ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವೆ ಪ್ರೊ.ಚಂದ್ರಮಾ ಕಣಗಲಿ ಅವರನ್ನು ಸಂಗೀತ ವಿಶ್ವವಿದ್ಯಾಲಯಕ್ಕೆ ವರ್ಗಾವಣೆ ಮಾಡಿ ಹೊರಡಿಸಿದ್ದ ಸರ್ಕಾರದ ಆದೇಶವನ್ನು ಇಲ್ಲಿನ ಹೈಕೋರ್ಟ್ ಪೀಠ ಶುಕ್ರವಾರ ಅನೂರ್ಜಿತಗೊಳಿಸಿದ್ದರಿಂದ ಶನಿವಾರ ತಮಗೆ ಕುಲಸಚಿವ ಸ್ಥಾನದ ಅಧಿಕಾರ ವಹಿಸಿಕೊಡುವಂತೆ ಕುಲಪತಿ ಪ್ರೊ.ಎಚ್.ಬಿ.ವಾಲೀಕಾರ ಹಾಗೂ ಸದ್ಯದ ಕುಲಸಚಿವ ಪ್ರೊ.ವೈ.ಎಸ್.ಸಿದ್ದೇಗೌಡರಿಗೆ ಸ್ವತಃ ಪ್ರೊ. ಚಂದ್ರಮಾ ಮನವಿ ಸಲ್ಲಿಸಿದರು. ಜತೆಗೆ ಕೆಲ ಕಾಲ ಒಂದೇ ಕಚೇರಿಯಲ್ಲಿ ಇಬ್ಬರು ಕುಲಸಚಿವರು ಕುಳಿತು ಕಾರ್ಯನಿರ್ವಹಿಸಿದ ಪ್ರಸಂಗವೂ ನಡೆಯಿತು.
ಡಾ. ವಾಲೀಕಾರ ಅವರಿಗೆಬರೆದಿರುವ ಪತ್ರದಲ್ಲಿ, ‘ಕಣಗಲಿ ಅವರು ಕವಿವಿ ಕುಲಸಚಿವರಾಗಿಯೇ ಮುಂದುವರಿಯಬೇಕು ಹಾಗೂ ಪ್ರೊ.ಸಿದ್ದೇಗೌಡ ಮತ್ತೆ ಮೈಸೂರು ವಿವಿಗೆ ವಾಪಸ್ಸಾಗಬೇಕು ಎಂದು ಧಾರವಾಡ ಹೈಕೋರ್ಟ್ ಆದೇಶಿಸಿದೆ. ಆದ್ದರಿಂದ ಕವಿವಿ ಕುಲಸಚಿವ ಸ್ಥಾನದ ಅಧಿಕಾರವನ್ನು ನನಗೆ ವಹಿಸಿಕೊಡಬೇಕು’ ಎಂದು ಪ್ರೊ. ಚಂದ್ರಮಾ ಮನವಿ ಮಾಡಿದ್ದಾರೆ.
ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದ ಪ್ರೊ. ಸಿದ್ದೇಗೌಡ, ‘ನನಗೆ ಹೈಕೋರ್ಟ್ನಿಂದಾಗಲಿ ಅಥವಾ ಸರ್ಕಾರದಿಂದಾಗಲಿ ಸ್ಪಷ್ಟ ಆದೇಶ ಬಂದಿಲ್ಲ. ನ್ಯಾಯಾಲಯದಿಂದ ಸ್ಪಷ್ಟ ಆದೇಶ ಬಂದಲ್ಲಿ ಅದನ್ನು ಗೌರವಿಸಿ ನಾನು ಈಗಲೇ ಅಧಿಕಾರ ಹಸ್ತಾಂತರಿಸುತ್ತೇನೆ. ಹೈಕೋರ್ಟ್ ತನ್ನ ಆದೇಶವನ್ನು ಸರ್ಕಾರಕ್ಕೆ ಮಾಡಿದೆಯೋ ಅಥವಾ ವಿಶ್ವವಿದ್ಯಾಲಯಕ್ಕೆ ಮಾಡಿದೆಯೋ ಎಂಬುದನ್ನು ನೋಡಬೇಕು. ಸರ್ಕಾರವೇ ನನ್ನನ್ನು ಇಲ್ಲಿಗೆ ನೇಮಕ ಮಾಡಿದೆ. ಮತ್ತೆ ಎಲ್ಲಿಗೆ ವರ್ಗಾವಣೆ ಮಾಡುತ್ತದೆಯೋ ಅಲ್ಲಿಗೆ ನಾನು ಸಂತೋಷದಿಂದ ಹೋಗುತ್ತೇನೆ. ಇದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಹಾಕುವುದಿಲ್ಲ’ ಎಂದರು.
ಘಟನೆ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರೊ.ಚಂದ್ರಮಾ, ‘ಹೈಕೋರ್ಟ್ ಸರ್ಕಾರದ ಆದೇಶವನ್ನು ಅನೂರ್ಜಿತಗೊಳಿಸಿರುವುದರಿಂದ ಈ ವಿ.ವಿಗೆ ನಾನೇ ಕುಲಸಚಿವೆ. ಒಬ್ಬ ಕುಲಸಚಿವರನ್ನು ವರ್ಗಾವಣೆ ಮಾಡುವ ಅಧಿಕಾರ ಕೇವಲ ರಾಜ್ಯಪಾಲರಿಗಿದೆ. ಈ ಹಿಂದೆ ನನ್ನನ್ನು ವರ್ಗಾವಣೆ ಮಾಡಿದ್ದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೆ. ಸದ್ಯ ನನಗೆ ನ್ಯಾಯ ದೊರಕಿದ್ದು, ಕುಲಸಚಿವ ಸ್ಥಾನದ ಅಧಿಕಾರ ಹಸ್ತಾಂತರಿಸಲೇಬೇಕು. ಈಗಿರುವ ಕುಲಸಚಿವರಿಗೆ ನಾನೇನು ಅಧಿಕಾರ ವಹಿಸಿಕೊಟ್ಟಿಲ್ಲ.
ಅವರಾಗಿಯೇ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿಂದೆ ಕುಲಸಚಿವೆಯಾಗಿದ್ದಾಗ ಯಾವ ಗೊಂದಲಗಳೂ ಇರಲಿಲ್ಲ. ಸರ್ಕಾರ ಯಾವಾಗ ನನ್ನನ್ನು ಸಂಗೀತ ವಿ.ವಿಗೆ ವರ್ಗಾವಣೆ ಮಾಡಿತೋ ಆಗ ಗೊಂದಲಗಳು ಹುಟ್ಟಿಕೊಂಡವು. ವಾಹನದ ವಿಷಯಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಮೂರನೇ ವ್ಯಕ್ತಿಯಿಂದ ಆರ್‌ಟಿಐ ಅರ್ಜಿ ಹಾಕಿಸಿ ಇಷ್ಟೆಲ್ಲ ಗೊಂದಲಗಳಿಗೆ ಎಡೆ ಮಾಡಿಕೊಟ್ಟಿದೆ’ ಎಂದರು.
ಸ್ಪಷ್ಟ ಆದೇಶಕ್ಕೆ ಕಾದರು
ಸ್ಪಷ್ಟ ಆದೇಶಕ್ಕಾಗಿ ಇಬ್ಬರು ಕುಲಸಚಿವರು ಒಂದೇ ಕೊಠಡಿಯಲ್ಲಿ ಕಾದು ಕುಳಿತಿದ್ದರು. ಸರ್ಕಾರದ ಸ್ಪಷ್ಟ ಆದೇಶ ಬರುತ್ತದೆ ಎಂಬ ನಿರೀಕ್ಷೆಯಿಂದ ಪ್ರೊ.ಸಿದ್ದೇಗೌಡ ಎಲ್ಲಾ ಕಡತಗಳನ್ನು ಪ್ರೊ.ಚಂದ್ರಮಾ ಅವರಿದ್ದ ಮೇಜಿನ ಮೇಲೆ ಇರಿಸಿದ್ದರು. ಅದೂ ಅಲ್ಲದೇ ಕುಲಸಚಿವ ಸ್ಥಾನ ತ್ಯಜಿಸಿ ಹೋಗಲು ತಮ್ಮ ಎಲ್ಲಾ ವಸ್ತುಗಳನ್ನು ಅವರು ಸಿದ್ಧಪಡಿಸಿಟ್ಟುಕೊಂಡಿದ್ದರು. ಆದರೆ ನ್ಯಾಯಾಲಯಕ್ಕೆ ರಜೆ ಇದ್ದ ಕಾರಣ ಆದೇಶ ವಿ.ವಿಗೆ ತಲುಪಲಿಲ್ಲ. ಜತೆಗೆ ಅಕ್ಟೋಬರ್ 6ರವರೆಗೂ ಹೈಕೋರ್ಟ್‌ಗೆ ರಜೆ ಇರುವುದರಿಂದ ಅಲ್ಲಿಯವರೆಗೂ ಪ್ರೊ. ಸಿದ್ದೇಗೌಡರೇ ಮುಂದುವರಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.