ಬೆಂಗಳೂರು: ರಾಜ್ಯದಲ್ಲಿ 125 ವರ್ಷಗಳ ಹಿಂದೆಯೇ ನಶಿಸಿ ಹೋಗಿದೆ ಎಂದು ಭಾವಿಸಲಾಗಿದ್ದ ‘ಮಧುಕಾ ಬೌರ್ಡಿಲ್ಲೊನಿ’ ಮತ್ತು ‘ಮಧುಕಾ ಇನ್‌ಸಿಗ್ನಿಸ್’ ಔಷಧೀಯ ವೃಕ್ಷಗಳನ್ನು ಅರಣ್ಯ ಇಲಾಖೆ ಪತ್ತೆ ಮಾಡಿದೆ. ಮೊದಲನೆ ಪ್ರಭೇದ ಹೊನ್ನಾವರ ತಾಲ್ಲೂಕಿನಲ್ಲಿ ಪತ್ತೆಯಾದರೆ, ಎರಡನೆ ಪ್ರಭೇದ ಕುಮಾರಧಾರಾ ನದಿ ಕಣಿವೆಯಲ್ಲಿ ಕಂಡುಬಂದಿದೆ.
ಅರಣ್ಯ ಸಚಿವ ಬಿ.ರಮಾನಾಥ ರೈ ಅವರ ಅಧ್ಯಕ್ಷತೆಯಲ್ಲಿ ಗುರುವಾರ ವಿಧಾನಸೌಧದಲ್ಲಿ ಕರ್ನಾಟಕ ರಾಜ್ಯ ಔಷಧೀಯ ಸಸ್ಯಗಳ ಪ್ರಾಧಿಕಾರದ ಆಡಳಿತ ಮಂಡಳಿ ಸಭೆ ನಡೆಯಿತು. ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಯು.ವಿ.ಸಿಂಗ್ ಅವರು, ಮಧುಕಾ ಪ್ರಭೇದದ ಸಸ್ಯಸಂಕುಲ ಪತ್ತೆಯಾಗಿರುವ ವಿಷಯಸಭೆಗೆ ತಿಳಿಸಿದರು.
‘ಮಧುಕಾ ಬೌರ್ಡಿಲ್ಲೊನಿ’ ಮತ್ತು ‘ಮಧುಕಾ ಇನ್‌ಸಿಗ್ನಿಸ್’ಗಳು ಪಶ್ಚಿಮ ಘಟ್ಟದಲ್ಲಿ ಮಾತ್ರ ಬೆಳೆಯುತ್ತವೆ. ಈ ಎರಡೂ ಪ್ರಭೇದಗಳು ದೇಶದಲ್ಲಿ ನಶಿಸಿಹೋಗಿವೆ ಎಂದು ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಷನ್ ಆಫ್ ನೇಚರ್ (ಐಯುಸಿಎನ್) 125 ವರ್ಷಗಳ ಹಿಂದೆ ವರದಿ ಮಾಡಿತ್ತು. ಈ ಸಸ್ಯ ಸಂಕುಲ ದೇಶದಲ್ಲಿ ಉಳಿದಿಲ್ಲ ಎಂದೇ ತಿಳಿಯಲಾಗಿತ್ತು. ಆದರೆ, ವಿವಿಧ ಮೂಲಗಳಿಂದ ದೊರೆತ ಮಾಹಿತಿ ಆಧರಿಸಿ ಎರಡೂ ಪ್ರಭೇದದ ಕೆಲವು ವೃಕ್ಷ ಮತ್ತು ಸಸಿಗಳನ್ನು ಪತ್ತೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸಾಮಾನ್ಯವಾಗಿ ಕಾಣಸಿಗುವ ಹಿಪ್ಪೆಮರ (ಮಧುಕಾ ಲಾಂಗಿಫೋಲಿಯಾ) ಕೂಡ ಈ ಸಸ್ಯಗಳ ಜಾತಿಗೆ ಸೇರುತ್ತದೆ. ಆದರೆ, ‘ಮಧುಕಾ ಬೌರ್ಡಿಲ್ಲೊನಿ’ ಮತ್ತು ‘ಮಧುಕಾ ಇನ್‌ಸಿಗ್ನಿಸ್’ ಹೆಚ್ಚು ಔಷಧೀಯ ಗುಣಗಳುಳ್ಳ ಸಸ್ಯಗಳು. ಚರ್ಮರೋಗ, ಮಧುಮೇಹ ನಿಯಂತ್ರಣ, ಗಾಯಗಳನ್ನು ಗುಣಪಡಿಸುವುದಕ್ಕೆ ಈ ಸಸ್ಯಗಳಿಂದ ಔಷಧಿ ತಯಾರಿಸಬಹುದು.
ಮಧುಕಾ ಬೌರ್ಡಿಲ್ಲೊನಿಯ ಬೀಜಗಳಿಂದ ತಯಾರಿಸಿದ ಎಣ್ಣೆಯನ್ನು ಬಳಸಿದರೆ ತಲೆಗೂದಲು ದಟ್ಟವಾಗಿ ಬೆಳೆಯುತ್ತದೆ ಎಂದು ವಿವರಿಸಿದರು.
13 ಮರ, ಸಸಿ ಪತ್ತೆ: ಹೊನ್ನಾವರದ ಹಿರೇಗುತ್ತಿ ಅರಣ್ಯ ವಲಯದ ಕುಂಟಿಗನಿ ಮತ್ತು ಮಣಿಗದ್ದೆ ಅರಣ್ಯಗಳಲ್ಲಿ ಮಧುಕಾ ಬೌರ್ಡಿಲ್ಲೊನಿ ಪ್ರಭೇದದ ಎರಡು ಮರಗಳಿವೆ ಎಂಬ ಮಾಹಿತಿಯನ್ನು ಭಾರತೀಯ ವಿಜ್ಞಾನ ಸಂಸ್ಥೆಯ ಮೂಲಗಳು ನೀಡಿದ್ದವು. ಈ ಮಾಹಿತಿ ಆಧರಿಸಿ ಅಲ್ಲಿನ ಅರಣ್ಯದಲ್ಲಿ ಶೋಧ ನಡೆಸಲಾಯಿತು. ಆಗ ಒಟ್ಟು 13 ಮರ ಮತ್ತು ಸಸಿಗಳು ಪತ್ತೆಯಾಗಿವೆ ಎಂದು ಯು.ವಿ.ಸಿಂಗ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಸ್ಥಳೀಯ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮರಗಳನ್ನು ಗುರುತಿಸಿದ್ದಾರೆ. ಅವುಗಳ ಬೀಜಗಳನ್ನೂ ಸಂಗ್ರಹಿಸಿ ತಂದಿದ್ದಾರೆ. ಈ ಮರಗಳು ಮತ್ತು ಸಸಿಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ನದಿ ಕಣಿವೆಯಲ್ಲಿ ಶೋಧ: ಮಧುಕಾ ಇನ್‌ಸಿಗ್ನಿಸ್ ಜಾತಿ ಸಸ್ಯ ಕೂಡ ದೇಶದಲ್ಲಿ ಸಂಪೂರ್ಣ ನಾಶವಾಗಿದೆ ಎಂದು ಅಂದಾಜು ಮಾಡಲಾಗಿತ್ತು. ಆದರೆ, ಈ ಜಾತಿಯ ಎರಡು ಸಸ್ಯಗಳು ಕೇರಳದ ಕಾಸರಗೋಡು ಜಿಲ್ಲೆಯ ಅರಣ್ಯದಲ್ಲಿ ಕಳೆದ ವರ್ಷ ಪತ್ತೆಯಾಗಿದ್ದವು. ರಾಜ್ಯದ ಕುಮಾರಧಾರ ನದಿ ಕಣಿವೆಯ ಅರಣ್ಯದಲ್ಲಿ ಮಧುಕಾ ಇನ್‌ಸಿಗ್ನಿಸ್ ವೃಕ್ಷಗಳಿವೆ ಎಂಬ ಮಾಹಿತಿ ಲಭ್ಯ ವಾಗಿತ್ತು. ಅದನ್ನು ಆಧರಿಸಿ ಸ್ಥಳಕ್ಕೆ ಹೋದಾಗ, ಕೆಲವು ಮರಗಳು ಪತ್ತೆಯಾಗಿವೆ ಎಂದರು.
33 ಪ್ರಭೇದಗಳ ಸಮೀಕ್ಷೆ: ರಾಜ್ಯದಲ್ಲಿ ಅಳಿವಿನ ಅಂಚು ತಲುಪಿರುವ 33 ಪ್ರಮುಖ ಔಷಧೀಯ ಸಸ್ಯ, ವೃಕ್ಷ ಮತ್ತು ಬಳ್ಳಿಗಳ ಕುರಿತು ಸಮೀಕ್ಷೆ ಕೈಗೆತ್ತಿಕೊಳ್ಳಲಾಗಿದೆ. ಅವು ಯಾವ ಪ್ರದೇಶದಲ್ಲಿ ಇವೆ ಎಂಬುದನ್ನು ಪತ್ತೆ ಮಾಡಲಾಗುವುದು. ನಂತರ ಈ ಅತ್ಯಮೂಲ್ಯ ಮೂಲಿಕೆ ಪ್ರಭೇದಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.