿ ಕೆಲಸ ಸಿಕ್ಕಿದೆ.

ಇನ್ನೂ ಅಚ್ಚರಿ ಎಂದರೆ, ಸ್ನಾತಕೋತ್ತರ ಪದವಿ ಪಡೆಯುವುದಕ್ಕೆ ಮೊದಲೇ ಪಿಎಚ್‌.ಡಿ ಪಡೆದವರಿಗೂ ಉದ್ಯೋಗ ನೀಡಲಾಗಿದೆ. ಹೀಗಂತ ರಾಜ್ಯಪಾಲ­ರಿಗೆ ಸಲ್ಲಿಕೆಯಾದ ದೂರಿನಲ್ಲಿ ದಾಖಲೆ ಸಹಿತ ವಿವರಿಸಲಾಗಿದೆ. ‘ಸಹ ಪ್ರಾಧ್ಯಾಪಕರಾಗಿ ಆಯ್ಕೆಯಾಗಿರುವ ಬಿ.ವಿ. ವೆಂಕಟರಮಣ ಅವರು, ತಾವು 2009­ರಲ್ಲಿ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವ­ವಿದ್ಯಾ­­ಪೀಠ­ದಿಂದ ದ್ವೈತ ವೇದಾಂತದಲ್ಲಿ ಪಿಎಚ್‌.ಡಿ ಪಡೆದಿರುವು­ದಾಗಿ ಅರ್ಜಿಯಲ್ಲಿ ತಿಳಿಸಿದ್ದಾರೆ. 2008–09ರಲ್ಲಿ ಇದೇ ವಿದ್ಯಾಪೀಠ­ದಲ್ಲಿ ತಾವು ನ್ಯಾಯಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದಿರುವುದಾಗಿಯೂ ಅವರು ಪ್ರಮಾಣ ಪತ್ರ ಸಲ್ಲಿಸಿದ್ದಾರೆ.

ಪಿಎಚ್‌.ಡಿ ಅಧ್ಯಯನ ಸಂದರ್ಭ­ದಲ್ಲಿ ಬೇರೆ ಯಾವುದೇ ಪದವಿ ಅಧ್ಯ­ಯನ ನಡೆಸಬಾರದು ಎನ್ನುವ ನಿಯಮವಿದೆ. ಇದು ಎಲ್ಲ ವಿಶ್ವವಿದ್ಯಾಲಯಗಳಿಗೂ ಅನ್ವಯವಾ­ಗು­ತ್ತದೆ. ಆದರೂ ಇವರು ಒಂದೇ ವಿಶ್ವವಿದ್ಯಾಲ­ಯ­ದಲ್ಲಿ ಏಕಕಾಲದಲ್ಲಿ ಪಿಎಚ್‌.ಡಿ ಮತ್ತು ಸ್ನಾತ­ಕೋ­ತ್ತರ ಪದವಿಗಳನ್ನು ಒಂದೇ ಬಾರಿಗೆ ಪಡೆದಿ­ದ್ದಾರೆ. ಅರ್ಜಿಯ ಜೊತೆಗೆ ಇವರು ಸಂಬಂಧಿಸಿದ ಪದವಿಗಳ ಅಂಕಪಟ್ಟಿಯನ್ನು ನೀಡಿಲ್ಲ. ಅರ್ಜಿಗಳ ಪರಿಶೀಲನೆ ಹಂತದಲ್ಲಿ ಈ ಅರ್ಜಿಯನ್ನು ತಿರಸ್ಕರಿ­ಸ­ಬೇಕಾಗಿದ್ದರೂ ಇವರಿಗೆ ಸಂದರ್ಶನಕ್ಕೆ ಅರ್ಹತೆ ನೀಡಿದ್ದೇ ಅಲ್ಲದೆ ಅವರನ್ನೇ ನೇಮಕ ಮಾಡಲಾಗಿದೆ.’

‘ಸಹ ಪ್ರಾಧ್ಯಾಪಕ ಹುದ್ದೆಗೆ ಅಗತ್ಯವಾದ ಸೇವಾ ಪ್ರಮಾಣ ಪತ್ರವನ್ನು ಅರ್ಜಿಯೊಂದಿಗೆ ನೀಡುವುದು ಕಡ್ಡಾಯ. ಆದರೆ ಇವರು ತಮ್ಮ ಅರ್ಜಿಯ ಜೊತೆಗೆ ಸೇವಾ ಅನುಭವ ಪ್ರಮಾಣ ಪತ್ರವನ್ನೂ ಸಲ್ಲಿಸಿಲ್ಲ. ಆದರೂ ನೇಮಕಗೊಂಡಿ­ದ್ದಾರೆ. ಸಕ್ಷಮ ಪ್ರಾಧಿಕಾರದ ಮೂಲಕ ಅರ್ಜಿ ಸಲ್ಲಿಸಿಲ್ಲ. ತಾವು ಈ ಹಿಂದೆ ಸೇವೆ ಸಲ್ಲಿಸುತ್ತಿದ್ದ ಸಂಸ್ಥೆಯಿಂದ ನಿರಾಕ್ಷೇಪಣಾ ಪತ್ರ ಸಲ್ಲಿಸುವುದು ಕಡ್ಡಾಯ. ಅದನ್ನೂ ಸಲ್ಲಿಸಿಲ್ಲ’ ಎಂದು ರಾಜ್ಯಪಾಲ­ರಿಗೆ ಸಲ್ಲಿಸಲಾದ ದೂರಿನಲ್ಲಿ ಆರೋಪಿಸಲಾಗಿದೆ.

ಪದವಿ ಪವಾಡ: ‘ವೆಂಕಟರಮಣ ಅವರು ಏಕಕಾಲಕ್ಕೆ ಪಿಎಚ್‌.ಡಿ ಮತ್ತು ಎಂ.ಎ ಪದವಿ­ಯನ್ನು ಒಟ್ಟಿಗೇ ತೆಗೆದುಕೊಂಡಿದ್ದರೆ, ವೇದಾಂತ ನಿಕಾಯದ ಸಹ ಪ್ರಾಧ್ಯಾಪಕರಾಗಿ ಆಯ್ಕೆಯಾ­ಗಿರುವ ವೀರನಾರಾಯಣ ಪಾಂಡುರಂಗಿ ಅವರು ಎಂ.ಎ. ಪದವಿ ಪಡೆಯುವುದಕ್ಕೆ ಮೊದಲೇ ಪಿಎಚ್‌ಡಿ ಪಡೆದುಕೊಂಡಿದ್ದಾರೆ’. ‘ವೇದಾಂತ ಸಹ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಹಾಕುವ ಅಭ್ಯರ್ಥಿಗಳು ವೇದಾಂತ ವಿಷ­ಯ­ದಲ್ಲಿ ಮೊದಲು ಎಂಎ ಮಾಡಿ ನಂತರ ಅದೇ ವಿಷಯದಲ್ಲಿ ಪಿಎಚ್‌.ಡಿ ಮಾಡಿರಬೇಕು ಎಂದು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು’.

‘ಆದರೆ ವೀರನಾರಾಯಣ ಪಾಂಡುರಂಗಿ ಅವರು ದ್ವೈತ ವೇದಾಂತದಲ್ಲಿ ಎಂ.ಎ ಪಡೆಯು­ವು­ದಕ್ಕಿಂತ ಮೊದಲೇ ಪಿಎಚ್‌.ಡಿ ಪಡೆದಿದ್ದಾರೆ. ಇದಕ್ಕೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು  ಅರ್ಜಿ­ಯೊಂದಿಗೆ ಸಲ್ಲಿಸಿದ್ದಾರೆ. ಇವರೂ ಕೂಡ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದಲ್ಲಿ ದ್ವೈತ ವೇದಾಂತ­ದಲ್ಲಿ ಪಿಎಚ್‌.ಡಿ ಪಡೆಯುವಾಗಲೇ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ವಿದ್ವದುತ್ತಮಾ (ಎಂ.ಎ) ಪದವಿ­ಯನ್ನೂ ಪಡೆದುಕೊಂಡಿದ್ದಾರೆ. ಇವರೂ ಕೂಡ ಸೇವಾ ಪ್ರಮಾಣ ಪತ್ರ ಸಲ್ಲಿಸಿಲ್ಲ. ಎಲ್ಲ ಹುದ್ದೆಗೂ ಒಂದೇ ಅರ್ಜಿ ಸಲ್ಲಿಸಿದ್ದಾರೆ. ಸಕ್ಷಮ ಪ್ರಾಧಿಕಾರದ ಮೂಲಕ ಅರ್ಜಿ ಸಲ್ಲಿಸಿಲ್ಲ’.

‘ಹಿಂದೆ ತಾವು ಸೇವೆ ಸಲ್ಲಿಸುತ್ತಿದ್ದ ಸಂಸ್ಥೆ­ಯಿಂದ ನಿರಾಕ್ಷೇಪಣ ಪತ್ರ ಪಡೆಯದಿದ್ದರೂ ಈ ಹಿಂದೆ ಅವರು ಪಡೆಯುತ್ತಿದ್ದ ವೇತನಕ್ಕೆ ಸಮಾನ­ವಾದ ವೇತನವನ್ನು ಸಂಸ್ಕೃತ ವಿಶ್ವವಿದ್ಯಾಲಯ ನೀಡಿದೆ. ಸಹ ಪ್ರಾಧ್ಯಾಪಕರ ಹುದ್ದೆಗೆ ₨ 37,400 ಮೂಲ ವೇತನ ನಿಗದಿ ಮಾಡಲಾ­ಗಿತ್ತು. ಆದರೆ ವೀರನಾರಾಯಣ ಅವರು ಈ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಮೂಲ ವೇತನ ₨ 53 ಸಾವಿರ ಪಡೆಯುತ್ತಿದ್ದರು ಎಂದು ಅಷ್ಟೇ ಮೂಲ ವೇತನ ಮತ್ತು ಇತರ ಭತ್ಯೆಗಳನ್ನು ನೀಡಲಾಗಿದೆ. ಇದಕ್ಕೆ ಸಿಂಡಿಕೇಟ್‌ ಸಭೆಯಲ್ಲಿ ಘಟನೋತ್ತರ ಅನುಮೋದನೆ ನೀಡಲಾಗಿದೆ.’

‘ಈ ಇಬ್ಬರ ನೇಮಕಾತಿ ಸಂದರ್ಭದಲ್ಲಿ ಈಗಿನ ಹಂಗಾಮಿ ಕುಲಪತಿ ಶ್ರೀನಿವಾಸ ವರಖೇಡಿ ಅವರು ಅಭ್ಯರ್ಥಿಗಳ ಅರ್ಜಿ ಪರಿಶೀಲನಾ ಸಮಿತಿ ಅಧ್ಯಕ್ಷರಾ­ಗಿ­ದ್ದರು, ಆಯ್ಕೆ ಸಮಿತಿ ಸದಸ್ಯರಾ­ಗಿ­ದ್ದರು ಹಾಗೂ ನೇಮ­ಕಾತಿಗಳಿಗೆ ಅನುಮೋದನೆ ನೀಡುವ ಸಿಂಡಿಕೇಟ್‌ ಸದ­ಸ್ಯರೂ ಆಗಿದ್ದರು’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹೀಗೆ ಆಯ್ಕೆಯಾದ ಇಬ್ಬರೂ ಬ್ರಾಹ್ಮಣ ಸಮುದಾಯದ ಒಂದೇ ಉಪ ಪಂಗಡಕ್ಕೆ ಸೇರಿದವರು. ಇದೇ ಉಪ ಪಂಗಡಕ್ಕೆ ಸೇರಿದ ಇನ್ನೊಬ್ಬರನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿತ್ತು. ಆದರೆ ಒಂದೇ ಉಪ ಪಂಗಡಕ್ಕೆ ಸೇರಿದ ಮೂವ­ರನ್ನು ತೆಗೆದುಕೊಂಡರೆ ಆಕ್ಷೇಪ ವ್ಯಕ್ತವಾಗ­ಬಹುದು ಎಂಬ ಕಾರಣದಿಂದ ಅವರ ನೇಮಕ ಮಾಡಿಕೊಳ್ಳಲಿಲ್ಲ. ಈ ನೇಮಕಾತಿಗಳನ್ನೂ ಕೆಲವರು ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಿ­ದ್ದಾರೆ.’ ಎಂದೂ ರಾಜ್ಯಪಾಲರಿಗೆ ಸಲ್ಲಿಸಲಾದ ದೂರಿನಲ್ಲಿ ತಿಳಿಸಲಾಗಿದೆ.
(ಮುಂದುವರಿಯುವುದು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.