ADVERTISEMENT

ಒಂದೇ ವ್ಯಕ್ತಿ ಎರಡು ಕಡೆ ಕೆಲಸದ ಪವಾಡ!

ರವೀಂದ್ರ ಭಟ್ಟ
Published 13 ನವೆಂಬರ್ 2014, 19:30 IST
Last Updated 13 ನವೆಂಬರ್ 2014, 19:30 IST

ಬೆಂಗಳೂರು: ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ವಿವಿಧ ಹುದ್ದೆಗಳಿಗೆ ನಡೆದ ನೇಮಕಾತಿಯಲ್ಲಿ  ಕೆಲವರು ನಕಲಿ ಸೇವಾ ಅನುಭವ ಪತ್ರ­ಗಳನ್ನು ನೀಡಿದ್ದಾರೆ ಎಂಬ ಆರೋಪವಿದೆ.

‘ಸಹಾಯಕ ನಿರ್ದೇಶಕರಾಗಿ ನೇಮಕಗೊಂಡ ಬಿ. ಗೋವಿಂದ ಅವರು 2005ರ ಜೂನ್‌ ತಿಂಗಳಿನಿಂದ 2010ರ ಜೂನ್‌ 5ರವರೆಗೆ ತಾವು ತ.ಸು. ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ­ಯಲ್ಲಿ ಕಾರ್ಯ­ನಿರ್ವಹಿಸಿದ್ದಾಗಿ ಪ್ರಮಾಣ ಪತ್ರ ನೀಡಿದ್ದಾರೆ. ಆದರೆ, ಇವರು 2006ರ ಏಪ್ರಿಲ್‌ 18ರಿಂದ 2010ರ ಅ.17ರವರೆಗೆ ಮೈಸೂರು ವಿಶ್ವವಿದ್ಯಾಲ­ಯದ ಸಂಸ್ಕೃತ ಸ್ನಾತಕೋತ್ತರ ವಿಭಾಗದಲ್ಲಿ ಹಿರಿಯ ಸಂಶೋಧನಾ ವಿದ್ಯಾರ್ಥಿಯಾಗಿ ಕಾರ್ಯ­­ನಿರ್ವಹಿಸಿದ್ದಾರೆ. ಈ ಅವಧಿ­ಯಲ್ಲಿ ಅವರು ಸಂಶೋಧನಾ ವಿದ್ಯಾರ್ಥಿಗಳ ಹಾಜರಾತಿ­ಯ­ಲ್ಲಿಯೂ ಸಹಿ ಮಾಡಿದ್ದಾರೆ’ ಎಂದು ಸಂಸ್ಕೃತ ವಿವಿ ಬಗ್ಗೆ ರಾಜ್ಯಪಾಲರಿಗೆ ಸಲ್ಲಕೆಯಾದ ದೂರಿನಲ್ಲಿ ದಾಖಲೆ ಸಹಿತ ಆಪಾದನೆ ಮಾಡಲಾಗಿದೆ.

‘ಗೋವಿಂದ ಅವರಿಗೆ ವೃಂದ ಮತ್ತು ನೇಮಕಾತಿ ನಿಯಮದ ಪ್ರಕಾರ ಕನಿಷ್ಠ 5 ವರ್ಷದ ಸಂಶೋಧನಾ ಅಥವಾ ಪ್ರಕಟಣಾ ಅನುಭವ
ಇಲ್ಲ. ಇವರ ನೇಮಕದ ವಿರುದ್ಧ ಸಿದ್ದಪ್ಪಾಜಿ ಎಂಬುವ­ವರು ಧಾರವಾಡದ ಹೈಕೋರ್ಟ್ ಪೀಠದಲ್ಲಿ ದಾವೆ ಹೂಡಿದ್ದಾರೆ’ ಎಂಬ ಮಾಹಿತಿಯನ್ನೂ ನೀಡಲಾಗಿದೆ.

‘ಶಾಖಾಧಿಕಾರಿ ಹುದ್ದೆಗೆ ಎಂ. ಶಿವಮೂರ್ತಿ ಅವರನ್ನು ವಯೋಮಿತಿ ನಿಯಮವನ್ನು ಉಲ್ಲಂಘಿಸಿ ನೇಮಕ ಮಾಡಲಾಗಿದೆ’ ಎಂದು ದೂರಲಾಗಿದೆ. ‘2012ರ ಜುಲೈ 16ರಂದು ಪ್ರಕಟಿಸ­ಲಾದ ನೇಮಕಾತಿ ಅಧಿಸೂಚನೆ ಪ್ರಕಾರ ಈ ಹುದ್ದೆಗೆ
ಗರಿಷ್ಠ ವಯೋಮಿತಿ 35 ವರ್ಷ. ಆದರೆ ಆಯ್ಕೆಯಾದ ಶಿವ­ಮೂರ್ತಿ ಅವರ ವಯಸ್ಸು 42. ಅಧಿಸೂಚನೆಯ ಪ್ರಕಾರ ಈ ಹುದ್ದೆಗೆ ಯಾವುದಾದರೂ ಅಂಗೀಕೃತ ವಿಶ್ವವಿದ್ಯಾಲ­ಯದಿಂದ ಪದವಿ ಪಡೆದಿ­ರುವುದು ಕಡ್ಡಾಯ. ಆದರೆ ಶಿವ­ಮೂರ್ತಿ ಅವರು ಯಾವುದೇ  ಪದವಿ ಪಡೆದಿಲ್ಲ’ ಎಂದೂ ಆರೋಪಿಸಲಾಗಿದೆ.

‘ಇವರು ತಮ್ಮ ಅರ್ಜಿಯೊಂದಿಗೆ ಮೂರು ಸೇವಾ ಪ್ರಮಾಣ ಪತ್ರವನ್ನು ನೀಡಿದ್ದಾರೆ. ಈ ಮೂರೂ ಪ್ರಮಾಣ ಪತ್ರಗಳಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ಏಕಕಾಲಕ್ಕೆ ಕೆಲಸ ಮಾಡಿರುವ ವಿವರ­ಗಳು ಇವೆ. ಇವರು ಸೇವಾ ಪ್ರಮಾಣ ಪತ್ರ ಪಡೆದ ಸಂಸ್ಥೆ ಅಸ್ತಿತ್ವದಲ್ಲಿಯೇ ಇಲ್ಲ’ ಎಂದು ದೂರಿನಲ್ಲಿ ಹೇಳಲಾಗಿದೆ. ಇವರ ನೇಮಕಾತಿಯನ್ನು ಪ್ರಶ್ನಿಸಿ ಶೈಲಶ್ರೀ ಎನ್ನುವವರು ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದಾರೆ.
‘ಗ್ರಂಥಾಲಯ ಸಹಾಯಕರ ಹುದ್ದೆಗೆ ಪ್ರಶಾಂತ ದಶರಥ ರಡವಟ್ಟಿ ಎಂಬ ಅಭ್ಯರ್ಥಿ ಮಾತ್ರ ಸಂದರ್ಶನಕ್ಕೆ ಹಾಜರಾ­ಗಿದ್ದರು. ಅವರನ್ನೇ ನೇಮಕ ಮಾಡ­ಲಾಗಿದೆ. ನಿಯಮದ ಪ್ರಕಾರ ಸಂದ­ರ್ಶನಕ್ಕೆ ಒಬ್ಬ ಅಭ್ಯರ್ಥಿ ಮಾತ್ರ ಹಾಜರಾದರೆ ಸಂದರ್ಶನ­ವನ್ನು ನಡೆಸ­ಬಾರದು’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ವೃಂದ ಮತ್ತು ನೇಮಕಾತಿ ಪರಿ­ನಿಯಮ ರಚನೆಯಾಗದೆ ಯೋಜನಾ ಸಹಾಯಕರ ನೇಮಕ ಮಾಡಿಕೊಳ್ಳ­ಲಾಗಿದೆ. ಏಕಕಾಲದಲ್ಲಿ ಎಂ.ಎ. ಮತ್ತು ವಿದ್ವದುತ್ತಮಾ ಎಂಬ ಎರಡು ಪದವಿ­ಯನ್ನು ಪಡೆದಿರುವ ಪ್ರಮಾಣ ಪತ್ರವನ್ನು ಸಲ್ಲಿಸಿದವರಿಗೂ ಉದ್ಯೋಗ ನೀಡಲಾಗಿದೆ. ಹೀಗೆ ಎರಡೂ ಪದವಿಗಳನ್ನು ಒಟ್ಟಿಗೇ ಪಡೆಯಲು ಸಾಧ್ಯವಿಲ್ಲ’ ಎಂದೂ ತಿಳಿಸಲಾಗಿದೆ.

‘ಯೋಜನಾ ಸಹಾಯಕರನ್ನು ನೇಮಕಾತಿ ಮಾಡಿಕೊಂಡ 2 ವರ್ಷದ ನಂತರ ಈ ಹುದ್ದೆಗಳಿಗೆ ವೃಂದ ಮತ್ತು ನೇಮಕಾತಿ ಪರಿನಿಯಮ ರಚಿಸಲು ಸಿಂಡಿಕೇಟ್‌ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. 10 ಮಂದಿ ಯೋಜನಾ ಸಹಾಯಕ­ರನ್ನು ವೃಂದ ಮತ್ತು ನೇಮಕಾತಿ ಪರಿನಿಯಮವಿಲ್ಲದೆ ನೇಮಕಾತಿ ಮಾಡಿಕೊಳ್ಳಲಾಗಿದೆ. ಇದು ಅಕ್ರಮ ಮತ್ತು ಕಾನೂನು ಬಾಹಿರ’ ಎಂದು ರಾಜ್ಯಪಾಲರಿಗೆ ಸಲ್ಲಿಸಲಾದ ದೂರಿನಲ್ಲಿ ಹೇಳಲಾಗಿದೆ.

‘ಈ ಹುದ್ದೆಗಳಿಗೆ ನೇಮಕವಾದ ಕೆಲವರು ನಕಲಿ ಆದಾಯ ಪ್ರಮಾಣ ಪತ್ರವನ್ನೂ ನೀಡಿದ್ದಾರೆ. 10 ವರ್ಷಗಳಿಂದ ತಿಂಗಳಿಗೆ ₨ 20 ಸಾವಿರ ವೇತನ ಪಡೆಯುತ್ತಿದ್ದವರೂ ಕೂಡ ವಾರ್ಷಿಕ 11 ಸಾವಿರ ಆದಾಯ ಇರು­ವು­ದಾಗಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ’ ಎಂದೂ ದೂರಲಾಗಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ನೀಡಲಾಗಿದೆ.

‘ಕೆಲವು ಹುದ್ದೆಗಳಿಗೆ ಕುಲಸಚಿವರೇ ಅಧಿಸೂಚನೆಯನ್ನು ಹೊರಡಿಸಬೇಕು. ಆದರೆ ಉಪ ಕುಲಸಚಿವರು ಅಧಿ­ಸೂಚನೆ ಹೊರಡಿಸಿದ್ದಾರೆ. ಇದರಿಂದಾಗಿ ಈ ಅಧಿಸೂಚನೆಯೇ ಕಾನೂನು ಬಾಹಿರ. ಆದರೂ ಈ ಅಧಿಸೂಚನೆಯ ಪ್ರಕಾರ ನೇಮಕಾತಿ ಪ್ರಕ್ರಿಯೆ ನಡೆಸಿ ನೇಮಕಾತಿ ಮಾಡಿಕೊಳ್ಳಲಾಗಿದೆ’ ಎಂಬ ದೂರು ಇದೆ.
(ಮುಂದುವರಿಯುವುದು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.